ಬೆಂಗಳೂರು: ಪೂರ್ವ ತಾಲ್ಲೂಕಿನಲ್ಲಿರುವ ಬಾಣಸವಾಡಿ ಕೆರೆ ಅಂಗಳ ಮತ್ತೊಮ್ಮೆ ಒತ್ತುವರಿಯಾಗಿದೆ.
ಈ ಹಿಂದೆ ಎರಡು ಬಾರಿ ತಹಶೀಲ್ದಾರ್ ನೇತೃತ್ವದಲ್ಲಿ ತೆರವುಗೊಳಿಸಲಾಗಿದ್ದ ಪ್ರದೇಶವನ್ನು ಮತ್ತೆ ಅತಿಕ್ರಮಿಸಲಾಗಿದೆ.
ಕೃಷ್ಣರಾಜಪುರ ಬಾಣಸವಾಡಿ ಸರ್ವೆ ನಂ.211ರಲ್ಲಿ 40 ಎಕರೆ 20 ಗುಂಟೆಯಲ್ಲಿರುವ ಕೆರೆ ಅಂಗಳದಲ್ಲಿನ 2 ಎಕರೆ 1 ಗುಂಟೆ ಪ್ರದೇಶದ ಖಾಸಗಿ ಒತ್ತುವರಿಯನ್ನು 2015ರಲ್ಲಿ ತಾಲ್ಲೂಕು ಆಡಳಿತ ತೆರವು ಮಾಡಿತ್ತು. ಅದನ್ನು ಮತ್ತೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ‘ತೆರವಾದ ಸ್ಥಳದಲ್ಲೇ ಮತ್ತೆ ಒತ್ತುವರಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ 2022ರ ಅಕ್ಟೋಬರ್ 17ರಂದು ಪ್ರಕಟಿಸಿತ್ತು.
ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಆದೇಶದಂತೆ ಬಾಣಸವಾಡಿ ಕೆರೆ ಅಂಗಳದ ತೆರವು ಕಾರ್ಯಾಚರಣೆ ಅ.27ರಿಂದ ಮೂರು ದಿನ ನಡೆದಿತ್ತು. ನಂತರ, ಸ್ಥಳೀಯ ರಾಜಕಾರಣಿಗಳ ಪ್ರಭಾವದಿಂದ ಪೂರ್ಣ ರೀತಿಯ ತೆರವು ಸ್ಥಗಿತಗೊಂಡಿತ್ತು. ಇದೀಗ, ತೆರವಾದ ಸ್ಥಳದಲ್ಲೇ ಮತ್ತೊಮ್ಮೆ ಒತ್ತುವರಿಯಾಗಿದೆ. ಕಟ್ಟಡಗಳ ನಿರ್ಮಾಣ ಆರಂಭವಾಗಿದೆ.
‘ಬಾಣಸವಾಡಿ ಗ್ರಾಮದ ಸ.ನಂ. 211ರ 42 ಎಕರೆ 38 ಗುಂಟೆ ಸರ್ಕಾರಿ ಕೆರೆ ಅಂಗಳ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ’ ಎಂಬ ನಗರ ಜಿಲ್ಲಾಧಿಕಾರಿ ಅವರ ಆದೇಶದ ಸೂಚನಾ ಫಲಕ ಅಲ್ಲಿದೆ.
ದೂರಿದರೂ ಪ್ರಯೋಜನವಿಲ್ಲ: ‘ಒತ್ತುವರಿ ತೆರವು ಮಾಡಿರುವುದನ್ನು ಉಳಿಸಿಕೊಳ್ಳದಿದ್ದರೆ ಮತ್ತೆ ಅತಿಕ್ರಮವಾಗುತ್ತದೆ. ಇದಕ್ಕೆ ಮತ್ತೊಮ್ಮೆ ಬಾಣಸವಾಡಿ ಕೆರೆ ಉದಾಹರಣೆಯಾಗಿದೆ. ಕಟ್ಟಡಗಳನ್ನು ತಹಶೀಲ್ದಾರ್ ಅವರು ತೆರವು ಮಾಡಿದ್ದರು. ಅದೇ ಸ್ಥಳದಲ್ಲಿ ಇದೀಗ ಬೃಹತ್ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ, ಬಿಡಿಎ, ತಹಶೀಲ್ದಾರ್ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರಾದ ಗೋಪಾಲ ರೆಡ್ಡಿ ದೂರಿದರು.
ನಮಗೆ ಕೊಟ್ಟಿಲ್ಲ: ‘ಬಾಣಸವಾಡಿ ಕೆರೆ ಅಸ್ತಿತ್ವ ಕಳೆದುಕೊಂಡಿದೆ. ಸಂಪೂರ್ಣವಾಗಿ ಒತ್ತುವರಿ ತೆರವು ಮಾಡಿಕೊಟ್ಟರೆ ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರಕ್ಕೆ ತಿಳಿಸಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ತೆರವಿಗೆ ಕ್ರಮ: ‘ಬಾಣಸವಾಡಿ ಕೆರೆಯಲ್ಲಿ ಒತ್ತುವರಿ ತೆರವಾಗಿರುವ ಸ್ಥಳದಲ್ಲಿ ಮತ್ತೆ ಒತ್ತುವರಿಯಾಗಿದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ರವಿ ಹೇಳಿದರು.
ಕೆ.ಜೆ. ಜಾರ್ಜ್ ‘ನನ್ನ ಕ್ಷೇತ್ರದಲ್ಲಿ ಬಾಣಸವಾಡಿ ಕೆರೆಯನ್ನು ಹಳಬರು ಹೊಸಬರು ಎಂದೆಲ್ಲ ಕಬಳಿಸಿದ್ದಾರೆ. ಬಿಡಿಎ ಎಚ್‌ಆರ್‌ಬಿಆರ್ ಬಡಾವಣೆ ಮಾಡಿದೆ. ಒತ್ತುವರಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ ಎಂದು ತಾಲ್ಲೂಕು ಜಿಲ್ಲಾಡಳಿತ ಹೇಳಿದೆ. ಇದು ಸುಮಾರು ₹1200 ಕೋಟಿಯಿಂದ ₹1500 ಕೋಟಿ ಬೆಲೆಬಾಳುವ ಸಾರ್ವಜನಿಕರ ಆಸ್ತಿ. ಕಾನೂನು ಇಲಾಖೆಯ ಕೆಲವರು ಇದರಲ್ಲಿ ಸೇರಿಕೊಂಡಿದ್ದಾರೆ. ಈ ಕಬಳಿಕೆ ತೆರವುಗೊಳಿಸಲು ಕಂದಾಯ ಸಚಿವರು ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಸಭೆಯಲ್ಲಿ ಕೆ.ಜೆ. ಜಾರ್ಜ್ ಅವರು ಅಂದಿನ ಕಂದಾಯ ಸಚಿವ ಆರ್. ಅಶೋಕ ಅವರಲ್ಲಿ ಮನವಿ ಮಾಡಿದ್ದರು. ಇದೀಗ ಸಚಿವರಾಗಿರುವ ಜಾರ್ಜ್ ಅವರಿಗೆ ಸ್ಥಳೀಯರು ಒತ್ತುವರಿ ತೆರವಿಗೆ ಮನವಿ ನೀಡಿದ್ದಾರೆ. ಆದರೆ ಕ್ರಮವಾಗಿಲ್ಲ ಎಂಬುದು ಅವರ ಅಳಲು. ಈ ಬಗ್ಗೆ ಪ್ರತಿಕ್ರಿಯೆಗೆ ಜಾರ್ಜ್ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ದೇವಸ್ಥಾನ– 6.12 ಗುಂಟೆ
ಪೆಟ್ರೋಲ್ ಬಂಕ್ ಮತ್ತು ಕಟ್ಟಡಗಳು– 1 ಎಕರೆ 28.9 ಗುಂಟೆ
ಬಿಡಿಎ– ನಿವೇಶನ 12 ಎಕರೆ 33 ಗುಂಟೆ
ರಸ್ತೆ– 7 ಎಕರೆ 31 ಗುಂಟೆ
ಚರಂಡಿ– 24.08 ಗುಂಟೆ... ಇತ್ಯಾದಿಗಳಿಗೆ ಒತ್ತುವರಿಯಾಗಿದೆ ಎಂದು ಸರ್ವೆ ವರದಿಯಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.