ಬೆಂಗಳೂರು: ಕೆ.ಆರ್.ಪುರ ಬಳಿಯ ಟಿನ್ ಫ್ಯಾಕ್ಟರಿ ಬಳಿಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ಕಾಯ್ದಿರಿಸುವ ಯೋಜನೆಯನ್ನು ಬಿಎಂಟಿಸಿ ಮತ್ತು ಬಿಬಿಎಂಪಿ ತರಾತುರಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಹೊರ ವರ್ತುಲ ರಸ್ತೆಯ ವಾಹನ ಸವಾರರನ್ನು ರಕ್ಕಸನಂತೆ ಕಾಡುತ್ತಿರುವ ಸಂಚಾರ ದಟ್ಟಣೆಗೆ, ಪೂರ್ವ ತಯಾರಿ ಇಲ್ಲದ ಈ ಯೋಜನೆ ಪರಿಹಾರ ಒದಗಿಸುವುದೇ ಎಂಬ ಕುತೂಹಲ ಹಾಗೂ ಶಂಕೆ ಈ ರಸ್ತೆಯನ್ನು ಬಳಸುವ ಸವಾರರಲ್ಲಿ ಮನೆ ಮಾಡಿವೆ.
ಹೊರ ವರ್ತುಲ ರಸ್ತೆ ನಿರ್ಮಾಣದ ಯೋಜನೆ ಇನ್ನೂ ಆಲೋಚನೆಯ ಹಂತದಲ್ಲಿದ್ದ ಸಂದರ್ಭದಲ್ಲೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ತಜ್ಞ ಎಂ.ಎಸ್.ವಿ. ರಾವ್ ಅವರು ಈ ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆ ತ್ವರಿತ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್) ಜಾರಿಗೆ ತರಬೇಕು ಮತ್ತು ಬೆಂಗಳೂರು ಸುತ್ತ ವೃತ್ತಾಕಾರವಾಗಿ ರೈಲು ಸಂಚಾರ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ್ದರು.
ಮಿಶ್ರ ಸಂಚಾರ ವ್ಯವಸ್ಥೆಯಲ್ಲಿ ಚಲಿಸುವ ಬಸ್‌ಗಳಿಗೆ ಹೋಲಿಸಿದರೆ ಬಿಆರ್‌ಟಿಎಸ್‌ನಲ್ಲಿ ದುಪ್ಪಟ್ಟು ಪ್ರಯಾಣಿಕರನ್ನು ಸಾಗಿಸಬಹುದು ಎಂದು ಅವರು ವಿವರಿಸಿದ್ದರು. 1985ರ ನವೆಂಬರ್‌ನಲ್ಲಿ ಅವರು ನೀಡಿದ್ದ ವರದಿಯನ್ನು ಮೂಲೆಗೆ ಬಿಸಾಡಿದ್ದ ಸರ್ಕಾರ, ಈಗ 34 ವರ್ಷಗಳ ಬಳಿಕ ನವೆಂಬರ್ 1ರಿಂದ ಜಾರಿಗೆ ಬರುವಂತೆ ಆ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜಧಾನಿ
ಯಲ್ಲಿ ನಡೆಸಿದ ಮೊದಲ ನಗರ ಪ್ರದಕ್ಷಿಣೆ ವೇಳೆ (ಮತ್ತೆ ನಗರ ಪ್ರದಕ್ಷಿಣೆ ನಡೆಸಿಲ್ಲ) ಇದೇ ರಸ್ತೆಯ ಮೂಲಕ ಹಾದುಹೋಗಿದ್ದರು. ಐ.ಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಅಂದು ಸಭೆ ನಡೆಸಿದ್ದರು. ಐ.ಟಿ ಕಂಪನಿಗಳು ನೀಡಿದ್ದ ಮನವಿಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಾಣ ಮಾಡಬೇಕು ಎಂಬುದೇ ಮೊದಲ ಬೇಡಿಕೆಯಾಗಿತ್ತು.
ಇದಾದ ಕೆಲ ದಿನಗಳಲ್ಲೇ ಪ್ರತ್ಯೇಕ ಬಸ್ ಪಥದ ಪ್ರಾಯೋಗಿಕ ಯೋಜನೆಗೆ ಸರ್ಕಾರ ಇದೇ ರಸ್ತೆಯನ್ನು ಆಯ್ಕೆ ಮಾಡಿದೆ. ಆದರೆ, ಇದಕ್ಕಾಗಿ ಯಾವುದೇ ಅಧ್ಯಯನವನ್ನು ನಡೆಸಿಲ್ಲ, ಸಮಗ್ರ ಯೋಜನಾ ವರದಿಯನ್ನೂ ತಯಾರಿಸಿಲ್ಲ. ನವೆಂಬರ್ 1ರಿಂದ ಪ್ರತ್ಯೇಕ ಪಥದಲ್ಲಿ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ಏಕಾಏಕಿ ಘೋಷಣೆ ಮಾಡಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಏನೇನು ಸಿದ್ಧತೆಗಳು ಆಗಿವೆ ಎಂದು ಪ್ರಶ್ನಿಸಿದರೆ, ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.
ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿಯಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ಮಾರ್ಗದ ಆರಂಭದಲ್ಲಿ ಸುಮಾರು ಒಂದು ಕಿಲೋ ಮೀಟರ್‌ನಲ್ಲಿ ಮತ್ತು ಮಾರತ್‌ಹಳ್ಳಿ ಸಮೀಪ ಇದೇ ಮಾರ್ಗದಲ್ಲಿ ಒಂದೆರಡು ಕಿಲೋ ಮೀಟರ್‌ನಷ್ಟು ದೂರ ಕಬ್ಬಿಣದ ತಡೆ ಕಂಬಗಳನ್ನು (ಬೊಲ್ಲಾರ್ಡ್ಸ್) ಅಳವಡಿಸ
ಲಾಗಿದೆ. ಇದನ್ನು ಗಮನಿಸಿದರೆ ನವೆಂಬರ್ 1ರ ವೇಳೆಗೆ ಬೊಲ್ಲಾರ್ಡ್ಸ್ ಅಳವಡಿಕೆ ಕೆಲಸವನ್ನು ಬಿಬಿಎಂಪಿ ಮುಗಿಸುವ ಯಾವುದೇ ಲಕ್ಷಣಗಳು ಇಲ್ಲ.
ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಪೈಕಿ ಬಿಎಂಟಿಸಿಯೇ ಶೇ 50ರಷ್ಟು ಜನರನ್ನು ಕರೆದೊಯ್ಯುತ್ತಿದೆ. ಈ ಮಾರ್ಗದಲ್ಲಿ ಬಸ್‌ಗಳಿಗೇ ಪ್ರತ್ಯೇಕ ಪಥ ನಿರ್ಮಾಣ ಮಾಡಲು ಮುಂದಾಗಿರುವ ಕ್ರಮವನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಆದರೆ, ಸಿದ್ಧತೆ ಮಾಡಿಕೊಳ್ಳದೆ ಅನುಷ್ಠಾನಕ್ಕೆ ಹೊರಟಿರುವ ಹಿನ್ನೆಲೆಯಲ್ಲಿ ಯೋಜನೆ ಯಶಸ್ವಿ ಆಗುವುದೇ ಎಂಬ ಅನುಮಾನ ಜನರನ್ನು ಕಾಡುತ್ತಿದೆ.
‘ಪ್ರಾಯೋಗಿಕವಾಗಿ ಈ ಯೋಜನೆ ಯನ್ನು ಕೈಗೆತ್ತಿಕೊಂಡಿದ್ದೇವೆ. ಇದರಲ್ಲಿ ಸಫಲ ಅಥವಾ ವೈಫಲ್ಯದ ಪ್ರಶ್ನೆ ಉದ್ಬವಿಸುವುದಿಲ್ಲ’ ಎನ್ನುವುದು ಬಿಎಂಟಿಸಿ ಹಿರಿಯ ಅಧಿಕಾರಿಗಳ ವಾದ.
‘ಖಾಸಗಿ ಬಸ್‌ಗಳಿಗೂ ಅವಕಾಶ ಕೊಡಿ’
12 ಸೀಟ್‌ಗಿಂತ ಹೆಚ್ಚು ಸಾಮರ್ಥ್ಯ ಇರುವ ಖಾಸಗಿ ಬಸ್‌ಗಳಿಗೂ ಈ ಪಥದಲ್ಲಿ ಸಂಚಾರ ಮಾಡಲು ಅನುಮತಿ ನೀಡುವಂತೆ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಒ) ಮನವಿ ಮಾಡಿದೆ.
ಒಆರ್‌ಆರ್ ಆಸುಪಾಸಿನಲ್ಲಿ 300ಕ್ಕೂ ಹೆಚ್ಚು ಐ.ಟಿ ಕಂಪನಿಗಳಿದ್ದು, ಇಲ್ಲಿಗೆ ಬರುವ ಉದ್ಯೋಗಿಗಳಿಗೆ ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನ ಐ.ಟಿ ಕಂಪನಿಗಳ ವರಮಾನದಲ್ಲಿ ಶೇ 32ರಷ್ಟು ಈ ಕಂಪನಿಗಳಿಂದಲೇ ಬರುತ್ತಿದೆ. ಹೀಗಾಗಿ ಖಾಸಗಿ ಬಸ್‌ಗಳಿಗೂ ಈ ಪಥದಲ್ಲಿ ಸಂಚರಿಸಲು ಅವಕಾಶ ಬೇಕು ಎಂಬುದು ಅವರ ಮನವಿ. ಆದರೆ, ಈ ಮನವಿಗೆ ಬಿಎಂಟಿಸಿ ಸುತಾರಾಂ ಒಪ್ಪಿಲ್ಲ.
ಬೊಲ್ಲಾರ್ಡ್ಸ್ ಅಲಭ್ಯ: ವಿಳಂಬ ಸಾಧ್ಯತೆ
ಟೆಂಡರ್ ಕರೆಯದೆಯೇ ನೇರವಾಗಿ 20 ಸಾವಿರಕ್ಕೂ ಹೆಚ್ಚು ಬೊಲ್ಲಾರ್ಡ್‌ಗಳನ್ನು ಬಿಬಿಎಂಪಿ ಖರೀದಿ ಮಾಡಲು ಹೊರಟಿದೆ. ಆದರೂ ಅವುಗಳ ಲಭ್ಯತೆ ಇಲ್ಲದಿರುವ ಕಾರಣ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ.
ತಯಾರಿಕಾ ಕಂಪನಿಯಿಂದ ನೇರವಾಗಿ ಪ್ರತಿ ಬೊಲಾರ್ಡ್ಸ್‌ಗೆ ₹ 2,500 ನೀಡಿ ಬಿಬಿಎಂಪಿ ಖರೀದಿ ಮಾಡುತ್ತಿದೆ. ‘ಬೊಲ್ಲಾರ್ಡ್ಸ್ ತಯಾರಿಕೆ ಮಾಡುವ ಒಂದೇ ಕಂಪನಿ ಇರುವ ಕಾರಣ ಟೆಂಟರ್ ಕರೆದಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಯಾರಿ ವಿಳಂಬವಾಗುತ್ತಿರುವ ಕಾರಣ ನವೆಂಬರ್ 1ರೊಳಗೆ ಎರಡೂ ಕಡೆ ಬೊಲ್ಲಾರ್ಡ್ಸ್ ಅಳವಡಿಕೆ ಸಾಧ್ಯವಾಗುವುದಿಲ್ಲ. ಒಂದು ಮಾರ್ಗಕ್ಕಾದರೂ ಅಳವಡಿಸಲು ಪ್ರಯತ್ನಿಸಲಾಗುವುದು’ ಎಂದರು.
‘ಸದ್ಯ 5 ಕಿ.ಮೀ. ದೂರದವರೆಗೆ ಬೊಲ್ಲಾರ್ಡ್ಸ್ ಅಳವಡಿಸಲಾಗಿದೆ. ಪಾದಚಾರಿ ಮಾರ್ಗ ದುರಸ್ತಿ, ರಸ್ತೆಗೆ ಚಾಚಿಕೊಂಡಿದ್ದ ಮರಗಳ ರೆಂಬೆಗಳನ್ನು ತೆರವುಗೊಳಿಸಲಾಗಿದೆ. ಉಳಿದ ಕೆಲಸಗಳು ವೇಗವಾಗಿ ನಡೆಯುತ್ತಿವೆ’ ಎಂದು ಹೇಳಿದರು.
ಸರ್ವಿಸ್ ರಸ್ತೆಗೆ ದಾರಿ ಯಾವುದು?
ಎರಡೂ ಮಾರ್ಗಗಳ ಎಡಭಾಗದ ಒಂದು ಪಥವನ್ನು ಬಸ್‌ಗಳಿಗೆ ಕಾಯ್ದಿರಿಸಲಾಗುತ್ತಿದೆ. ಮಧ್ಯದ ತಲಾ ಎರಡು ಪಥಗಳಲ್ಲಿ ಖಾಸಗಿ ವಾಹನಗಳು ಸಂಚರಿಸಲಿವೆ. ಆದರೆ, ಆ ವಾಹನಗಳು ಸರ್ವಿಸ್ ರಸ್ತೆಗೆ ಇಳಿಯಬೇಕೆಂದರೆ ತೀವ್ರ ಕಸರತ್ತು ನಡೆಸಬೇಕಾಗುತ್ತದೆ.
ಸರ್ವಿಸ್ ರಸ್ತೆಗೆ ಇಳಿಯಲು ಸದ್ಯ ಅಲ್ಲಲ್ಲಿ ಅವಕಾಶ ಇದೆ. ಪ್ರಸ್ತುತ ಸರ್ವಿಸ್ ರಸ್ತೆಯನ್ನು ಸೇರುವ ವಾಹನಗಳು ಎಡ ಭಾಗದಲ್ಲಿ ಬಂದು ಪ್ರಯಾಸ ಇಲ್ಲದೆ, ಬೇರೆ ವಾಹನಗಳಿಗೆ ಅಡಚಣೆಯನ್ನೂ ಮಾಡದೆ ಸೇರಿಕೊಳ್ಳುತ್ತಿವೆ.
ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್ ಪಥವನ್ನು ದಾಟಿಕೊಂಡು ಬರಬೇಕಾಗುತ್ತದೆ. ಆಗ ಪ್ರತ್ಯೇಕ ಪಥದಲ್ಲಿ ಸಾಗುವ ಬಸ್‌ಗಳನ್ನು ನಿಲ್ಲಿಸುವುದು ಅನಿವಾರ್ಯ. ಮಧ್ಯದ ಎರಡು ಪಥದಲ್ಲಿ ಖಾಸಗಿ ವಾಹನಗಳು ಮತ್ತೆ ಅಲ್ಲಲ್ಲಿ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಈ ವಾಹನಗಳು ಪಥ ಬದಲಿಸಲು ಸಿಗ್ನಲ್ ವ್ಯವಸ್ಥೆ ಇರುತ್ತದೋ, ಇಲ್ಲವೋ ಎಂಬುದರ ಬಗ್ಗೆಯೂ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ‘ಜಂಕ್ಷನ್‌ಗಳಲ್ಲಿ ಮಾತ್ರ ಖಾಸಗಿ ವಾಹನಗಳು ಸರ್ವಿಸ್ ರಸ್ತೆಗೆ ಇಳಿಯಬೇಕು’ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಇಲ್ಲದ ಪಥದಲ್ಲಿ ಪರೀಕ್ಷಾರ್ಥ ಸಂಚಾರ
ಪ್ರತ್ಯೇಕ ಪಥದಲ್ಲಿ ಬಿಎಂಟಿಸಿ ಬಸ್‌ಗಳ ಪರೀಕ್ಷಾರ್ಥ ಸಂಚಾರವನ್ನು ಭಾನುವಾರ ಆರಂಭಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿದ್ದರು.
ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿ ಜಂಕ್ಷನ್ ತನಕ ಒಂದು ಸುತ್ತು ಹಾಕಿದ ‘ಪ್ರಜಾವಾಣಿ’ಗೆ ಬಿಎಂಟಿಸಿ ಬಸ್‌ಗಳು ಎರಡು ಕಡೆ ಬಿಟ್ಟರೆ ಬೇರೆಲ್ಲೂ ಪ್ರತ್ಯೇಕ ಪಥದಲ್ಲಿ ಸಂಚರಿಸುತ್ತಿರುವುದು ಕಾಣಿಸಲಿಲ್ಲ. ಬಿಎಂಟಿಸಿ ಚಾಲಕರನ್ನು ಕೇಳಿದರೆ ‘ಇಲ್ಲದ ಪ್ರತ್ಯೇಕ ಪಥದಲ್ಲಿ ಸಂಚರಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು. ಪ್ರತ್ಯೇಕ ಪಥ ಇರುವ ಕಡೆಯೂ ಕೆಲ ಬಸ್‌ಗಳು ರಸ್ತೆ ಮಧ್ಯದಲ್ಲೇ ಸಂಚರಿಸಿದವು.
ಪ್ರತ್ಯೇಕ ಪಥದಲ್ಲಿ ಬಸ್ ಚಾಲನೆ ಮಾಡಲಿರುವ ಚಾಲಕರಿಗೆ ಬಿಎಂಟಿಸಿ ತರಬೇತಿ ನೀಡುತ್ತಿದೆ.
***
ಎಲಿವೇಟೆಡ್ ರಸ್ತೆ ನಿರ್ಮಾಣದ ಬದಲು ಬಸ್‌ಗಳಿಗೆ ಪ್ರತ್ಯೇಕ ಪಥ ಕಾಯ್ದಿರಿಸುತ್ತಿರುವುದು ಒಳ್ಳೆಯದು. ಸಂಚಾರ ಸಮಸ್ಯೆ ತಕ್ಕಮಟ್ಟಿಗಾದರೂ ಪರಿಹಾರವಾಗಲಿದೆ.
- ಶ್ರೀನಿವಾಸ ಅಲವಿಲ್ಲಿ, ಸಿಟಿಜನ್ ಫಾರ್ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.