ಬೆಂಗಳೂರು: ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಕರೆಸಿಕೊಳ್ಳುವ ಬೆಂಗಳೂರು ಈಗ ಏರೋಸ್ಪೇಸ್ ಹಬ್ ಆಗುವತ್ತ ದಾಪುಗಾಲಿಡುತ್ತಿದೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರಕ್ಕೆ ಕೊಡುಗೆ ನೀಡಲು ಏರೋಸ್ಪೇಸ್ ಪಾರ್ಕ್ ಮತ್ತು ಏರೋಸ್ಪೇಸ್ ವಿಶೇಷ ಆರ್ಥಿಕ ವಲಯ (ಎಸ್‌ಇಜಡ್) ಸಜ್ಜಾಗುತ್ತಿವೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್–ವೇ ಗೆ ಸ್ವಲ್ಪ ದೂರದಲ್ಲೇ ಈ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಂಡಿದೆ. ಕಾಡುಮೇಡಿನಂತಿದ್ದ ಭೂಮಿ ಜೊತೆಗೆ ರೈತರ ಕೃಷಿ ಜಮೀನನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹದಿನೈದು ವರ್ಷಗಳ ಹಿಂದೆ ಸ್ವಾಧೀನ ಮಾಡಿಕೊಂಡಿದೆ. ಒಟ್ಟು 2,989 ಎಕರೆ ಪ್ರದೇಶವನ್ನು ಮೂರು ಕ್ಲಸ್ಟರ್‌ಗಳಾಗಿ ವಿಭಾಗಿಸಲಾಗಿದೆ.
ಇದರಲ್ಲಿ ಏರೋಸ್ಪೇಸ್ ಕ್ಷೇತ್ರಕ್ಕೆ 984 ಎಕರೆ ಮೀಸಲಿಡಲಾಗಿದೆ. ಈ ಬೆಳವಣಿಗೆಯು ಜಾಗತಿಕ ಏರೋಸ್ಪೇಸ್ ದಿಗ್ಗಜ ಸಂಸ್ಥೆಗಳನ್ನು ಭಾರತೀಯ ಮಾರುಕಟ್ಟೆಗೆ ಸೆಳೆಯುವಂತೆ ಮಾಡಿದೆ. ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ 75ರಷ್ಟು ಖಾಸಗಿ ವಿಮಾನಯಾನ ಸಂಸ್ಥೆಗಳ ಮೇಲೆ ಅವಲಂಬಿತವಾಗಿದ್ದರೂ, ವೇಗವಾಗಿ ಬೆಳೆಯುತ್ತಿರುವ ವಲಯ ಎಂದು ಗುರುತಿಸಲ್ಪಟ್ಟಿದೆ.
ರಕ್ಷಣೆ ಮತ್ತು ನಾಗರಿಕ ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹಲವು ರಾಜ್ಯಗಳು ಮುಂದಾಗುತ್ತಿವೆ. ಇಂತಹ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಅದರ ಭಾಗವಾಗಿಯೇ ಏರೋಸ್ಪೇಸ್ ಎಸ್‌ಇಜಡ್ ಅಸ್ಥಿತ್ವಕ್ಕೆ ಬಂದಿದೆ.
ವಿಶ್ವದ ಹಲವು ಏರೋಸ್ಪೇಸ್ ಉದ್ದಿಮೆಗಳು ಬೆಂಗಳೂರಿನ ಏರೋಸ್ಪೇಸ್ ಹಬ್‌ನಲ್ಲಿ ಇರಲು ಬಯಸುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಅನೇಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಸಹಭಾಗಿತ್ವ ಮಾಡಿಕೊಳ್ಳಲು ಆರಂಭಿಸಿವೆ.
‘ಸದ್ಯ ರಕ್ಷಣಾ ಮತ್ತು ಏರೋಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 2 ಸಾವಿರಕ್ಕೂ ಅಧಿಕ ತಯಾರಿಕಾ ಘಟಕಗಳಿವೆ. ದೇಶದ ಒಟ್ಟು ರಫ್ತಿನ ಪೈಕಿ ಕರ್ನಾಟಕದಿಂದ ಶೇ 65ರಷ್ಟು ಹಾಗೂ ಎಲ್ಲ ರೀತಿಯ ಹೆಲಿಕಾಪ್ಟರ್ ಮತ್ತು ವಿಮಾನಗಳ ಉತ್ಪಾದನೆಯ ಪೈಕಿ ಶೇ 67 ರಷ್ಟು ರಾಜ್ಯದಲ್ಲಾಗುತ್ತಿದೆ. ಎಚ್ಎಎಲ್ ₹48,000 ಕೋಟಿ ಮೊತ್ತದಲ್ಲಿ 83 ತೇಜಸ್ ಯುದ್ಧ ವಿಮಾನಗಳನ್ನು ತಯಾರಿಸಲು ಭಾರತೀಯ ವಾಯುಸೇನೆ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ರಾಜ್ಯದಲ್ಲಿ ಹೆಚ್ಚು ಹೂಡಿಕೆ ಹರಿದು ಬರುತ್ತದೆ ಮತ್ತು ಉದ್ಯೋಗಗಳ ಸೃಷ್ಟಿಯಾಗಲಿದೆ‘ ಎನ್ನುತ್ತಾರೆ ಇಂಡೊ–ಜರ್ಮನ್ ಕಂಪನಿಯಾದ ಎಡಿಡಿ ಎಂಜಿನಿಯರ್ಸ್ ಇಂಡಿಯಾ (ಪ್ರೈವೇಟ್) ಲಿಮಿಟೆಡ್‌ನ ನಿರ್ದೇಶಕ ಗಿರೀಶ್ ಲಿಂಗಣ್ಣ.
‘101 ರಕ್ಷಣಾ ಸಾಧನಗಳ ಆಮದನ್ನು ಸರ್ಕಾರ ನಿಷೇಧಿಸಿರುವುದರಿಂದ ದೇಶೀಯ ಉತ್ಪಾದನೆಗೆ ಉತ್ತೇಜನ ದೊರೆತಂತಾಗಿದೆ. ಸರ್ಕಾರದ ಪ್ರಕಾರವೇ ಇಲ್ಲಿ ₹14,720 ಕೋಟಿ ಹೂಡಿಕೆಯಾಗಿದ್ದು, 10 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಮಾನ ನಿಲ್ದಾಣ ಬಳಿಯ ಹೊಸ ಏರೋಸ್ಪೇಸ್ ಪಾರ್ಕ್ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಈಗಾಗಲೇ ಸಾಫ್ಟ್‌ವೇರ್ ಕಂಪನಿಗಳ ತವರು ಎನಿಸಿಕೊಂಡಿರುವ ಬೆಂಗಳೂರಿಗೆ ಮತ್ತೊಂದು ಗರಿ ಎಂಬಂತೆ ಐ.ಟಿ ಟೆಕ್ ಪಾರ್ಕ್ ಕೂಡ ಈ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿದೆ. ಇದರೊಂದಿಗೆ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಎಲೆಕ್ಟ್ರಾನಿಕ್ಸ್, ಆಹಾರ, ಔಷಧಕ್ಕೆ ಸಂಬಂಧಿಸಿದ ಘಟಕಗಳೂ ಬರಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನಿರೀಕ್ಷೆಯಂತೆ ಬಂಡವಾಳ ಹೂಡಿಕೆಯಾದರೆ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಲಿದೆ. ಬೆಂಗಳೂರಿನ ಬೆಳವಣಿಗೆ ಇನ್ನೊಂದು ಮಗ್ಗುಲಿಗೆ ಹೊರಳುವ ಸಾಧ್ಯತೆ ಇದೆ.
15 ವರ್ಷಗಳ ಹಿಂದೆ ಸರ್ಕಾರ ಎಕರೆಗೆ ₹55 ಲಕ್ಷ ಕೊಟ್ಟಿದೆ. ಸ್ವಾಧೀನವಾಗದೆ ಉಳಿದಿರುವ ಜಮೀನೀಗ ಮೂರ್ನಾಲ್ಕು ಕೋಟಿ ಬೆಲೆ ಬಾಳುತ್ತದೆ. ಬಂದ ಪರಿಹಾರವನ್ನು ಬುದ್ದಿವಂತರು ಉಳಿಸಿಕೊಂಡಿದ್ದಾರೆ, ಬಹುತೇಕರು ಖರ್ಚು ಮಾಡಿ ಈಗ ಬರಿಗೈ ಆಗಿದ್ದಾರೆ
- ಚಿನ್ನಪ್ಪ, ಸ್ಥಳೀಯ ನಿವಾಸಿ
***
ಮೊದಲು ಸೌದೆ ಮಾರಾಟ ಮಾಡಿ ಜೀವನ ನಡೆಸಬೇಕಿತ್ತು. ಬಂದ ಪರಿಹಾರದ ಹಣದಲ್ಲಿ ಹಲವರು ಮನೆ ಕಟ್ಟಿಕೊಂಡಿದ್ದಾರೆ. ಕೆಲವರು ಮೋಜು ಮಾಡಿ ಹಣ ಮುಗಿಸಿದ್ದಾರೆ. ಬಾಡಿಗೆ ಮನೆಗಳಿಗೆ ಬೇಡಿಕೆ ಶುರು ಆಗಿದೆ. ಆದರೆ, ಕಟ್ಟಿಕೊಡಲು ಹಣವೇ ಇಲ್ಲ
- ಆನಂದ್, ಸ್ಥಳೀಯ ನಿವಾಸಿ
***
ಕೈಗಾರಿಕೆಗಳು ಆರಂಭವಾದ ಬಳಿಕ ಮೈಲನಹಳ್ಳಿ, ಸಿಂಗೇನಹಳ್ಳಿ, ಬೇಗೂರು, ಭಟ್ರಮಾರೇನಹಳ್ಳಿ ಹೀಗೆ ಹಲವು ಕಡೆ ಬಾಡಿಗೆ ಮನೆಗಳಿಗೆ ಬೇಡಿಕೆ ಜಾಸ್ತಿ ಆಗಿದೆ. ಸಣ್ಣ ಸಣ್ಣ ಮನೆಗಳನ್ನು ಮಾಡಿ ಕಾರ್ಮಿಕರಿಗೆ ಬಾಡಿಗೆಗೆ ಕೊಡುತ್ತಿದ್ದಾರೆ
- ರಾಮಚಂದ್ರಪ್ಪ, ಸ್ಥಳೀಯ ನಿವಾಸಿ
***
ಮೊದಲು ಹುಲ್ಲಿನ ಮನೆಯಲ್ಲಿ ಇದ್ದವರು ಆರ್‌ಸಿಸಿ ಮನೆ ಮಾಡಿಕೊಂಡರು. ಕೆಲವರು ಬೇರೆ ಕಡೆ ಜಮೀನು ತೆಗೆದುಕೊಂಡಿದ್ದಾರೆ. ಇನ್ನೂ ಹಲವರು ಅನಗತ್ಯವಾಗಿ ಹಣ ಖರ್ಚು ಮಾಡಿ ಬದುಕನ್ನು ಹಾಳು ಮಾಡಿಕೊಂಡಿದ್ದಾರೆ
- ಮುನಿಪಿಳ್ಳಪ್ಪ, ಸ್ಥಳೀಯ ನಿವಾಸಿ
***
ಈಗಾಗಲೇ ಆರಂಭ ಆಗಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಅಕ್ಕ–ಪಕ್ಕದ ಊರಿನ ಹೆಸರು ಕೇಳಿದ ಕೂಡಲೇ ವಾಪಸ್ ಕಳುಹಿಸುತ್ತಾರೆ
- ಅರವಿಂದ್, ಉದ್ಯೋಗಾಕಾಂಕ್ಷಿ
***
ವಸತಿ ಉದ್ದೇಶಕ್ಕೆ 250 ಎಕರೆ
‘ಕೈಗಾರಿಕಾ ಪ್ರದೇಶ ಪರಿಪೂರ್ಣವಾಗಿ ಆರಂಭವಾದ ನಂತರ ಇಲ್ಲಿನ ಉದ್ಯೋಗಿಗಳಿಗೆ ಅನುಕೂಲ ಆಗುವಂತೆ ವಸತಿ ಉದ್ದೇಶಕ್ಕೆ 250 ಎಕರೆ ಮೀಸಲಿರಿಸಲಾಗಿದೆ’ ಎಂದು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎನ್.ಶಿವಶಂಕರ್ ತಿಳಿಸಿದರು.
ಇಲ್ಲಿ ವಸತಿ ಕಟ್ಟಡಗಳ ನಿರ್ಮಾಣಕ್ಕೆ ಪ್ರೆಸ್ಟೀಜ್, ಬ್ರಿಗೇಡ್ ರೀತಿಯ ಹಲವು ಕಂಪನಿಗಳು ಜಾಗ ಪಡೆದುಕೊಂಡಿವೆ ಎಂದರು.
‘ಏರೋಸ್ಪೇಸ್ ಎಸ್‌ಇಝಡ್ ಹೊರತುಪಡಿಸಿ ಬೇರೆಲ್ಲಾ ಕ್ಲಸ್ಟರ್‌ಗಳಲ್ಲಿ ಭೂಮಿ ಹಂಚಿಕೆಯಾಗಿದೆ. ಶೆಲ್, ಬೋಯಿಂಗ್ ಇಂಡಿಯಾ, ವಿಪ್ರೊ, ಥಾಯಿಸನ್, ಮಹಿಂದ್ರ, ಬಿಇಎಲ್ ಸೇರಿ ಹಲವು ಪ್ರತಿಷ್ಠಿತ ಕಂಪನಿಗಳು ಇಲ್ಲಿ ಜಾಗ ಪಡೆದಿವೆ’ ಎಂದು ವಿವರಿಸಿದರು.
ಏರೋಸ್ಪೇಸ್ ಯುಗ ಆರಂಭದ ಲಕ್ಷಣ
‘ನಾಗರಿಕ ಮತ್ತು ರಕ್ಷಣಾ ಕ್ಷೇತ್ರದ ಬೇಡಿಕೆಯನ್ನು ಗಮನಿಸಿದರೆ ಈ ವಲಯದ ಬೆಳವಣಿಗೆಗೆ ಸಾಕಷ್ಟು ಅವಕಾಶ ಇದೆ. ರಾಜ್ಯ ಸರ್ಕಾರ ಕೂಡ ಈ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ರಾಜ್ಯದಲ್ಲಿ ಏರೋಸ್ಪೇಸ್ ಕ್ಷೇತ್ರದ ಹೊಸ ಯುಗ ಆರಂಭವಾಗುವ ಲಕ್ಷಣ ಇದೆ’ ಎಂದು ಎಡಿಡಿ ಎಂಜಿನಿಯರ್ಸ್ ಇಂಡಿಯಾ (ಪ್ರೈವೇಟ್) ಲಿಮಿಟೆಡ್‌ನ ನಿರ್ದೇಶಕ ಗಿರೀಶ್ ಲಿಂಗಣ್ಣ ಅಭಿಪ್ರಾಯಪಟ್ಟರು.
‘ವಿದೇಶಿ ಕಂಪನಿಗಳ ಜಂಟಿ ಸಹಭಾಗಿತ್ವಕ್ಕೆ ಪ್ರೋತ್ಸಾಹ ದೊರಕುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಉತ್ಪಾದನಾ ಘಟಕಗಳ ಆರಂಭ, ಬಿಡಿ ಭಾಗಗಳ ತಯಾರಿಕೆಗೆ ಉತ್ತೇಜನ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇನ್ನಿತರೆ ಉದ್ದಿಮೆಗಳನ್ನು ಆರಂಭಿಸಲು ಅವಕಾಶ ಲಭಿಸುತ್ತದೆ. ಯೋಜನೆಯಂತೆ ಕಾರ್ಯರೂಪಕ್ಕೆ ತಂದರೆ ರಾಜ್ಯಕ್ಕೆ ಅನೇಕ ರೀತಿಯ ಅನುಕೂಲಗಳಿವೆ. ಸರ್ಕಾರದ ಕೈಗಾರಿಕಾ ನೀತಿಗಳೂ ಉದ್ಯಮ ಆರಂಭಿಸುವವರಿಗೆ ಪೂರಕವಾಗಿವೆ’ ಎಂದು ಹೇಳಿದರು.
ವಿಶಾಲವಾದ ರಸ್ತೆ: ಸ್ಥಳೀಯರಲ್ಲಿ ಸಂತಸ
ಮೂರು ಕ್ಲಸ್ಟರ್‌ಗಳನ್ನು ಒಳಗೊಂಡ ಇಡೀ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ವಿಶಾಲವಾದ ರಸ್ತೆಗಳು ನಿರ್ಮಾಣವಾಗಿವೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ಪ್ರದೇಶದ ಚಿತ್ರಣವೇ ಬದಲಾಗಿದೆ.
ದೇವನಹಳ್ಳಿಯಿಂದ ಕೆ.ಆರ್.ಪುರ, ಕಾಟಂನಲ್ಲೂರು ಮೂಲಕ ವೈಟ್‌ಫೀಲ್ಡ್ ಮತ್ತು ಹೊಸಕೋಟೆ ಸಂಪರ್ಕಿಸಲು ರಸ್ತೆ ನಿರ್ಮಾಣವಾಗಿದೆ. ಬಾಗಲೂರು ಮೂಲಕ ಹೆಣ್ಣೂರು ಸಂಪರ್ಕಿಸುವ ರಸ್ತೆಯೂ ವಿಸ್ತರಣೆಯಾಗಿದೆ.
ಬಾಡಿಗೆ ಮನೆಗಳಿಗೆ ಬೇಡಿಕೆ
ಈ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳಲ್ಲಿ ಬಾಡಿಗೆ ಮನೆಗಳಿಗೆ ಈಗ ಬೇಡಿಕೆ ಶುರುವಾಗಿದೆ.
ಬಾಡಿಗೆಗೆ ಕೊಡುವ ಉದ್ದೇಶಕ್ಕಾಗಿಯೇ ಸಣ್ಣ ಸಣ್ಣ ಮನೆಗಳನ್ನು ಹಳ್ಳಿಯ ಜನರು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಕೊಟ್ಟಿಗೆಯಾಗಿದ್ದ ಮನೆಗಳನ್ನೂ ಬಾಡಿಗೆ ಮನೆಗಳಾಗಿ ಕೆಲವರು ಮಾರ್ಪಡಿಸುತ್ತಿದ್ದಾರೆ.
ಸಿಂಗನಗಳ್ಳಿ, ಹುತ್ತನಹಳ್ಳಿ, ಮೀಸಗಾನಹಳ್ಳಿ, ಭಟ್ರಮಾರನೇಹಳ್ಳಿ, ಮೈಲನಹಳ್ಳಿ, ಶೆಟ್ಟಿಗೆರೆ, ಬಾಗಲೂರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಅಭಿವೃದ್ಧಿಯ ಸಂಚಲನ ಶುರುವಾಗಿದೆ. ಈಗಾಗಲೇ ಕಾರ್ಯಾರಂಭಗೊಂಡಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪಗಳೂ ಇವೆ.
‘ರಿಯಲ್ ಎಸ್ಟೇಟ್‌ಗೆ ಉತ್ತೇಜನ’
ವಿಮಾನ ನಿಲ್ದಾಣದ ಪಕ್ಕದಲೇ ಐಟಿ, ಏರೋಸ್ಪೇಸ್ ಹಾಗೂ ಹಾರ್ಡ್‌ವೇರ್ ಪಾರ್ಕ್ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇವನಹಳ್ಳಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಜತೆಗೆ, ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಅನೇಕ ಮಂದಿ ಆರ್ಥಿಕವಾಗಿ ಸಬಲರಾಗಲಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಸಿಗಲಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ಸಿಕ್ಕಿ ಕೆಲವೇ ವರ್ಷಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭೂಮಿ ಮೌಲ್ಯ ಹತ್ತು ಪಟ್ಟು ಹೆಚ್ಚಾಗಲಿದೆ.
- ಡಾ. ಆನಂದ ಕುಮಾರ್, ಮಾನಸ ಸಮೂಹ ಸಂಸ್ಥೆಯ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.