ADVERTISEMENT

‘ಬಾರ್ಕ್‌’ನಲ್ಲಿ ಭ್ರಷ್ಟಾಚಾರದ ಆರೋಪ; ಆದೇಶ ಕಾಯ್ದಿರಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 19:32 IST
Last Updated 13 ನವೆಂಬರ್ 2018, 19:32 IST
ಬಾರ್ಕ್‌ ಸಂಸ್ಥೆಯ ಲೋಗೊ
ಬಾರ್ಕ್‌ ಸಂಸ್ಥೆಯ ಲೋಗೊ   

ಬೆಂಗಳೂರು: ಮೈಸೂರಿನ ಮೆಸರ್ಸ್‌ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರಕ್ಕೆ (ಬಾರ್ಕ್‌) ಔಷಧಿ ಪೂರೈಸುವ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮುಂಬೈನ ‘ಸನೋಫಿ ಇಂಡಿಯಾ ಲಿಮಿಟೆಡ್‌ ಕಂಪನಿ’ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಗೊಳಿಸಲು ಕೋರಿದ ಅರ್ಜಿಯ ಮೇಲಿನ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಈ ಕುರಿತಂತೆ ಸನೋಫಿ ಕಂಪನಿ ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಕ್ತಾಯಗೊಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ, ‘ಪ್ರಕರಣದಲ್ಲಿ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿರ್ದಿಷ್ಟ ವ್ಯಕ್ತಿಗಳನ್ನು ಹೆಸರಿಸಿಲ್ಲ. ಆದ್ದರಿಂದ ಅರ್ಜಿ ವಜಾ ಮಾಡಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬಾರ್ಕ್‌ನಲ್ಲಿ ನಡೆದಿರುವ ಈ ಭ್ರಷ್ಟಾಚಾರದ ಆರೋಪ ಸಹನೀಯವಲ್ಲ. ಇಂತಹವುಗಳನ್ನು ಬಡಪೆಟ್ಟಿಗೆ ಬಿಟ್ಟರೆ ವಿಜ್ಞಾನಿಗಳ ಬಗ್ಗೆ ಹೊರಜಗತ್ತಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದರು.

’ಕೇವಲ ಕಂಪನಿಯ ವಿರುದ್ಧವೇ ದೂರು ದಾಖಲಿಸಿಕೊಳ್ಳಲು ಅವಕಾಶವಿದೆ’ ಎಂಬ ಅಂಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿತು.

ಎಫ್‌ಐಆರ್‌ನಲ್ಲಿ ಹೇಳಿರುವುದೇನು?: ‘ಟೆಂಡರ್‌ ನೀಡುವಾಗ ಎಲ್‌–1 ನಿಯಮ ಕಡೆಗಣಿಸಲಾಗಿದೆ. ಸಂಗ್ರಹಣೆ ಮತ್ತು ನಿರ್ವಹಣೆ ಕೈಪಿಡಿ ಹಾಗೂ ಸಾಮಾನ್ಯ ಆರ್ಥಿಕ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಕುರಿತಂತೆ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ 2015ರ ಜುಲೈ 31ರಂದು ಅರ್ಜಿದಾರ ಕಂಪನಿಯೂ ಸೇರಿದಂತೆ ಬಾರ್ಕ್‌ನ ಡಾ. ಪಿ.ಆನಂದ ವೈಜ್ಞಾನಿಕ ಅಧಿಕಾರಿ (ವೈದ್ಯಕೀಯ ವಿಭಾಗ), ಮೆಸರ್ಸ್‌ ಅಪೋಲೊ ಆಸ್ಪತ್ರೆ ಎಂಟರ್‌ಪ್ರೈಸಸ್‌, ಅಹಮದಾಬಾದ್‌ನ ಮೆಸರ್ಸ್‌ ಅಲೆಂಬಿಕ್‌ ಫಾರ್ಮಾಸ್ಯುಟಿಕಲ್‌ ಕಂಪನಿ, ಬಾರ್ಕ್‌ನ ಅಧಿಕಾರಿಗಳು ಹಾಗೂ ಇತರ ಕಂಪನಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಈ ಆರೋಪಗಳ ಅನುಸಾರ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಅರ್ಜಿದಾರರ ಆಕ್ಷೇಪ ಏನು?

* ಎಫ್‌ಐಆರ್‌ನಲ್ಲಿ ಕಾಣಿಸಿರುವ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯ ಮೂಲಗಳನ್ನು ಸಿಬಿಐ ಬಹಿರಂಗಪಡಿಸಿಲ್ಲ.

* ಪ್ರಕರಣವನ್ನು ಸಂಜ್ಞೇಯ ಅಪರಾಧ ಎಂದು ವಿಚಾರಣೆಗೆ ಪರಿಗಣಿಸಿರುವ ವಿಚಾರಣಾ ನ್ಯಾಯಾಲಯದ ನಿಲುವು ಯಾಂತ್ರಿಕವಾಗಿದೆ ಮತ್ತು ಕಾನೂನಾತ್ಮಕವಾಗಿಲ್ಲ.

* ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 11 ಮತ್ತು 13ರ ಪ್ರಕಾರ ಡಾ. ಆನಂದ್‌ ಸಾರ್ವಜನಿಕ ಸೇವಕರಲ್ಲ.

* ಸಂಚು ರೂಪಿಸಲಾಗಿದೆ ಎಂಬ ಆರೋಪಗಳನ್ನು ಸಮರ್ಥಿಸುವ ಸತ್ವಯುತ ಅಂಶಗಳು ದಾಖಲೆಗಳಲ್ಲಿ ಇಲ್ಲ.

* ಮೋಸ ಮಾಡಬೇಕು ಎಂಬ ಹಾಗೂ ಅಪರಾಧದ ಉದ್ದೇಶಗಳಿಂದ ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬುದನ್ನು ಸಮರ್ಥಿಸುವಂತಹ ಅಂಶಗಳೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.