ADVERTISEMENT

ಇಲಿ ಪಾಷಾಣ ಬೆರೆಸಿರುವ ಶಂಕೆ: ಎರಡು ಕೋತಿಗಳ ಸಾವು

35ಕ್ಕೂ ಅಧಿಕ ಮಂಗಗಳು ಅಪಾಯದಲ್ಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 22:23 IST
Last Updated 23 ಜನವರಿ 2020, 22:23 IST
ಮಂಗವೊಂದು ಸತ್ತಿರುವುದು (ಎಡಚಿತ್ರ ). ತೂಕಡಿಸುತ್ತಿರುವ ಮಂಗಗಳು
ಮಂಗವೊಂದು ಸತ್ತಿರುವುದು (ಎಡಚಿತ್ರ ). ತೂಕಡಿಸುತ್ತಿರುವ ಮಂಗಗಳು   

ಬೆಂಗಳೂರು: ಬಸವನಗುಡಿಯ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಎರಡು ಮಂಗಗಳು ಗುರುವಾರ ಸತ್ತು ಬಿದ್ದಿವೆ. ಈ ಪ್ರದೇಶದಲ್ಲಿ ಸುಮಾರು 35ಕ್ಕೂ ಅಧಿಕ ಕೋತಿಗಳು ಕಿರುಚುತ್ತಾ ವಿಚಿತ್ರ ವರ್ತನೆ ತೋರುತ್ತಿದ್ದು, ಕೆಲವು ಕುಳಿತಲ್ಲೇ ತೂಕಡಿಸುತ್ತಿದ್ದರೆ, ಇನ್ನು ಕೆಲವು ನಡೆಯಲಾಗದೆ ಓಲಾಡುತ್ತಿವೆ. ‌

ಕಿಡಿಗೇಡಿಗಳು ಮಂಗಗಳಿಗೆ ವಿಷಪ್ರಾಶನ ಮಾಡಿರುವ ಸಾಧ್ಯತೆ ಇದೆ. ವಿಷಪೂರಿತ ಆಹಾರ ಸೇವಿಸಿ ಅವು ಈ ರೀತಿ ವರ್ತಿಸುತ್ತಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಗಳನ್ನು ಹಿಡಿದು ಚಿಕಿತ್ಸೆ ಒದಗಿಸಲು ಪಾಲಿಕೆಯ ಅರಣ್ಯ ವಿಭಾಗದ ಸಿಬ್ಬಂದಿ, ಪಶುವೈದ್ಯರು ಹಾಗೂ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯರು ಪ್ರಯತ್ನಿಸುತ್ತಿದ್ದಾರೆ.

‘ಬಸವನಗುಡಿ ಬಳಿಯ ಅಪಾರ್ಟ್‌ಮೆಂಟ್‌ ಒಂದರ ಬಳಿ ಕೋತಿಗಳು ವಿಚಿತ್ರವಾಗಿ ವರ್ತಿಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ನಾವು ಸ್ಥಳಕ್ಕೆ ತಲುಪಿದಾಗ ಅನೇಕ ಕೋತಿಗಳು ಇಲ್ಲಿನ ಮಾವಿನಮರದ ಮೇಲೇರಿ ತೂಕಡಿಸುತ್ತಿರುವುದು ಕಂಡು ಬಂತು. ಎರಡು ಸತ್ತು ಬಿದ್ದಿದ್ದವು’ ಎಂದು ಗೌರವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೋತಿಗಳು ಕೈಗೆ ಸಿಕ್ಕರೆ, ಚಿಕಿತ್ಸೆ ನೀಡಿ ಉಳಿಸಿಕೊಳ್ಳಬಹುದು. ಹಿಡಿಯಲು ಹೋದಾಗ ಮರದ ತುದಿಗೇರಿ ತಪ್ಪಿಸಿಕೊಳ್ಳುತ್ತಿವೆ. ಎರಡು ಕೋತಿಗಳನ್ನು ಹಿಡಿದಿದ್ದೇವೆ. ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೆಂಗೇರಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಇನ್ನಷ್ಟು ಮಂಗಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಚಿಕಿತ್ಸೆ ನೀಡದಿದ್ದರೆ ಅವು ಸಾಯುವ ಅಪಾಯವಿದೆ’ ಎಂದು ಅವರು ಮಾಹಿತಿ ನೀಡಿದರು.

ಬಸವನಗುಡಿ ಬಳಿ ಸುಮಾರು 35ರಿಂದ 40 ಮಂಗಗಳ ಗುಂಪು ಕೆಲ ಸಮಯದಿಂದ ನೆಲೆಸಿದೆ. ಅವು ಆಸುಪಾಸಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ನುಗ್ಗಿ ಉಪಟಳ ನೀಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದರು.

ಇಲಿ ಪಾಷಾಣ ಬಳಕೆ ಶಂಕೆ: ‘ಮಂಗಗಳು ಕಾಯಿಲೆಯಿಂದ ಸತ್ತಿರುವ ಸಾಧ್ಯತೆ ಕಡಿಮೆ. ಅವು ಇಲಿ ಪಾಷಾಣ ಬೆರೆಸಿದ ಆಹಾರ ಸೇವಿಸಿದಂತಿದೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಅವುಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ’ ಎಂದು ಪ್ರಸನ್ನ ಕುಮಾರ್‌ ತಿಳಿಸಿದರು.

‘ವಿಷಪ್ರಾಶನ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಕೋರಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ’ ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.