ADVERTISEMENT

ತರಾತುರಿಯಲ್ಲಿ ಡಾಂಬರೀಕರಣ ಆರೋಪ| ಅಭಿವೃದ್ಧಿ ಸಹಿಸದೆ ವೃಥಾ ಆರೋಪ: ರವಿ ಸುಬ್ರಮಣ್ಯ

​ಪ್ರಜಾವಾಣಿ ವಾರ್ತೆ
Published 3 ಮೇ 2023, 20:42 IST
Last Updated 3 ಮೇ 2023, 20:42 IST
 ರವಿ ಸುಬ್ರಮಣ್ಯ
 ರವಿ ಸುಬ್ರಮಣ್ಯ   

ಬೆಂಗಳೂರು: ‘ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ, ವೃಥಾ ಆರೋಪ ಮಾಡುವುದು ಕಾಂಗ್ರೆಸ್‌ ನಾಯಕರ ಚಾಳಿಯಾಗಿದೆ’ ಎಂದು ಬಸನವಗುಡಿ ಶಾಸಕ ರವಿ ಸುಬ್ರಮಣ್ಯ ದೂರಿದ್ದಾರೆ.

‘ಬಸವನಗುಡಿ ಕ್ಷೇತ್ರದಲ್ಲಿ ತರಾತುರಿಯಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಈ ಹಿಂದೆ  ಎಲ್ಲ ಪ್ರಕ್ರಿಯೆ ಮುಗಿಸಿರುವ ಕಾಮಗಾರಿಗಳನ್ನೇ ನಡೆಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಜನರ, ಮತದಾರರ, ನಿವಾಸಿಗಳ ಆಕ್ಷೇಪ ಇಲ್ಲ. ಆದರೆ, ಕೆಲವರಿಗೆ ಹೊಲಸು ಮಾತ್ರ ಕಾಣುತ್ತದೆ’ ಎಂದು ಅವರು ಹೇಳಿದ್ದಾರೆ.

‘ಶೇ 40ರಷ್ಟು ಕಮಿಷನ್ ಆಸೆಗೆ ರಸ್ತೆಗಳಿಗೆ ಡಾಂಬರ್ ಹಾಕಿ ಮೇಕಪ್ ಮಾಡಲಾಗಿದೆ’ ಎಂಬ ಕೆಪಿಸಿಸಿ ವಕ್ತಾರ ಶಂಕರ್ ಗುಹಾ ಅವರ ಆರೋಪಕ್ಕೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ಕ್ಷೇತ್ರದ ಯಾವುದೋ ಮೂಲೆಯಲ್ಲಿ ನಿಂತು ಒಂದು ಗುಂಡಿಯ ಚಿತ್ರ ತೆಗೆಸಿಕೊಂಡಿದ್ದಾರೆ. ಭಾರಿ ಗಾತ್ರದ ವಾಹನಗಳು ಚಲಿಸಿದ್ದರಿಂದ ಮ್ಯಾನ್‌ಹೋಲ್‌ ಸಮೀಪ ರಸ್ತೆ ಕುಸಿದಿರುವುದನ್ನು ಅಗೆದು, ಫೋಟೋಗೆ ಪೋಸ್‌ ನೀಡಿದ್ದಾರೆ. ಅಂತಹ ಗಿಮಿಕ್‌ ಮಾಡುವಲ್ಲಿ ಅವರು ನಿಸ್ಸೀಮರು. ಆಗಿರುವ ಕೆಲಸವನ್ನು ಸಹಿಸದೆ ಇಂತಹ ಆರೋಪ ಮಾಡುತ್ತಾರೆ. ಅವರು ಹೇಳಿರುವ ಸ್ಥಳದಲ್ಲಿ ಡಾಂಬರು ಹಾಕಿ ಮೂರು ತಿಂಗಳಾಗಿದೆ. ಇವರಂತೆ ಶೇ 85ರಷ್ಟು ಕಮಿಷನ್ ತೆಗೆದುಕೊಳ್ಳುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಸವನಗುಡಿಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳನ್ನು ಹೊರತುಪಡಿಸಿದರೆ, ಇನ್ನೆಲ್ಲೂ ಗುಂಡಿಯ ಸಮಸ್ಯೆ ಇಲ್ಲ. ನಮ್ಮ ತೃಪ್ತಿಗೆ ಯಾವುದೇ ಕೆಲಸ ಮಾಡುವುದಿಲ್ಲ. ಜನರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಇವರ ಎಲ್ಲ ಆಟಾಟೋಪಗಳಿಗೆ ಜನರು ಮೇ 10ರಂದು ತಕ್ಕ ಪಾಠ ಕಲಿಸಲಿದ್ದಾರೆ. ಮೇ 13ಕ್ಕೆ ಅದರ ಫಲಿತಾಂಶ ಅವರಿಗೆಲ್ಲ ಗೊತ್ತಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಗಾಂಧಿಬಜಾರ್‌ ಮುಖ್ಯರಸ್ತೆಯ ಅಭಿವೃದ್ಧಿ ಬಸವನಗುಡಿ ವಿಧಾನಸಭೆ ಕ್ಷೇತ್ರಕ್ಕೆ ಬರುವುದಿಲ್ಲ. ಅದು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದ್ದು, ಅದಕ್ಕೆ ಅಲ್ಲಿನ ಶಾಸಕರು ಉತ್ತರ ನೀಡುತ್ತಾರೆ’ ಎಂದು ಹೇಳಿದ್ದಾರೆ.

‘ಜೈಲಿಗೆ ಹೋದವರು ದಾಖಲೆ ಏಕೆ ಕೊಟ್ಟಿಲ್ಲ?’

‘ಗುತ್ತಿಗೆದಾರರ ಸಂಘದ ಅಧ್ಯಕ್ಷರು ಶೇ 40ರಷ್ಟು ಕಮಿಷನ್‌ ಎಂದು ದಾಖಲೆ ಇಲ್ಲದೆ ಆರೋಪ ಮಾಡಿದ್ದಾರೆ. ಅದನ್ನು ಸಾಬೀತುಪಡಿಸದೆ ಜೈಲಿಗೆ ಹೋಗಿಯೂ ಬಂದಿದ್ದಾರೆ. ಸುಮ್ಮನೆ ಆರೋಪ ಮಾಡುವ ಬದಲು ದಾಖಲೆಗಳನ್ನು ನೀಡಲಿ’ ಎಂದು ರವಿ ಸುಬ್ರಮಣ್ಯ ಆಗ್ರಹಿಸಿದ್ದಾರೆ. ‘ಸುಳ್ಳು ಹೇಳಿರುವ ವ್ಯಕ್ತಿಗಳ ಮಾತನ್ನು ಕೇಳಿಕೊಂಡು ತಮ್ಮದೂ ಇರಲಿ ಎಂದು ಬೇಕಾದಾಗಲೆಲ್ಲ ಶಂಕರ ಗುಹಾ ಅವರು ಮಾತನಾಡುತ್ತಲೇ ಇರುತ್ತಾರೆ. ಅವರ ಮಾತಿಗೆ ಬೆಲೆ ಇಲ್ಲ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.