ADVERTISEMENT

ಬಸವನಗುಡಿ ಕಡಲೆಕಾಯಿ ಪರಿಷೆ: ವ್ಯಾಪಾರಿಗಳಿಗೆ ಸುಂಕ ವಿನಾಯಿತಿ

ಬಸವನಗುಡಿಯಲ್ಲಿ ನವೆಂಬರ್‌ 25, 26ರಂದು ಆಯೋಜನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 0:18 IST
Last Updated 17 ನವೆಂಬರ್ 2024, 0:18 IST
ಬಸವನಗುಡಿಯಲ್ಲಿ 2023ರ ಡಿಸೆಂಬರ್‌ನಲ್ಲಿ ನಡೆದ ಕಡಲೆಕಾಯಿ ಪರಿಷೆ (ಸಂಗ್ರಹ ಚಿತ್ರ)
ಬಸವನಗುಡಿಯಲ್ಲಿ 2023ರ ಡಿಸೆಂಬರ್‌ನಲ್ಲಿ ನಡೆದ ಕಡಲೆಕಾಯಿ ಪರಿಷೆ (ಸಂಗ್ರಹ ಚಿತ್ರ)   

ಬೆಂಗಳೂರು: ಬಸವನಗುಡಿಯ ಸುಂಕೇನಹಳ್ಳಿಯಲ್ಲಿ ಇದೇ ತಿಂಗಳ ಕೊನೆಯವಾರ ಸೋಮವಾರ ಮತ್ತು ಮಂಗಳವಾರ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಿಗಳಿಗೆ ಸುಂಕ ಹಾಗೂ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಇದೇ ಮೊದಲ ಬಾರಿಗೆ ಸುಂಕಕ್ಕೆ ಟೆಂಡರ್‌ ಹಾಗೂ ವ್ಯಾಪಾರಿಗಳಿಗೆ ಸುಂಕವಿಲ್ಲದೆ ಕಡಲೆಕಾಯಿ ಪರಿಷೆ ನಡೆಯಲಿದೆ.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ದತ್ತಿ ಪರಿಷತ್‌ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ADVERTISEMENT

ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಬಸವನಗುಡಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಸುಂಕ ವಸೂಲಿ ಮಾಡಲಾಗುತ್ತಿತ್ತು. ಇದಕ್ಕಾಗಿ ಟೆಂಡರ್‌ ಕರೆದು ಅನುಮತಿ ನೀಡಲಾಗುತ್ತಿತ್ತು. ಟೆಂಡರ್‌ ಪಡೆದವರು ವ್ಯಾಪಾರಿಗಳಿಂದ ಬಲವಂತವಾಗಿ ಹೆಚ್ಚು ಸುಂಕವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಕಳೆದ ಕೆಲವು ವರ್ಷಗಳಿಂದ ದೂರುಗಳು ಬರುತ್ತಿದ್ದವು. ಆದ್ದರಿಂದ, ಈ ವರ್ಷದಿಂದ ಸುಂಕ ವಸೂಲಿಗೆ ಟೆಂಡರ್‌ ಕೈಬಿಡಲು ಹಾಗೂ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡದಂತೆ ನಿರ್ಧರಿಸಲಾಗಿದೆ. ಒಂದು ವೇಳೆ ಯಾರಾದರೂ ಅನಧಿಕೃತವಾಗಿ ಸುಂಕ ವಸೂಲಿ ಮಾಡುವುದು ಕಂಡಬಂದಲ್ಲಿ ಪೊಲೀಸ್‌ ಇಲಾಖೆಯವರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ. ಬಿಬಿಎಂಪಿ, ಪೊಲೀಸ್‌ ಇಲಾಖೆ ಹಾಗೂ ದೊಡ್ಡ ಗಣಪತಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಇದರ ಮೇಲ್ವಿಚಾರಣೆ ನಡೆಸಲೂ ಸೂಚಿಸಲಾಗಿದೆ.

ರಸ್ತೆಯಲ್ಲಿ ಬ್ಯಾರಿಕೇಡ್‌, ಸಂಚಾರ ನಿಯಂತ್ರಣ, ನಿರಂತರ ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆ, ದೇವಾಲಯದ ಒಳ ಮತ್ತು ಹೊರಭಾಗದಲ್ಲಿ ವಿದ್ಯುತ್‌ ದೀಪಾಲಂಕಾರ, ಸಾರ್ವಜನಿಕ ಶೌಚಾಲಯ, ಬೀದಿ ದೀ‍ಪಗಳ ಅಳವಡಿಕೆ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ವಾಹನಗಳ ನಿಲುಗಡೆ ನಿಷೇಧ, ಅಗ್ನಿ ಶಾಮಕ ವಾಹನ ನಿಯೋಜನೆ, ಮಾರ್ಷಲ್‌ಗಳ ನಿಯೋಜನೆಗಳಿಸಲು ಬಿಬಿಎಂಪಿ, ಪೊಲೀಸ್‌ ಇಲಾಖೆ, ಎನ್‌ಜಿಒ ಮತ್ತು ಧಾರ್ಮಿಕ ದತ್ತಿ ಪರಿಷತ್‌, ದೊಡ್ಡ ಗಣಪತಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಜವಾಬ್ದಾರಿ ವಹಿಸಲಾಯಿತು.

ಪ್ಲಾಸ್ಟಿಕ್‌ ನಿಷೇಧ: ಕಡಲೆಕಾಯಿ ಪರಿಷೆಯಲ್ಲಿ ಎನ್‌ಜಿಒಗಳ ಸಹಕಾರೊಂದಿಗೆ ಪ್ಲಾಸ್ಟಿಕ್‌ ಚೀಲಗಳನ್ನು ಬಳಸದಂತೆ ‘ಪರಿಷೆಗೆ ಬನ್ನಿ ಕೈಚೀಲ ತನ್ನಿ’ ಎಂಬ ಘೋಷಣೆ ಮೂಲಕ ವ್ಯಾಪಾರಿಗಳು ಹಾಗೂ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಪ್ಲಾಸ್ಟಿಕ್‌ ಚೀಲಗಳ ಬದಲಿಗೆ ಬಟ್ಟೆ ಬ್ಯಾಗ್‌ಗಳನ್ನು ಬಳಸುವಂತೆ ಸೂಚಿಸಬೇಕು. ಪ್ಲಾಸ್ಟಿಕ್‌ ಚೀಲಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

‘ರೈತರಿಂದ ಜನರಿಗೋಸ್ಕರ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಇದೇ ಮೊದಲನೆಯ ಬಾರಿಗೆ ಟೆಂಡರ್ ಶುಲ್ಕ, ಟ್ಯಾಕ್ಸ್ ಇಲ್ಲದೆ ಪರಿಷೆ ನಡೆಯಲಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.