ಬೆಂಗಳೂರು: ಎರಡು ವರ್ಷದವನಿದ್ದಾಗ ಪೋಷಕರ ಜೊತೆ ದೇಶದೊಳಗೆ ಅಕ್ರಮವಾಗಿ ನುಸುಳಿದ್ದ ಬಾಂಗ್ಲಾದೇಶದ ರಮೇನ್ ಬಿಸ್ವಾಸ್ ಎಂಬಾತ 30 ವರ್ಷದ ಬಳಿಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
‘ಮಾಲ್ಡೀವ್ಸ್‌ನಿಂದ ಗಡಿಪಾರು ಮಾಡಲಾಗಿದ್ದ ರಮೇನ್, ಶ್ರೀಲಂಕಾದ ಮೂಲಕ ವಿಮಾನದಲ್ಲಿ ನಗರಕ್ಕೆ ಬಂದಿದ್ದ. ಪಾಸ್‌ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿದಾಗ ಆತ ಬಾಂಗ್ಲಾದೇಶದ ಪ್ರಜೆ ಎಂಬುದು ಗೊತ್ತಾಗಿದೆ’ ಎಂದು ಕೆಐಎ ಪೊಲೀಸರು ಹೇಳಿದರು.
‘ವಲಸೆ ಅಧಿಕಾರಿಗಳೇ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದಾರೆ. ವಿದೇಶಿಗರ ಕಾಯ್ದೆ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ಬಾಂಗ್ಲಾದೇಶದ ಫಾರಿದ್‌ಪುರದಲ್ಲಿ ಜನಿಸಿದ್ದ ರಮೇನ್ ಬಿಸ್ವಾಸ್ ಹಾಗೂ ಆತನ ಪೋಷಕರು ಗಡಿ ದಾಟಿ ಭಾರತದೊಳಗೆ ಬಂದಿದ್ದರು. ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಆರೋಪಿ ರಮೇನ್, ಏಜೆಂಟರೊಬ್ಬರಿಗೆ ₹ 80,000 ಕೊಟ್ಟು ಮಾಲ್ಡೀವ್ಸ್‌ನಲ್ಲಿ ಹೊಸ ಕೆಲಸ ಹುಡುಕಿ ಹೊರಟಿದ್ದ’
‘ಮಾಲ್ಡೀವ್ಸ್‌ನ ವಲಸೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದಿದ್ದ. ಹೀಗಾಗಿಯೇ ಆತನನ್ನು ಅಲ್ಲಿಂದ ಗಡಿಪಾರು ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.