ಬೆಂಗಳೂರು:ಬನ್ನೇರುಘಟ್ಟ ರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆ ನಿಯಂತ್ರಣದ ಕುರಿತು ಸಲಹೆ ಕೇಳಲು ಮುಂದಾದ ಸಂಸದ ತೇಜಸ್ವಿ ಸೂರ್ಯ ಶನಿವಾರ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು.
ಈ ರಸ್ತೆಯಲ್ಲಿ ವೆಗಾ ಮಾಲ್‌ನಿಂದ ಫೋರ್ಟಿಸ್ ಆಸ್ಪತ್ರೆಯವರೆಗೆ ಸುಮಾರು 2.2 ಕಿ.ಮೀ. ಉದ್ದಕ್ಕೂ ಸಂಚಾರ ದಟ್ಟಣೆ ಸಾಮಾನ್ಯ. ಈ ಸಂಬಂಧ ಸಾರ್ವಜನಿಕರಿಂದ ಸಲಹೆ ಪಡೆಯುವ ಉದ್ದೇಶದಿಂದ ತೇಜಸ್ವಿ ಸೂರ್ಯ ಸ್ಥಳಕ್ಕೆ ಭೇಟಿ ನೀಡಿದರು.
‘ಪಾದಚಾರಿ ಮಾರ್ಗಗಳನ್ನು ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿ ಕೊಂಡಿದ್ದಾರೆ. ಅಧಿಕಾರಿಗಳು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪದ್ಮಲತಾ ದೂರಿದರು.
‘ರಸ್ತೆಯ ಬದಿಯಲ್ಲಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಮಳೆ ಬಂದರೆ ರಸ್ತೆಯಲ್ಲಿಯೇ ನೀರು ನಿಂತು ಸಮಸ್ಯೆ ಉಂಟಾಗುತ್ತದೆ’ ಎಂದರು.
‘ಜನ ಎಂದ ಮೇಲೆ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದು ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.‘ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತೇಜಸ್ವಿ ಸೂರ್ಯ ಸ್ಥಳೀಯರನ್ನು ಸಮಾಧಾನಪಡಿಸಿದರು.
ಬಿಎಂಆರ್‌ಸಿಎಲ್, ಬಿಬಿಎಂಪಿ, ಜಲಮಂಡಳಿ ಹಾಗೂ ಪಾಲಿಕೆ ಸದಸ್ಯರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ‘ತೆರೆದ ಚರಂಡಿ ನಿರ್ಮಿಸಲು ಜಲಮಂಡಳಿಯಿಂದ ಸಾಧ್ಯವಿಲ್ಲವೇ. ಎಂಜಿನಿಯರ್‌ಗಳು ಏನು ಮಾಡುತ್ತಿದ್ದಾರೆ’ ಎಂದು ತೇಜಸ್ವಿ ಸೂರ್ಯ ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಕಲುಷಿತ ನೀರು ಹರಿದು ಹೋಗಲು ಪೈಪ್‌ಲೈನ್ ಅಳವಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಈ ಪ್ರದೇಶ ಬಿಎಂಆರ್‌ಸಿಎಲ್ ವ್ಯಾಪ್ತಿಗೆ ಬರುತ್ತದೆ. ಆದರೆ, ನಿಗಮದ ಅಧ್ಯಕ್ಷ ಅಜಯ್ ಸೇಠ್, ಈ ಕಾಮಗಾರಿ ಕೈಗೆತ್ತಿಕೊಳ್ಳಲು ಹಣವಿಲ್ಲ ಎಂದು ಹೇಳುತ್ತಾರೆ’ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.