ಬೆಂಗಳೂರು: ಅಬ್ಬರದ ಸಂಗೀತ ಬಳಸುತ್ತಿರುವ ಪಬ್, ಬಾರ್ ಅಂಡ್ ರೆಸ್ಟೊರೆಂಟ್ ಸೇರಿದಂತೆ 400 ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲೈಸನ್ಸಿಂಗ್ ಅಂಡ್ ಕಂಟ್ರೋಲಿಂಗ್ ಆಫ್ ಪ್ಲೇಸಸ್ ಆಫ್ ಪಬ್ಲಿಕ್ ಎಂಟರ್‌ಟೈನ್ಮೆಂಟ್ (ಬೆಂಗಳೂರು ಸಿಟಿ)–2005’ ಆದೇಶದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಯಾರೇ ಅಬ್ಬರದ ಸಂಗೀತ ಹಾಕುವುದಾದರೂ ಅನುಮತಿ ಪಡೆಯುವುದು ಕಡ್ಡಾಯ. ಇದನ್ನು ಪಾಲಿಸುವಂತೆ ಎಚ್ಚರಿಕೆ ನೀಡಿ ನೋಟಿಸ್ ಕೊಡಲಾಗಿದೆ’ ಎಂದರು.
‘ಹಲವು ಪಬ್, ಬಾರ್ ಅಂಡ್ ರೆಸ್ಟೊರೆಂಟ್‌ಗಳಲ್ಲಿ ನಿತ್ಯವೂ ಅಬ್ಬರದ ಸಂಗೀತ ಕೇಳಿಬರುತ್ತಿದೆ. ಅದರಿಂದ ತೊಂದರೆ ಆಗುತ್ತಿರುವುದಾಗಿ ಸಾರ್ವಜನಿಕರು ದೂರು ನೀಡುತ್ತಲೇ ಇದ್ದಾರೆ. ನಿಯಮದ ಪ್ರಕಾರ ಸಂಗೀತ ಬಳಕೆ ಮಾಡಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅದಾದ ಬಳಿಕವೂ ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದರು.
ವರದಿ ಬಾಕಿ: ‘ಅಪಘಾತ ಹಾಗೂ ಎನ್‌ಡಿಪಿಎಸ್ (ಮಾದಕವಸ್ತು ನಿಯಂತ್ರಣ ಕಾಯ್ದೆ) ಅಡಿ ಉದ್ಯಮಿ ಆದಿಕೇಶವಲು ಮೊಮ್ಮಗ ಗೀತವಿಷ್ಣು ವಿರುದ್ಧ ದಾಖಲಾದ ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರುವುದು ಬಾಕಿ ಇದೆ. ಅದು ಕೈ ಸೇರಿದ ನಂತರವೇ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಸುನೀಲ್‌ಕುಮಾರ್ ಹೇಳಿದರು.
ಜಾಮೀನಿನ ಮೇಲೆ ಹೊರಬಂದು ಮನೆಗಳವು: ಮೂವರ ಬಂಧನ
ಬೆಂಗಳೂರು: ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಗೊಲ್ಲಹಳ್ಳಿ ಮುಖ್ಯರಸ್ತೆಯ ನಿವಾಸಿ ಉಮಾಶಂಕರ್, ವಿ. ಶ್ರೀನಿವಾಸ್ ಹಾಗೂ ಮಧುಸೂದನ್ ರೆಡ್ಡಿ ಬಂಧಿತರು. ಅವರಿಂದ ₹ 20 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು, ಎರಡು ಬೈಕ್, ಟಿ.ವಿ ಹಾಗೂ ಲ್ಯಾಪ್‌ಟಾಪ್ ಗಳನ್ನು ಜಪ್ತಿ ಮಾಡಲಾಗಿದೆ.
ಆಂಧ್ರದಲ್ಲಿ ಕೆಲವು ವರ್ಷ ನೆಲೆಸಿದ್ದ ಆರೋಪಿಗಳು ಪ್ರತ್ಯೇಕವಾಗಿ ಕಳ್ಳತನ ಎಸಗಿದ್ದರು. ಆ ಸಂಬಂಧ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲೇ ಪರಿಚಯವಾಗಿದ್ದ ಈ ಮೂವರೂ ಸ್ನೇಹಿತರಾಗಿ ದ್ದರು. ಒಟ್ಟಿಗೇ ಕಳ್ಳತನ ಎಸಗಲು ಜೈಲಿನಲ್ಲೇ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.
ಮೊದಲಿಗೆಉಮಾಶಂಕರ್‌ಗೆ ಮಾತ್ರ ಜಾಮೀನು ಸಿಕ್ಕಿತ್ತು. ಕೆಲ ದಿನಗಳ ನಂತರ ಆತನೇ ಉಳಿದ ಇಬ್ಬರಿಗೆ ಜಾಮೀನು ಕೊಡಿಸಿ ಬೆಂಗಳೂರಿಗೆ ಕರೆತಂದಿದ್ದ. ಹೆಬ್ಬಗೋಡಿಯಲ್ಲಿ ಬಾಡಿಗೆ ಮನೆ ಸಹ ಮಾಡಿಕೊಟ್ಟಿದ್ದ. ನಂತರ, ಮೂವರು ಸೇರಿಯೇ ಮನೆಗಳವು ಮಾಡಲಾರಂಭಿಸಿದ್ದರು ಎಂದರು.
ಆರೋಪಿಗಳ ಬಂಧನದಿಂದ ಕೋರಮಂಗಲ, ಹೆಬ್ಬಗೋಡಿ, ಜಿಗಣಿ ಹಾಗೂ ಆನೇಕಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆ ಆಗಿವೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.