ADVERTISEMENT

‘ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಸ್ವಾಗತಾರ್ಹ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 20:05 IST
Last Updated 3 ಜುಲೈ 2021, 20:05 IST
ಅಕ್ಕಯ್‌ ಪದ್ಮಶಾಲಿ
ಅಕ್ಕಯ್‌ ಪದ್ಮಶಾಲಿ   

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯವು ಎಲ್ಲ ಕೋರ್ಸ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಿರುವುದು ಸ್ವಾಗತಾರ್ಹ’ ಎಂದು ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಕಾರ್ಯಕರ್ತೆ, ‘ಒಂದೆಡೆ’ ಸಂಘಟನೆ ಸ್ಥಾಪಕಿ ಅಕ್ಕಯ್‌ ಪದ್ಮಶಾಲಿ ಸಂತಸ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಹಮ್ಮಿಕೊಂಡಿದ್ದ ‘ವಿಚಾರ ಕಲರವ’ ಕಾರ್ಯಕ್ರಮದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಅವರು ಮಾತನಾಡಿದರು.

‘ಸುಮಾರು 130 ವರ್ಷಗಳ ನಂತರ ದೆಹಲಿಯ ಹೈಕೋರ್ಟ್‌ ನಮ್ಮ ಸಮುದಾಯದ ಪರ ತೀರ್ಪು ನೀಡಿತ್ತು. ಅದೇ ರೀತಿ, ಸಂವಿಧಾನದಡಿ ಎಲ್ಲರಂತೆ ಲೈಂಗಿಕ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿವೆ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ 2014ರಲ್ಲಿ ನೀಡುವ ಮೂಲಕ ನಮ್ಮ ಸಮುದಾಯಕ್ಕೆ ಗೌರವ ತಂದುಕೊಟ್ಟಿತ್ತು’ ಎಂದರು.

ADVERTISEMENT

‘ನಾವು ಯಾವುದೇ ಅಪರಾಧವನ್ನು ಮಾಡದಿದ್ದರೂ ನಮ್ಮನ್ನು ಅಪರಾಧಿಗಳ ರೀತಿ ನೋಡಲಾಗುತ್ತಿದೆ. ಇದು ಸರಿಯಲ್ಲ.ನಮ್ಮ ಜೀವನದ ಅನುಭವವೇ ನಮಗೆ ಎಲ್ಲವನ್ನೂ ಕಲಿಸಿದೆ. ವಿಶ್ವವಿದ್ಯಾಲಯದ ಇಂತಹ ಕಾರ್ಯಕ್ರಮದಲ್ಲಿ ನಮ್ಮನ್ನು ಆಹ್ವಾನಿಸಿದ್ದು ಹೆಮ್ಮೆ ತಂದಿದೆ’ ಎಂದರು.

ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ, ‘ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ವ್ಯಕ್ತಿಗಳಲ್ಲಿ ಕೊರತೆಗಳನ್ನು ಹುಡುಕುವ ಬದಲು ಒಬ್ಬರಿಗೊಬ್ಬರು ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಲಿಂಗ ಅಸಮಾನತೆ ಒಂದು ಸಮಾಜದ ಅವನತಿಗೆ ದಾರಿಯಾಗುತ್ತದೆ. ಇದಕ್ಕೆ ಯಾರೂ ಅವಕಾಶ ಕೊಡಬಾರದು’ ಎಂದರು.

ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.