ADVERTISEMENT

ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ:12 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 12:07 IST
Last Updated 7 ಜುಲೈ 2021, 12:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‌ ಬಾಂಗ್ಲಾದೇಶದ 23 ವರ್ಷದ ಯುವತಿ ಮೇಲೆ ಮೃಗೀಯವಾಗಿ ವರ್ತಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ರಾಮಮೂರ್ತಿನಗರ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಬುಧವಾರ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

‘ಪ್ರಕರಣದಲ್ಲಿ ಭಾಗಿಯಾಗಿದ್ದ 12 ಆರೋಪಿಗಳ ವಿರುದ್ಧ 1,019 ‍ಪುಟಗಳನ್ನು ಒಳಗೊಂಡಂತೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

‘ಪ್ರಕರಣದಲ್ಲಿ 10 ಮಂದಿಯ ವಿರುದ್ದ ಅತ್ಯಾಚಾರ ಆರೋಪ ಹಾಗೂ ಇಬ್ಬರು ಯುವತಿಯರ ವಿರುದ್ಧ ಅಕ್ರಮ ವಲಸೆ ಆರೋಪವಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಆರು ಮಂದಿಯಿಂದ ಪಡೆದಿರುವ ಹೇಳಿಕೆ ದಾಖಲಿಸಿ, ಚಾರ್ಜ್‌ಶೀಟ್‌ನಲ್ಲಿ ನಮೂದಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕೃತ್ಯ ನಡೆದ ಜಾಗದಲ್ಲಿ ಹಾಗೂ ಆರೋಪಿಗಳ ಮನೆಯಲ್ಲಿ ಪತ್ತೆಯಾಗಿದ್ದ ಸಾಕ್ಷ್ಯಾಧಾರಗಳು, ಕರೆಗಳ ಮಾಹಿತಿ, ಆರೋಪಿಗಳ ಮೊಬೈಲ್‌ನಲ್ಲಿ ಸೆರೆಯಾಗಿದ್ದ ಕೃತ್ಯದ ವಿಡಿಯೊಗಳು ಪೂರಕವಾಗಿ ಲಭ್ಯವಾಗಿತ್ತು. ಎಫ್‍ಎಸ್‍ಎಲ್ ವರದಿ, ಆರೋಪಿಗಳ ಡಿಎನ್‍ಎ ಮಾದರಿ ವರದಿಯನ್ನೂ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ’.

‘ಆರೋಪಿಗಳಾದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು, ಹಕೀಲ್, ಶೂಬೂಜ್, ರಫ್ಸಾನ್, ತಾನಿಯಾ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 11 ಮಂದಿ ಆರೋಪಿಗಳು ಹಾಗೂ ಸಂತ್ರಸ್ತೆ ಬಾಂಗ್ಲಾದೇಶದವರು’ ಎಂದು ಮಾಹಿತಿ ನೀಡಿದರು.

‘ಅತ್ಯಾಚಾರ ಘಟನೆಗೆ ಆರೋಪಿಗಳು ಹಾಗೂ ಸಂತ್ರಸ್ತೆ ನಡೆಸುತ್ತಿದ್ದ ದಂಧೆಯೇ ಪ್ರಮುಖ ಕಾರಣ. ಪ್ರಕರಣದ ಆರೋಪಿಗಳು ನಾಲ್ಕು ಮಂದಿ ಯುವತಿಯರನ್ನು ಬಾಂಗ್ಲಾದಿಂದ ಭಾರತಕ್ಕೆ ಅಕ್ರಮವಾಗಿ ಸಾಗಾಟ ಮಾಡಿದ್ದರು. ಆದರೆ, ಆರೋಪಿಗಳಿಂದ ಯುವತಿಯರನ್ನು ಸಂತ್ರಸ್ತೆ ದೂರ ಮಾಡಿದ್ದರು. ಇದರಿಂದ ನಷ್ಟದ ಆರೋಪ ಹೊರಿಸಿ, ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.