ADVERTISEMENT

ಬನ್ನೇರುಘಟ್ಟ ಉದ್ಯಾನಕ್ಕೆ ‘ಬಗ್ಗಿ’ ಬಂತು

ಭೀಮಣ್ಣ ಬಾಲಯ್ಯ
Published 20 ಮೇ 2019, 1:10 IST
Last Updated 20 ಮೇ 2019, 1:10 IST
ಸೇವೆಗೆ ತಯಾರದ ಬಗ್ಗಿ ವಾಹನ
ಸೇವೆಗೆ ತಯಾರದ ಬಗ್ಗಿ ವಾಹನ   

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭೇಟಿ ನೀಡುವ ಸಂದರ್ಶಕರು ಉದ್ಯಾನದೊಳಗೆ ಸಂಚರಿಸಲು ಬ್ಯಾಟರಿ ಚಾಲಿತ ಬಗ್ಗಿ ವಾಹನ ಸೌಲಭ್ಯಕಲ್ಪಿಸಲಾಗುತ್ತಿದೆ.

ಆ ವಾಹನಗಳಿಗೆ ಆಡಿಯೊ ಸಾಧನವೊಂದನ್ನು ಅಳವಡಿಸಲಾಗುತ್ತಿದ್ದು, ವಾಹನವು ಪ್ರಾಣಿಗಳ ಪಂಜರದ ಬಳಿ ಹೋಗುತ್ತಿದ್ದಂತೆ ಆ ಸಾಧನ ಅವುಗಳ ಪರಿಚಯ ಮಾಡಿಕೊಡಲಿದೆ.

ಉದ್ಯಾನದ ಅನುದಾನದಲ್ಲಿಯೇ 10 ಬಗ್ಗಿ ವಾಹನಗಳನ್ನು ಖರೀದಿಸಲಾಗಿದೆ. ಇವುಗಳಲ್ಲಿ 11 ಆಸನ ಸಾಮರ್ಥ್ಯದ ಎರಡು ವಾಹನ, ಎಂಟು ಆಸನಗಳುಳ್ಳ 7 ಹಾಗೂ ಆರು ಆಸನಗಳ ಒಂದು ವಾಹನ ಇದೆ. ಈ ವಾಹನಗಳು ನಿತ್ಯ 600 ಪ್ರವಾಸಿಗರಿಗೆ ಉದ್ಯಾನದಲ್ಲಿರುವ ಪ್ರಾಣಿ ಸಂಗ್ರಹಾಲಯ ದರ್ಶನ ಮಾಡಿಸಲಿವೆ. 15 ದಿನಗಳಲ್ಲಿ ಈ ಸೇವೆಗೆ ಚಾಲನೆ ದೊರೆಯಲಿದೆ.

ADVERTISEMENT

ಆಡಿಯೊ ಸಾಧನದ ಕೆಲಸ ಹೇಗೆ: ಬಗ್ಗಿ ವಾಹನಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿರುವ ಆಡಿಯೊ ಸಾಧನ ಬ್ಲೂಟೂತ್ ಸಂಪರ್ಕದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಸಂಗ್ರಹಾಲಯದಲ್ಲಿರುವ ಎಲ್ಲಪ್ರಾಣಿಗಳ ವಿವರಗಳನ್ನು ಮೊದಲೇ ಧ್ವನಿ ಮುದ್ರಿಸಲಾ
ಗುತ್ತದೆ. ಬಳಿಕ ಆ ಧ್ವನಿ ಮುದ್ರಣವನ್ನು ವಾಹನದಲ್ಲಿರುವ ಆಡಿಯೊ ಸಾಧನಕ್ಕೆ ಅಳವಡಿಸಲಾಗುತ್ತದೆ. ಬಗ್ಗಿ ವಾಹನಪ್ರಾಣಿಯ ಪಂಜರದ ಹತ್ತಿರಕ್ಕೆ ಹೋದ ತಕ್ಷಣ ಅದು ಪ್ರಸಾರವಾಗುತ್ತದೆ.

ವಾಹನಕ್ಕೆ ಕಾಯುವ ಹಾಗಿಲ್ಲ: ರಾಜ್ಯ ಪ್ರವಾಸೋದ್ಯಮ ಇಲಾಖೆಯ 10 ವಾಹನಗಳು ಪ್ರವಾಸಿಗರಿಗೆ ಸಫಾರಿ ಸೇವೆ ಒದಗಿಸುತ್ತಿವೆ. ವಾರಾಂತ್ಯದಲ್ಲಿ ಉದ್ಯಾನಕ್ಕೆ ಹೆಚ್ಚು ಜನ ಬರುವುದರಿಂದವಾಹನಗಳು ಸಾಲುತ್ತಿಲ್ಲ.ಇನ್ನೊಂದು ವಾಹನ ಬರುವವರಿಗೂ ಜನ ಕಾಯಬೇಕಾದ ಪರಿಸ್ಥಿತಿ ಇದೆ. ಆದರೆ, ಈಗ ಅದನ್ನು ತಪ್ಪಿಸಲು ಸಫಾರಿ ಟಿಕೆಟ್‌ನಲ್ಲಿಯೇ ವಾಹನ ಬರುವ ಸಮಯವನ್ನು ಮುದ್ರಿಸಲು ಇಲಾಖೆ ಮುಂದಾಗಿದೆ. 45 ಸ್ಲಾಟ್‌ಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

ಪ್ರಾಣಿ ಸಂಗ್ರಹಾಲಯದ ಸರೀಸೃಪ ಉದ್ಯಾನದಲ್ಲಿ ಹಳೆ ನೆಲಹಾಸು ಕಿತ್ತು ಹೋಗಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಹೊಸ ನೆಲಹಾಸು ನಿರ್ಮಿಸಲಾಗುತ್ತಿದೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಮಳೆ ನೀರು ಕಾಲುವೆಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳನ್ನು ಉದ್ಯಾನದಲ್ಲಿರುವ ಕೆರೆಗಳಿಗೆ ಸಂಪರ್ಕಿಸಲಾಗುತ್ತಿದೆ.

ಕೊಳವೆಬಾವಿಗಳಿಗೆ ಇಂಗುಗುಂಡಿ: ಉದ್ಯಾನದ ನೀರಿನ ಬೇಡಿಕೆಯನ್ನು ಪೂರೈಸಲು ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಅಂತರ್ಜಲ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಉದ್ಯಾನದ 4 ಕೊಳವೆ ಬಾವಿಗಳ ಬಳಿ ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತಿದ್ದು, ಈ ಮೂಲಕ ಅವುಗಳ ಪುನಶ್ಚೇತನಕ್ಕೆ ಇಲಾಖೆ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.