ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ’ಎ ++’ ಶ್ರೇಣಿ ದೊರೆತಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಯಕರ ಎಸ್.ಎಂ., ತಿಳಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯವು 2018ರಿಂದ 2022ರವರೆಗಿನ ಮೌಲ್ಯಮಾಪನ ಅವಧಿಯ ಸ್ವಯಂ ಅಧ್ಯಯನ ವರದಿಯನ್ನು ನ್ಯಾಕ್‌ಗೆ ಸಲ್ಲಿಸಿತ್ತು. ದೇಶದ ಕೆಲವೇ ಶೈಕ್ಷಣಿಕ ಸಂಸ್ಥೆಗಳು ನಾಲ್ಕನೇ ಆವೃತ್ತಿಗೆ ಮಂಡಳಿಯಿಂದ ಮಾನ್ಯತೆ ಪಡೆದಿವೆ. ಇವುಗಳಲ್ಲಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ನಂತರ ದೇಶದಲ್ಲಿ ಮೊದಲ ಬಾರಿಗೆ ಈ ಸಾಧನೆಗೈದಿರುವುದು ಬೆಂಗಳೂರು ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ವಿಷಯ. ಈ ಮೂಲಕ ವಿಶ್ವವಿದ್ಯಾಲಯವು ಸಂಪೂರ್ಣ ಸ್ವಾಯತ್ತತೆಯನ್ನು ಪಡೆಯುವ ಅವಕಾಶ ಪಡೆದುಕೊಂಡಿದೆ’ ಎಂದು ತಿಳಿಸಿದರು.
‘ನ್ಯಾಕ್ ನಿಗದಿಪಡಿಸಿದ ಮಾನದಂಡಗಳಾದ ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆ, ಸಾಂಸ್ಥಿಕ ಮೌಲ್ಯಗಳಲ್ಲಿ ವಿಶ್ವವಿದ್ಯಾಲಯವು ಗರಿಷ್ಠ 4 ಅಂಕಗಳಲ್ಲಿ 3.75 ಅಂಕಗಳನ್ನು ಪಡೆದುಕೊಂಡಿದೆ. ಐದು ವರ್ಷಗಳವರೆಗೆ ಈ ಮಾನ್ಯತೆ ಇರಲಿದೆ. ನ್ಯಾಕ್ ತಂಡವು ಮೇ 17ರಿಂದ 19ರವರೆಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿನ ಸೌಕರ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು’ ಎಂದು ತಿಳಿಸಿದರು.
‘ಕಳೆದ ಐದು ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳ ಮೂಲಕ ವಿವಿಯು ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ 3.16 ಸಿಜಿಪಿಎಯೊಂದಿಗೆ ನ್ಯಾಕ್‌ನಿಂದ ಎ ಶ್ರೇಣಿ ಪಡೆದಿತ್ತು. ಹಲವು ಆಯಾಮಗಳಲ್ಲಿ ವಿವಿಯು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡ ಪರಿಣಾಮ ಎ ಪ್ಲಸ್ ಪ್ಲಸ್ ಶ್ರೇಣಿ ಪಡೆಯಲು ಸಾಧ್ಯವಾಗಿದೆ’ ಎಂದರು.
‘ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೊಸ ಕೋರ್ಸ್‌ಗಳ ಪರಿಚಯ, ಪ್ರತಿ ಅಧ್ಯಾಪಕರಿಂದ ಹತ್ತಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳು, ಹೆಚ್ಚಿನ ಸಂಶೋಧನಾ ನಿಧಿ, ಅನೇಕ ಸಲಹಾ ಯೋಜನೆಗಳು, ಅತ್ಯುತ್ತಮ ಉಲ್ಲೇಖ ಸೂಚ್ಯಂಕ, 53 ಪೇಟೆಂಟ್‌ಗಳು, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಬೆಂಬಲ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಇ–ಆಡಳಿತದಂತಹ ಕಾರ್ಯಕ್ರಮಗಳ ಮೂಲಕ ಈ ಶೈಕ್ಷಣಿಕ ಉತ್ಕೃಷ್ಟತೆ ಸಿಕ್ಕಿದೆ’ ಎಂದು ವಿವರಿಸಿದರು.
‘ಸಂಶೋಧನೆ ಆವಿಷ್ಕಾರಗಳಿಗೆ ಹೆಚ್ಚಿನ ಧನ ಸಹಾಯ
’ ‘ಎ++ ಶ್ರೇಣಿಯೊಂದಿಗೆ ವಿವಿಯು ದೇಶ–ವಿದೇಶಗಳಲ್ಲಿ ಕ್ಯಾಂಪಸ್ ಸ್ಥಾಪಿಸುವ ಸ್ವಾಯತ್ತತೆಯನ್ನು ಪಡೆದುಕೊಂಡಿದೆ. ಹೈಬ್ರಿಡ್ ಹಾಗೂ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಬಹುದು. ಅಲ್ಲದೇ ಶ್ರೇಷ್ಠ ಸಂಸ್ಥೆಯ ಸ್ಥಾನಮಾನ ಪಡೆಯಲು ಪ್ರಯತ್ನಿಸುವುದರ ಮೂಲಕ ಸಂಶೋಧನೆ ಹಾಗೂ ಆವಿಷ್ಕಾರಗಳಿಗೆ ಹೆಚ್ಚು ಧನ ಸಹಾಯವನ್ನು ಪಡೆಯಬಹುದು’ ಎಂದು ಕುಲಪತಿ ಜಯಕರ ಎಸ್.ಎಂ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.