ADVERTISEMENT

ಕೆರೆಯಿಂದ ಕೆರೆ... ಸಂಪರ್ಕಕ್ಕೆ ತಡೆ: ರಾಜಕಾಲುವೆಯಿಂದ ಕಾಲುವೆಗಳಿಗೆ ಹರಿಯದ ನೀರು

ಮಹದೇವಪುರ: ರಾಜಕಾಲುವೆಯಿಂದ ಕಾಲುವೆಗಳಿಗೆ ಹರಿಯದ ಮಳೆನೀರು

Published 7 ಸೆಪ್ಟೆಂಬರ್ 2022, 20:37 IST
Last Updated 7 ಸೆಪ್ಟೆಂಬರ್ 2022, 20:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ನಗರ ಐದು ದಶಕಗಳ ನಂತರ ಭಾರಿ ಪ್ರಮಾಣದ ಮಳೆ ಕಂಡಿದೆ. ಅತಿಹೆಚ್ಚು ತೇವಾಂಶದ ತಿಂಗಳನ್ನೂ ಕಂಡದ್ದಾಗಿದೆ. ಇವೆಲ್ಲವೂ ಅಭಿವೃದ್ಧಿ ಪಥದಲ್ಲಾಗಿರುವ ಹುಳುಕುಗಳನ್ನು ಬಹಿರಂಗಪಡಿಸಿವೆ. ನಗರದ ಪೂರ್ವಭಾಗ ರಾಜಕಾಲುವೆಗಳ ನೀರಿನಲ್ಲೇ ಮುಳುಗಿಹೋಗಿ ಅಲ್ಲಿನ ಒತ್ತುವರಿಯ ಪರಿಯನ್ನು ಸಾರುತ್ತಿದೆ.

ಮಾಹಿತಿ ತಂತ್ರಜ್ಞಾನದ ಬೃಹತ್‌ ಕಂಪನಿಗಳ ತಾಣವಾಗಿರುವ ಬಿಬಿಎಂಪಿಯ ಪೂರ್ವ ಹಾಗೂ ಮಹದೇವಪುರ ವಲಯ ಒಂದು ವಾರದಿಂದ ಮಳೆಗೆ ನಲುಗಿಹೋಗಿದೆ. ಇದಕ್ಕೆಲ್ಲ ಕಾರಣ ಇಲ್ಲಿನ ಒತ್ತುವರಿ. ಕೆರೆಯಿಂದ ಕೆರೆಗೆ, ಕಾಲುವೆಯಿಂದ ಕಾಲುವೆಗೆ ಸಂಪರ್ಕ ಕಡಿತವಾಗಿರುವುದರಿಂದ ನೀರೆಲ್ಲ ರಸ್ತೆಗೇ ಹರಿದಿದೆ. ಅಷ್ಟೇ ಅಲ್ಲ, ಬಡಾವಣೆಗಳಿಗೂ ನುಗ್ಗಿ ಜನರನ್ನು ವಸತಿಹೀನರನ್ನಾಗಿಸಿದೆ. ರಾಜಕಾಲುವೆ ಒತ್ತುವರಿ ಈ ಪ್ರದೇಶಗಳಲ್ಲಿ ಮಿತಿಮೀರಿರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂಬುದನ್ನು ನಕ್ಷೆ ಹಾಗೂ ಅಂಕಿ–ಅಂಶಗಳೇ ಬಹಿರಂಗಪಡಿಸಿವೆ.

ಮಹದೇವಪುರ ವಲಯದ ಮಾರತ್‌ಹಳ್ಳಿ, ಸರ್ಜಾಪುರ ರಸ್ತೆ ವ್ಯಾಪ್ತಿಯಲ್ಲಿರುವ ಐಟಿ ಕಂಪನಿ ಆವರಣದಲ್ಲೂ ರಾಜಕಾಲುವೆಗಳು ಒತ್ತುವರಿಯಾಗಿವೆ ಅಥವಾ ಅರ್ಧಕ್ಕಿಂತ ಕಡಿಮೆಯಾಗಿವೆ. ಇದಲ್ಲದೆ, ಬಿಡಿಎ ರಸ್ತೆ ಮಾಡುವಾಗಲೂ ರಾಜಕಾಲುವೆಗಳ ಹರಿವಿಗೆ ತಡೆಯೊಡ್ಡಲಾಗಿದೆ. ಹೊರವರ್ತುಲ ರಸ್ತೆಯಲ್ಲಿ ಮಳೆನೀರು ಒಂದೆಡೆಯಿಂದ ಮತ್ತೊಂದೆಡೆ ಹರಿಯಲು ಹಿಂದೆ ಇದ್ದ ರಾಜಕಾಲುವೆಗಳು ಮಾಯವಾಗಿವೆ ಎಂಬುದು ಸ್ಥಳೀಯ ನಾಗರಿಕರ ಆರೋಪ. ಬಿಬಿಎಂಪಿ ಸಿದ್ಧಪಡಿಸಿರುವ ಒತ್ತುವರಿ ನಕ್ಷೆಯೂ ಅದನ್ನು ಸಾಬೀತುಪಡಿಸುತ್ತದೆ.

ADVERTISEMENT

ಯಾವ ಗ್ರಾಮಗಳಲ್ಲಿ ಒತ್ತುವರಿ?

ಅಮಾನಿ ಬೆಳ್ಳಂದೂರು ಖಾನೆ, ವೈಟ್‌ಫೀಲ್ಡ್‌, ಬೆಳ್ಳತ್ತೂರು, ಚನ್ನಸಂದ್ರ, ರಾಮಗೊಂಡನಹಳ್ಳಿ, ಕೆಂಪಾಪುರ, ಚಲ್ಲಘಟ್ಟ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಪಣತ್ತೂರು, ಚಿನ್ನಪ್ಪನಹಳ್ಳಿ, ಜುನ್ನಸಂದ್ರ, ಕೈಕೊಂಡ್ರಹಳ್ಳಿ, ಮುನ್ನೆಕೊಳಾಲು, ಭೋಗನಹಳ್ಳಿ, ಆರ್‌. ನಾರಾಯಣಪುರ, ಗುಂಜೂರು, ವರ್ತೂರು, ಚಿಕ್ಕಬೆಳ್ಳಂದೂರು, ಕಸವನಹಳ್ಳಿ.

ಸಂಪರ್ಕಜಾಲಕ್ಕೆ ಧಕ್ಕೆ...

‘ಐಟಿ ಕಂಪನಿಗಳು ಸೇರಿ ಇಲ್ಲಿ ಬಡಾವಣೆಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಕೆರೆಗಳ

ನಾಗೇಶ್‌ ಅರಸ್‌

ಸಂಪರ್ಕಜಾಲಕ್ಕೆ ಧಕ್ಕೆ ಉಂಟು ಮಾಡಲಾಗಿದೆ. ಕೆಲವು ಕಡೆ ರಾಜಕಾಲುವೆ ವಿಸ್ತೀರ್ಣ ಕಡಿಮೆಯಾಗಿದ್ದರೆ, ಮತ್ತೆ ಹಲವು ಕಡೆ ಕಾಲುವೆಯನ್ನು ಸಂಪೂರ್ಣ ಮುಚ್ಚಲಾಗಿದೆ. ಹೀಗಾಗಿ ಬೆಳ್ಳಂದೂರು ಭಾಗದಲ್ಲಿ ರಸ್ತೆ, ಬಡಾವಣೆಗಳಲ್ಲಿ ನೀರು ನಿಂತಿದೆ. ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಸಂಕಷ್ಟವೂ ದೊಡ್ಡದಾಗಿ ಕಾಣುತ್ತಿದೆ’ ಎನ್ನುತ್ತಾರೆ ಬೆಳ್ಳಂದೂರಿನಲ್ಲಿರುವ ಪರಿಸರ ಕಾರ್ಯಕರ್ತ ನಾಗೇಶ್‌ ಅರಸ್‌.

‘ಈಗ ಸಮಸ್ಯೆ ಉಂಟಾಗಿರುವ ಬೆಳ್ಳಂದೂರು–ಸರ್ಜಾಪುರ ರಸ್ತೆಯ ಮೂಲಕ ರಾಜಕಾಲುವೆ ಸಾಗಬೇಕು. ಅಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ಹರಳೂರು, ಕಸವನಹಳ್ಳಿ, ಸವಳು ಕೆರೆ ಮೂಲಕ ಬೆಳ್ಳಂದೂರು ಕೆರೆಗೆ ನೀರು ಹರಿಯುತ್ತಿದೆ. ಆದರೆ, ಬಿಬಿಎಂಪಿ ವ್ಯಾಪ್ತಿ ಹೊರಗಿರುವ ಹಾಲನಾಯಕನಹಳ್ಳಿ ಕೆರೆ ತುಂಬಿದರೆ ಜುನ್ನಸಂದ್ರದ ಮೂಲಕ ಸರ್ಜಾಪುರ ಹೊರವರ್ತುಲ ರಸ್ತೆಯ ಮೂಲಕ ಸವಳು ಕೆರೆಗೆ ನೀರು ಹರಿಯಬೇಕು. ಈ ರಾಜಕಾಲುವೆ ಒತ್ತುವರಿಯಾಗಿದೆ. ಹೀಗಾಗಿ ಇಲ್ಲಿ ಸಂಕಷ್ಟ ಎದುರಾಗುತ್ತಿದೆ. ಅಧಿಕಾರಿಗಳು ಹೇಳುವುದಕ್ಕಿಂತ ಅತಿ ಹೆಚ್ಚು ಕಡೆ ಒತ್ತುವರಿಯಾಗಿದೆ. ಎಲ್ಲ ಒತ್ತುವರಿಯನ್ನು ಪ್ರಾಮಾಣಿಕವಾಗಿ ತೆರವು ಮಾಡಿದರಷ್ಟೇ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದರು.

ಕೆರೆಗಳ ಹರಿವಿಗೆ ತಡೆ

ಕೋರಮಂಗಲ–ಚೆಲ್ಲಘಟ್ಟ ಕಣಿವೆಯ ಬಹುತೇಕ ಭಾಗವನ್ನು ಹೊಂದಿರುವ ಬೆಳ್ಳಂದೂರು ಕೆರೆಗೆ ಅರಮನೆ ರಸ್ತೆಯಿಂದ ಹಿಡಿದು ಸುತ್ತಮುತ್ತಲಿನ 46 ಕೆರೆಗಳಿಂದ ನೇರ ಅಥವಾ ಪರೋಕ್ಷವಾಗಿ ನೀರು ಹರಿಯುತ್ತದೆ. ಬೆಳ್ಳಂದೂರು ನಂತರ ವರ್ತೂರು ಕೆರೆಗೆ ಹೋಗುತ್ತದೆ. ಇದಲ್ಲದೆ, ವರ್ತೂರಿಗೆ 50 ಕೆರೆಗಳಿಂದ ನೀರು ಹರಿಯುತ್ತದೆ. ಆದರೆ, ಈ ಎರಡು ದೊಡ್ಡ ಕೆರೆಗಳಿಗೆ ರಾಜಕಾಲುವೆಯ ಸಂಪರ್ಕ ಹಲವು ಕಡೆ ಕಡಿದುಹೋಗಿದೆ. ಹೀಗಾಗಿ ಈ ಭಾಗದಲ್ಲಿ ಮಳೆ ನೀರು ಹರಿಯಲು ಸಾಧ್ಯವಾಗದೆ ನೀರು ರಸ್ತೆ, ಬಡಾವಣೆಗಳಿಗೆ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.