ADVERTISEMENT

‘ಪತ್ರಕರ್ತರಿಗೆ ವಿಮೆ ಇರುತ್ತದೆಯೇ’

ಬರ್ಖಾ ದತ್‌ಗೆ ಪುಟಾಣಿಗಳಿಂದ ಪ್ರಶ್ನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:21 IST
Last Updated 28 ಅಕ್ಟೋಬರ್ 2018, 20:21 IST
ಮುಕುಂದ್ ಪದ್ಮನಾಭನ್‌ ಹಾಗೂ ಬರ್ಖಾ ದತ್‌ ಚರ್ಚೆಯಲ್ಲಿ ಭಾಗವಹಿಸಿದ್ದರು
ಮುಕುಂದ್ ಪದ್ಮನಾಭನ್‌ ಹಾಗೂ ಬರ್ಖಾ ದತ್‌ ಚರ್ಚೆಯಲ್ಲಿ ಭಾಗವಹಿಸಿದ್ದರು   

ಬೆಂಗಳೂರು: ‘ನೀವು ಯುದ್ಧಭೂಮಿಯಿಂದ ವರದಿ ಮಾಡಿದ್ದೀರಿ. ಇಂತಹ ಸಾಹಸಕ್ಕೆ ಮುಂದಾಗುವ ಪತ್ರಕರ್ತರಿಗೆ ವಿಮೆ ಸೌಲಭ್ಯ ಇರುತ್ತದೆಯೇ. ಕುಟಂಬದ ಜವಾಬ್ದಾರಿ ನಿಮಗಿರುವುದಿಲ್ಲವೇ. ಭದ್ರತೆಯೇ ಇಲ್ಲದ ಪಕ್ಷದಲ್ಲಿ ಏಕೆ ಪತ್ರಕರ್ತರಾಗಬೇಕು...’

ಪತ್ರಕರ್ತೆ ಬರ್ಖಾ ದತ್‌ ಅವರಿಗೆ ಪುಟಾಣಿಗಳು ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

‘ನಾವೂ ಕೂಡ ಪತ್ರಕರ್ತರಾಗಬೇಕು’ ಎಂಬ ವಿಷಯದ ಕುರಿತು ಮಕ್ಕ
ಳೊಂದಿಗೆ ಅವರು ಚರ್ಚೆ ನಡೆಸಿದರು. ‘ಕೇವಲ ಯುದ್ಧದ ವರದಿ ಮಾಡುವುದಷ್ಟೇ ಪತ್ರಕರ್ತರ ಕೆಲಸ ಅಲ್ಲ. ನೀವು ಕ್ರೀಡೆ, ಸಿನಿಮಾ, ವಾಣಿಜ್ಯ ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು’ ಎಂದು ಬರ್ಖಾ ದತ್‌ ಅವರು ಚಿಣ್ಣರಿಗೆ ಸಲಹೆ ನೀಡಿದರು.

ADVERTISEMENT

‘ಕಾರ್ಗಿಲ್‌ ಯುದ್ಧದ ವರದಿ ಮಾಡುವಾಗ ಆರಂಭದಲ್ಲಿ ಕಷ್ಟ ಆಯಿತು. ಒಟ್ಟಿಗೇ ಅಷ್ಟೊಂದು ಹೆಣಗಳನ್ನು ನೋಡಿದ್ದು ಮೊದಲ ಬಾರಿ. ಅಲ್ಲದೇ ಗುಂಡಿನ ಸದ್ದು, ಸುತ್ತಲೂ ಭಯದ ವಾತಾವರಣ ಇವೆಲ್ಲವೂ ಬಹಳ ದಿನ ನನ್ನನ್ನು ಕಾಡಿತ್ತು’ ಎಂದು ಅವರು ತಮ್ಮ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡರು.

ಪತ್ರಕರ್ತ ಮುಕುಂದ್‌ ಪದ್ಮನಾಭನ್‌, ‘ಸಾಮಾಜಿಕ ಜಾಲತಾಣಗಳಿಂದ ನಾನು ಯಾವಾಗಲೂ ಅಂತರ ಕಾಯ್ದುಕೊಂಡಿದ್ದೇನೆ. ಜಾಲತಾಣಗಳಲ್ಲಿ ಬರೆಯುವುದೇ ಪತ್ರಿಕೋದ್ಯಮ ಎಂದು ಕೆಲವರು ಭಾವಿಸಿದಂತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬರ್ಖಾ ದತ್‌, ‘ಮೀ–ಟೂ ನಂತಹ ಆಂದೋಲನಗಳು ಸಾಮಾಜಿಕ ಜಾಲತಾಣಗಳಲ್ಲಿಯೇ ಹುಟ್ಟಿಕೊಂಡಿವೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವೂ ಆಗಿದೆ’ ಎಂದರು.

‘ನಾವು ಸಾಮಾಜಿಕ ಜಾಲತಾಣದಲ್ಲಿ ಇಲ್ಲ. ನಮ್ಮಂತಹ ಲಕ್ಷಾಂತರ ಮಂದಿ ಇದನ್ನು ಬಳಸುತ್ತಿಲ್ಲ. ‘ಮೀ–ಟೂ’ ನಂತಹ ಹೋರಾಟಗಳಿಗೆ ನಾವು ಬೆಂಬಲ ಸೂಚಿಸುವುದು ಹೇಗೆ’ ಎಂದು ಮಕ್ಕಳು ಪ್ರಶ್ನಿಸಿದರು.

‘ಹೌದು. ಇದು ಆಪ್ತವಾದ ಪ್ರಶ್ನೆ. ಯಾವುದೇ ಆಂದೋಲನ ಕೇವಲ ಸಾಮಾಜಿಕ ಜಾಲತಾಣದಲ್ಲಿಯೇ ಹುಟ್ಟಿಕೊಂಡರೆ ಅದು ಅಲ್ಲಿಯೇ ಸಾಯಬೇಕಾಗುತ್ತದೆ. ಅದರ ಹೊರಗಿರುವವರ ಚರ್ಚೆ ಹಾಗೂ ಪ್ರತಿಕ್ರಿಯೆಗೆ ಅದು ಒಳಗೊಳ್ಳಬೇಕು’ ಎಂದು ಮುಕುಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.