ADVERTISEMENT

ಖಾಸಗೀಕರಣ ವಿರೋಧಿಸಿ ಪ್ರತಿಭಟನೆ: ಬ್ಯಾಂಕ್ ಉದ್ಯೋಗಿಗಳ ಶಕ್ತಿ ಪ್ರದರ್ಶನ

ಘೋಷಣೆ ಕೂಗಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 22:09 IST
Last Updated 16 ಡಿಸೆಂಬರ್ 2021, 22:09 IST
ನಗರದ ವಿವಿಧ ಬ್ಯಾಂಕ್‌ಗಳ ಉದ್ಯೋಗಿಗಳು ಮೈಸೂರು ಬ್ಯಾಂಕ್ ವೃತ್ತದ ಎಸ್‌ಬಿಐ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ನಗರದ ವಿವಿಧ ಬ್ಯಾಂಕ್‌ಗಳ ಉದ್ಯೋಗಿಗಳು ಮೈಸೂರು ಬ್ಯಾಂಕ್ ವೃತ್ತದ ಎಸ್‌ಬಿಐ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ ಕರೆ ನೀಡಲಾಗಿದ್ದ ಪ್ರತಿಭಟನೆಗೆ ನಗರದಲ್ಲೂ ಬ್ಯಾಂಕ್ ಉದ್ಯೋಗಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಕೆಲಸಕ್ಕೆ ಗೈರಾದ ಉದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಎಸ್‌ಬಿಐ ಬ್ಯಾಂಕ್ ಆವರಣದಲ್ಲಿ ಸೇರಿದ್ದ 200ಕ್ಕೂ ಹೆಚ್ಚು ಉದ್ಯೋಗಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸುವ ಬರಹಗಳಿದ್ದ ಮಾಸ್ಕ್‌ಗಳನ್ನು ಧರಿಸಿದ್ದ ಕೆಲ ಉದ್ಯೋಗಿಗಳು ಪ್ರತಿಭಟನೆಯಲ್ಲಿ ಗಮನ ಸೆಳೆದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಖಾಸಗೀಕರಣ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು.

ADVERTISEMENT

‘ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳ ಖಾಸಗೀಕರಣ, ಜೀವ ವಿಮಾ ನಿಗಮದ ಬಂಡವಾಳ ಹಿಂತೆಗೆತ, ವಿಮಾ ಕ್ಷೇತ್ರದಲ್ಲಿ ಶೇ 74 ವಿದೇಶಿ ಬಂಡವಾಳ ಹೂಡಿಕೆ, ಇತ್ಯಾದಿ ಕ್ರಮಗಳು ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿವೆ’ ಎಂದೂ ಪ್ರತಿಭಟನಕಾರರು ದೂರಿದರು.

'ಬ್ಯಾಂಕ್‌ಗಳ ಖಾಸಗೀಕರಣದಿಂದ ಯಾವುದೇ ಪ್ರಯೋಜನವಿಲ್ಲ. ಈ ಹಿಂದೆ ಖಾಸಗೀಕರಣ ಮಾಡಲಾಗಿದ್ದ ಬ್ಯಾಂಕ್‌ಗಳು ಇಂದು ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿವೆ’ ಎಂದೂ ಆಗ್ರಹಿಸಿದರು.

ಶುಕ್ರವಾರವೂ ನಗರದ ಹಲವೆಡೆ ಉದ್ಯೋಗಿಗಳು ಪ್ರತಿಭಟನೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.