ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆಯಲು ಸಹಕಾರ: ನಾಲ್ವರು ಬ್ಯಾಂಕ್‌ ಅಧಿಕಾರಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 21:21 IST
Last Updated 19 ಜನವರಿ 2024, 21:21 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸುವ ಜತೆಗೆ ಮನೆ ಮಾಲೀಕರ ಮನವೊಲಿಸಿ ಆಸ್ತಿ ದಾಖಲಾತಿಗಳನ್ನು ಪಡೆದು ವಂಚನೆ ಮಾಡುತ್ತಿದ್ದ ಮಧ್ಯವರ್ತಿಗಳಿಗೆ ಸಹಕರಿಸುತ್ತಿದ್ದ ಬ್ಯಾಂಕ್‌ನ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸೇಂಟ್‌ ಮಾರ್ಕ್ಸ್‌ ರಸ್ತೆಯ ಬ್ಯಾಂಕ್‌ವೊಂದರ ಎಜಿಎಂ ಮುರಳೀ ಧರ್‌, ಮಹಾಲಕ್ಷ್ಮಿ ಲೇಔಟ್‌ನ ಬ್ಯಾಂಕ್‌ ವೊಂದರ ವ್ಯವಸ್ಥಾಪಕ ರಾಕೇಶ್‌, ಹೊಸಕೋಟೆಯಲ್ಲಿರುವ ಬ್ಯಾಂಕ್‌ನ ಮಲ್ಲಿಕಾರ್ಜುನ್‌, ಜಯನಗರ ಬ್ಯಾಂಕ್‌ ವೊಂದರ ಶಶಿಕಾಂತ್‌ ಬಂಧಿತರು.

ಮರುಳೀಧರ್‌, ರಾಕೇಶ್‌ ದಾಖಲೆ ಪರಿಶೀಲನೆ ನಡೆಸದೇ ಸಾಲ ಮಂಜೂರು ಮಾಡುತ್ತಿದ್ದರು. ಮಲ್ಲಿಕಾರ್ಜುನ್‌, ಶಶಿಕಾಂತ್‌ ಅವರು ಮಧ್ಯವರ್ತಿಗಳಿಗೆ ನಕಲಿ ಖಾತೆಗಳನ್ನು ಮಾಡಿಕೊಡುತ್ತಿದ್ದರು. ಇವರು ವಿವಿಧ ಬ್ಯಾಂಕ್‌ಗಳಲ್ಲಿ ವ್ಯವಸ್ಥಾಪಕರಾಗಿ, ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.

ADVERTISEMENT

ಈ ಹಿಂದೆ ಪುಟ್ಟೇನಹಳ್ಳಿ ಹಾಗೂ ಹುಳಿಮಾವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅದನ್ನು ಸಿಸಿಬಿ ವರ್ಗಾವಣೆ ಮಾಡಲಾಗಿತ್ತು. ಈ ಹಿಂದೆ ಐವರು ಏಜೆಂಟರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ಬ್ಯಾಂಕ್‌ ಅಧಿಕಾರಿಗಳನ್ನು ಈಗ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ವೃದ್ಧರ ಹೆಸರಿನಲ್ಲಿರುವ ನಿವೇಶನ, ಮನೆ ಖರೀದಿಸುವ ನೆಪದಲ್ಲಿ ಮಧ್ಯವರ್ತಿಗಳು ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಬ್ಯಾಂಕ್‌ ಅಧಿಕಾರಿಗಳ ಎದುರು ಅಸಲಿ ಎಂದು ಬಿಂಬಿಸಿ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದರು. ವೃದ್ಧರನ್ನೇ ಗುರಿಯಾಗಿಸುತ್ತಿದ್ದರು. ಡಿಸೆಂಬರ್‌ನಲ್ಲಿ ವಂಚನೆ ಜಾಲ ಪತ್ತೆಯಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಹುಳಿಮಾವಿನಲ್ಲಿ ವೃದ್ಧರೊಬ್ಬರ ಮನೆಯ ದಾಖಲೆ ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿ, ಬ್ಯಾಂಕ್‌ನಿಂದ ₹ 1.50 ಕೋಟಿ ಸಾಲ ಪಡೆದುಕೊಂಡಿದ್ದ. ಪುಟ್ಟೇನಹಳ್ಳಿಯಲ್ಲಿಯೂ ಮನೆ ಸ್ವತ್ತಿಗೆ ನಕಲಿ ದಾಖಲೆ ಸೃಷ್ಟಿಸಿ ₹ 3.85 ಕೋಟಿ ಪಡೆದುಕೊಳ್ಳಲಾಗಿತ್ತು.

ಮಧ್ಯವರ್ತಿಗಳಾದ ಭಾಸ್ಕರ್‌ ಕೃಷ್ಣ, ಮಹೇಶ್‌, ಅರುಣ್‌, ದಿವಾಕರ್‌ ಎಂಬುವವರು ಹುಳಿಮಾವು ನಿವಾಸಿಯೊಬ್ಬರ ಮನೆ ಖರೀದಿಸುವ ನೆಪದಲ್ಲಿ ದಾಖಲೆ ಪಡೆದು ಬ್ಯಾಂಕ್‌ಗೆ ಸಲ್ಲಿಸಿ ಸಾಲ ಮಂಜೂರು ಮಾಡಿಸಿಕೊಂಡಿದ್ದರು. ಅವರಿಗೆ ಈ ಬ್ಯಾಂಕ್‌ ಅಧಿಕಾರಿಗಳು ಕಮಿಷನ್‌ ಆಸೆಗೆ ನೆರವು ನೀಡಿದ್ದರು.

‘ಕಳೆದ ಜುಲೈನಲ್ಲಿ ವೃದ್ದರೊಬ್ಬರು, ಜೆ.ಪಿ. ನಗರದಲ್ಲಿದ್ದ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಅವರನ್ನು ಭೇಟಿಯಾಗಿದ್ದ ಭಾಸ್ಕರ್‌ ₹10 ಸಾವಿರ ಮುಂಗಡ ಹಣ ನೀಡಿ ನೀಡಿದ್ದ. ಅಲ್ಲದೇ ದಾಖಲಾತಿಗಳನ್ನೂ ಪಡೆದುಕೊಂಡಿದ್ದ. ಮತ್ತೊಬ್ಬ ಆರೋಪಿಯಿಂದ ಕರೆ ಮಾಡಿಸಿ, ನಾನು ಭಾಸ್ಕರ್‌ ಸಂಬಂಧಿ. ಮನೆ ಖರೀದಿಗೆ ಭಾಸ್ಕರ್‌ ಅವರು ಬ್ಯಾಂಕ್‌ನಿಂದ ಸಾಲ ಮಾಡುತ್ತಿದ್ಧಾರೆ. ಬ್ಯಾಂಕ್‌ ಅಧಿಕಾರಿಗಳು ವಿಚಾರಿಸಿದರೆ ಸಹಕಾರ ನೀಡುವಂತೆ ಮನವಿ ಮಾಡಿದ್ದ. ಬಳಿಕ ಬ್ಯಾಂಕ್‌ ಅಧಿಕಾರಿಗಳ ನೆರವಿನಿಂದ ಸಾಲ ಪಡೆದುಕೊಂಡಿದ್ದ. ನಂತರ ಮನೆ ಮಾಲೀಕರಿಗೆನ ಕರೆ ಮಾಡಿ ಸಾಲ ದೊರೆಯದ ಕಾರಣಕ್ಕೆ ಮನೆ ಖರೀದಿ ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದ’ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.