ಬೆಂಗಳೂರು: ‘ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ’ ಎಂಬ ಕಾರಣಕ್ಕೆ ನಗರದ 27 ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ‘ಕರ್ನಾಟಕ ಹೋಟೆಲ್ ಬಾರ್ ಅಂಡ್ ರೆಸ್ಟೋರೆಂಟ್ಸ್ ಮಾಲೀಕರು ಮತ್ತು ದುಡಿಯುವ ಮಹಿಳೆಯರ ಸಂಸ್ಥೆ’ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಪ್ರಕರಣದ ಪ್ರತಿವಾದಿಗಳಾದ ರಾಜ್ಯ ಪೊಲೀಸ್ ಮಹಾನಿರ್ದೇಶಕ, ನಗರ ಪೊಲೀಸ್ ಕಮಿಷನರ್, ನಗರದ ಪಶ್ಚಿಮ ಹಾಗೂ ಪೂರ್ವ ವಿಭಾಗಗಳ ಸಹಾಯಕ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ), ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಅವರಿಗೂ ನೋಟಿಸ್ ಜಾರಿಗೆ ಆದೇಶಿಸಲಾಗಿದೆ.
ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.
‘ಸಿಸಿಬಿ ಪೊಲೀಸರು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ದುಡಿಯುವ ಮಹಿಳೆಯರ ಮೂಲಭೂತ ಹಕ್ಕನ್ನು ಕಸಿದುಕೊಂಡಿದ್ದಾರೆ. ಇದರಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಬದುಕು ಸಾಗಿಸಲಾಗದೆ ಕಂಗಾಲಾಗಿದ್ದಾರೆ. ಮುಂಚಿತವಾಗಿ ನೋಟಿಸ್ ನೀಡದೆ ನಮ್ಮ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ಮಾಡಿ ಮುಚ್ಚಿಸಲಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.