ಬೆಂಗಳೂರು: ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಆವರಣ ಮತ್ತು ಸುತ್ತಮುತ್ತಲ ಪ್ರದೇಶ ಸಜ್ಜಾಗಿದ್ದು, ಈ ಪರಿಷೆಗೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ಎರಡು ದಿನಗಳ ಈ ಪರಿಷೆಯ ಮುನ್ನಾದಿನವಾದ ಭಾನುವಾರವೇ ಬಸವಗುಡಿಯಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ವ್ಯಾಪಾರ ಕಳೆಗಟ್ಟಿತ್ತು. ರಜಾ ದಿನವಾದ್ದರಿಂದ ಬೆಳಿಗ್ಗೆಯಿಂದಲೇ ಅಧಿಕ ಸಂಖ್ಯೆಯಲ್ಲಿ ಜನರು ಬಂದಿದ್ದರು. ಸಂಜೆ ವೇಳೆಗೆ ಜನಸಾಗರವೇ ಹರಿದು ಬಂದಿದ್ದರಿಂದ ಜನದಟ್ಟಣೆ ಉಂಟಾಗಿತ್ತು.
ಗ್ರಾಮೀಣ ಸೊಗಡಿನ ಈ ಪರಿಷೆಗೆ ಸೋಮವಾರ ಬೆಳಿಗ್ಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಲ್.ಎ.ರವಿಸುಬ್ರಹ್ಮಣ್ಯ, ಉದಯ್ ಬಿ. ಗರುಡಾಚಾರ್ ಉಪಸ್ಥಿತರಿರುತ್ತಾರೆ. ದೊಡ್ಡಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ, ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಲಾಗುತ್ತದೆ.
ಎರಡೂ ದಿನ ಬ್ಯೂಗಲ್ ರಾಕ್ ಉದ್ಯಾನ ಹಾಗೂ ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬ್ಯೂಗಲ್ ರಾಕ್ ಉದ್ಯಾನದಲ್ಲಿ ಸೋಮವಾರ ಸಂಜೆ 6ರಿಂದ ವಿದ್ಯಾ ರವಿಶಂಕರ್ ತಂಡದಿಂದ ಸಮೂಹ ಭರತನಾಟ್ಯ ಪ್ರದರ್ಶನ, ವಿಜಯ ವಿಠಲ ಶಾಲೆಯಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ, ಮಂಗಳವಾರ ಸಂಜೆ 7ರಿಂದ ಆದರ್ಶ ಸುಗಮ ಸಂಗೀತ ಅಕಾಡೆಮಿಯಿಂದ ‘ಕನ್ನಡ ಡಿಂಡಿಮ’ ಕನ್ನಡ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನರಸಿಂಹಸ್ವಾಮಿ ಉದ್ಯಾನದಲ್ಲಿ ಸೋಮವಾರ ಸಂಜೆ 6ರಿಂದ ಸಿರಿಕಲಾ ಮೇಳ ತಂಡದಿಂದ ‘ಭಕ್ತ ಸುಧನ್ವ’ ಯಕ್ಷಗಾನ ಪ್ರದರ್ಶನ, ಮಂಗಳವಾರ ಸಂಜೆ 6ರಿಂದ ಆಲಾಪ್ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್‌ನಿಂದ ಭರತನಾಟ್ಯ ಹಾಗೂ ವೀಣಾ ವಾದನ, ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.