ADVERTISEMENT

ಉಗ್ರರ ಚಟುವಟಿಕೆ ಕಡಿವಾಣಕ್ಕೆ ಹದ್ದಿನ ಕಣ್ಣಿಡಿ: ಬೊಮ್ಮಾಯಿ ಸೂಚನೆ

ಅಪರಾಧ ಚಟುವಟಿಕೆಗೆ ಕಡಿವಾಣ: ಎನ್‌ಐಎ ಎಚ್ಚರಿಕೆ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 1:39 IST
Last Updated 16 ಅಕ್ಟೋಬರ್ 2019, 1:39 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಉಗ್ರರು ನಗರವನ್ನು ನೆಲೆ ಮಾಡಿಕೊಂಡಿದ್ದಾರೆಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ, ಹಿರಿಯ ಅಧಿಕಾರಿಗಳ ಜೊತೆ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣ ವಿಚಾರ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಂಗಳವಾರ ಚರ್ಚೆ ನಡೆಸಿದರು.

‘ಉಗ್ರಗಾಮಿ ಚಟುವಟಿಕೆಗೆ ಕಡಿವಾಣ ಹಾಕಲು ನಗರಕ್ಕೆಂದೇ ಪ್ರತ್ಯೇಕವಾಗಿ ಎಟಿಎಸ್ ತೆರೆಯಲು ಸಿದ್ಧತೆ ನಡೆದಿದೆ. ಭಯೋತ್ಪಾದನೆಗೆ ಸಂಬಂಧಿಸಿ ಪ್ರಕರಣಗಳನ್ನು ನಿರ್ವಹಿಸಿದ ಹಿರಿಯ ಅಧಿಕಾರಿಗಳನ್ನು ಈ ದಳಕ್ಕೆ ನೇಮಕ ಮಾಡಲಾಗುವುದು. ಚೆನ್ನೈ, ಮುಂಬೈ ಮತ್ತು ದೆಹಲಿಯಲ್ಲಿ ಈಗಾಗಲೇ ಎಟಿಎಸ್‌ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯಲ್ಲಿ ನಗರದಲ್ಲಿಯೂ ದಳ ಆರಂಭಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ನಗರ ವ್ಯಾಪ್ತಿಯ ಎಲ್ಲ ಎಂಟು ಡಿಸಿಪಿ ವಿಭಾಗಗಳಲ್ಲಿ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ವಸ್ತು) ಠಾಣೆ ತೆರೆಯಲು ಇಲಾಖೆಗೆ ಆರ್ಥಿಕ ನೆರವು ನೀಡಲಾಗಿದೆ. ಈ ಠಾಣೆಗಳಲ್ಲಿ ಪ್ರತ್ಯೇಕ ಅಧಿಕಾರಿ,ಸಿಬ್ಬಂದಿ ನಿಯೋಜಿಸಲಾಗುವುದು’ ಎಂದರು.

‘ಯಾರೇ ಅಪರಾಧ ಮಾಡಿದರೂ ಕೇವಲ ಒಂದೆರಡು ಗಂಟೆಗಳಲ್ಲಿ ಗಡಿ ಮೂಲಕ ನೆರೆ ರಾಜ್ಯಗಳಿಗೆ ಪಲಾಯನ ಮಾಡುವ ಸಾಧ್ಯತೆಯಿದೆ. ರೌಡಿ ನಿಗ್ರಹ ದಳ ಬಲಗೊಳಿಸಬೇಕು. ಆ ಮೂಲಕ, ರೌಡಿ ಚಟುವಟಿಕೆಗೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ’ ಎಂದ ಅವರು, ‘ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ನಗರವನ್ನು ಸುಂದರಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಪೊಲೀಸರ ಜೊತೆ ಜನಸಾಮಾನ್ಯರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಶೇ 36ರಷ್ಟು ಅಪರಾಧ: ‘ನಗರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಇಲ್ಲಿನ ಜನರ ಸುರಕ್ಷತೆ ಬಹಳ ಮುಖ್ಯವಾಗಿದೆ. ರಾಜ್ಯದ ಒಟ್ಟು ಅಪರಾಧ ಪ್ರಕರಣಗಳ ಪೈಕಿ ಶೇ 36ರಷ್ಟು ಬೆಂಗಳೂರಿನಲ್ಲಿಯೇ ನಡೆಯುತ್ತವೆ. ಅವುಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌ ಕಮಿಷನರ್‌ಗೆ ಸೂಚಿಸಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

‘ಸಂಚಾರ ನಿರ್ವಹಣೆ ದೊಡ್ಡ ಸವಾಲು’
‘ನಗರದಲ್ಲಿ ವಾಹನ ಸಂಚಾರ ಸಮಸ್ಯೆಯನ್ನು ಶೇ 100ರಷ್ಟು ಬಗೆಹರಿಸಲು ಸಾಧ್ಯವಿಲ್ಲ. ನಿತ್ಯ ಐದು ಸಾವಿರ ವಾಹನಗಳು ನೋಂದಣಿಯಾಗುತ್ತಿವೆ.1.20 ಕೋಟಿ ಜನಸಂಖ್ಯೆಗೆ 82.5 ಲಕ್ಷ ವಾಹನಗಳಿವೆ. ಆದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕೇವಲ 40 ಲಕ್ಷ ಜನ ಬಳಸುತ್ತಿದ್ದಾರೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಹೊಸೂರು ರಸ್ತೆ, ಬೆಂಗಳೂರು-ಪುಣೆ, ಮೈಸೂರು, ಹೈದರಾಬಾದ್, ಮಾಗಡಿ, ಕನಕಪುರ ಕಡೆಗೆ ಮುಖ ಮಾಡಿರುವ ರಸ್ತೆಗಳು ಸೇರಿ ಸಂಚಾರ ದಟ್ಟಣೆಯ 12ಕ್ಕೂ ಹೆಚ್ಚು ರಸ್ತೆಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ನೆರವು ಪಡೆದು ರಸ್ತೆ ಕಾಮಗಾರಿ ಮಾಡಿ, ಬೆಸ್ಕಾಂ, ಬಿಎಂಆರ್‌ಸಿಎಲ್‌, ಬಿಎಂಟಿಸಿ, ಸಂಚಾರ ಜತೆ ಜಂಟಿ ಸಭೆ ನಡೆಸಿ, ಸಿಗ್ನಲ್‌ ವ್ಯವಸ್ಥೆ ಕೂಡ ಅಭಿವೃದ್ಧಿಪಡಿಸಬೇಕಿದೆ’ ಎಂದರು.

‘ಕೇಂದ್ರ ವಾಣಿಜ್ಯ ಪ್ರದೇಶವನ್ನು (ಸಿಬಿಡಿ) ಇನ್ನಷ್ಟು ವಿಸ್ತರಿಸಲಾಗಿದೆ. ಅದಕ್ಕೆ ಮಾದರಿ ಸಂಚಾರ ವ್ಯವಸ್ಥೆ ಅಳವಡಿಸಲು ಉದ್ದೇಶಿಸಲಾಗಿದೆ. ಅದು ಯಶಸ್ವಿಯಾದರೆ ಅದೇ ಮಾದರಿಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು’ ಎಂದರು.

‘ನಿರ್ಲಕ್ಷ್ಯ ಮುಂದುವರಿದರೆ ಸುಮ್ಮನಿರಲ್ಲ’
ನಗರದಲ್ಲಿ ಗ್ಯಾಂಬ್ಲಿಂಗ್, ಬೆಟ್ಟಿಂಗ್, ಮಾದಕ ವಸ್ತು ಸಾಗಣೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪೊಲೀಸ್‌ ಅಧಿಕಾರಿಗಳನ್ನು ಗೃಹ ಸಚಿವರು ತರಾಟೆಗೆ ತೆಗೆದುಕೊಂಡರು.

‘ಇಂತಹ ಜಾಲಗಳನ್ನು ನಿರೀಕ್ಷಿತ ಮಟ್ಟದಲ್ಲಿ ಮಟ್ಟಹಾಕಲು ಸಾಧ್ಯವಾಗಿಲ್ಲ ಏಕೆ‘ ಎಂದು ಪ್ರಶ್ನಿಸಿದ ಅವರು, ‘ನಿರ್ಲಕ್ಷ್ಯ ಮುಂದುವರಿದರೆ ನಾನು ಸುಮ್ಮನಿರುವುದಿಲ್ಲ. ಜನಸಾಮಾನ್ಯರು ಇಂಥ ಕೃತ್ಯಗಳ ಬಗ್ಗೆ ದೂರು ನೀಡುವ ಮೊದಲೇ ಎಚ್ಚೆತ್ತುಕೊಂಡು ನಿಮ್ಮ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಯನ್ನು ಮಟ್ಟಹಾಕಿ’ ಎಂದು ಸೂಚಿಸಿದರು.

12 ಅಂಶಗಳ ಕಾರ್ಯಸೂಚಿ
ಅಧಿಕಾರಿಗಳಿಗೆ 12 ಅಂಶಗಳ ಕಾರ್ಯಸೂಚಿ ನೀಡಿದ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌, ಎಲ್ಲವನ್ನೂ ತಕ್ಷಣದಿಂದ ಜಾರಿಗೆ ತರುವಂತೆ ಸೂಚಿಸಿದ್ದಾರೆ.
* ಎಸಿಪಿ, ಡಿಸಿಪಿಗಳು ಕಡ್ಡಾಯವಾಗಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು
* ಪದೇ ಪದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ 35 ಸಾವಿರ ಆರೋಪಿಗಳ ಮಾಹಿತಿ ಅಪ್‍ಡೇಟ್ ಮಾಡಬೇಕು
* ಸಕ್ರಿಯರಾಗಿರುವ 6,500 ರೌಡಿಗಳ ಇತ್ತೀಚಿನ ಮಾಹಿತಿ ಸಂಗ್ರಹಿಸಬೇಕು
* ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಯು ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕೇಸಿನ ಫಾಲೋಅಪ್‌ ಮಾಡಬೇಕು
* ಪ್ರತಿ ಠಾಣಾಧಿಕಾರಿಗಳು ಉಗ್ರ ನಿಗ್ರಹ ಕಾರ್ಯಸೂಚಿ ಸಿದ್ಧಪಡಿಸಿ ಕಾರ್ಯೋನ್ಮುಖವಾಗಬೇಕು
* ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಪ್ರತ್ಯೇಕ ಅಪರಾಧ ನಿಗ್ರಹ ಕಾರ್ಯಸೂಚಿ ಸಿದ್ಧಪಡಿಸಿಕೊಳ್ಳಬೇಕು
* ಸಮುದಾಯ ಪೊಲೀಸಿಂಗ್‌ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು
* ಮೇಲಿನ ಅಧಿಕಾರಿಗಳು ತಮ್ಮ ಕೆಳಗಿನ ಸಿಬ್ಬಂದಿಯನ್ನು ಗೌರವದಿಂದ ನಡೆಸಿಕೊಳ್ಳಬೇಕು
* ಪೋಕ್ಸೊ ಮತ್ತು ಹೊಸ ಕಾನೂನುಗಳ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಬೇಕು
* ಪ್ರತಿ ಠಾಣೆ ಎಲ್ಲ ಸಿಬ್ಬಂದಿಗೂ ರೊಟೇಷನ್ ಆಧಾರದಲ್ಲಿ ಕೆಲಸ ಹಂಚಬೇಕು.
* ಪೊಲೀಸ್ ಸಿಬ್ಬಂದಿ ತನಿಖೆ ಮತ್ತು ಕ್ಷಿಪ್ರ ಪೊಲೀಸಿಂಗ್ ಬಗ್ಗೆ ಆಧುನಿಕ ಮನಸ್ಥಿತಿ ಬೆಳೆಸಿಕೊಳ್ಳಬೇಕು.
* ಇ-ಕೋರ್ಟ್‍ಗಳು ಸೇರಿದಂತೆ ಕಾನೂನಾತ್ಮಕ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು.

**

ಅಪರಾಧ ಕೃತ್ಯಗಳ ಪತ್ತೆಗೆ ಕಾಲಮಿತಿ ಹಾಕಿಕೊಳ್ಳಬೇಕು. ಅಪರಾಧಿಗಳು ಶಿಕ್ಷೆಗೆ ಗುರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.