ADVERTISEMENT

ಚೌಕಟ್ಟಿನಲ್ಲಿ ಕಂಡ ಬಾವಲಿ ಬದುಕು

ತೇಜಸ್ವಿ ಜನ್ಮದಿನದ ನೆಪದಲ್ಲಿ ನಿಗೂಢ ಲೋಕವೊಂದರ ಅನಾವರಣ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 19:45 IST
Last Updated 8 ಸೆಪ್ಟೆಂಬರ್ 2018, 19:45 IST
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಜೀವಲೋಕ 81 ಬಾವಲಿಗಳ ನಿಗೂಢಲೋಕದ ಛಾಯಾಚಿತ್ರ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ವೀಕ್ಷಿಸಿದರು. ಚಿತ್ರದಲ್ಲಿ ಬೆಂಗಳೂರು ಕೇಂದ್ರ ವಿವಿಯ ಕುಲಪತಿ ಡಾ. ಜಾಫಟ್‌, ಪರಿಷತ್‌ ಅಧ್ಯಕ್ಷ ಬಿ.ಎಲ್.ಶಂಕರ್, ಬೆಂಗಳೂರು ವಿವಿಯ ಕುಲಪತಿ ಡಾ.ವೇಣುಗೋಪಾಲ್, ಇನ್ವೆಂಟಿಕೋ ಅಗ್ರಿಟೆಕ್ ನಿರ್ದೇಶಕ ರವಿ ಉಮದಿ ಇದ್ದರು –ಪ್ರಜಾವಾಣಿ ಚಿತ್ರ
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಜೀವಲೋಕ 81 ಬಾವಲಿಗಳ ನಿಗೂಢಲೋಕದ ಛಾಯಾಚಿತ್ರ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ವೀಕ್ಷಿಸಿದರು. ಚಿತ್ರದಲ್ಲಿ ಬೆಂಗಳೂರು ಕೇಂದ್ರ ವಿವಿಯ ಕುಲಪತಿ ಡಾ. ಜಾಫಟ್‌, ಪರಿಷತ್‌ ಅಧ್ಯಕ್ಷ ಬಿ.ಎಲ್.ಶಂಕರ್, ಬೆಂಗಳೂರು ವಿವಿಯ ಕುಲಪತಿ ಡಾ.ವೇಣುಗೋಪಾಲ್, ಇನ್ವೆಂಟಿಕೋ ಅಗ್ರಿಟೆಕ್ ನಿರ್ದೇಶಕ ರವಿ ಉಮದಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಿಫಾ ಜ್ವರದ ವೈರಸ್‌ ಹರಡಿದ್ದು ತಾವೇ ಎಂಬ ಆರೋಪ ಹೊತ್ತು ಹಲವೆಡೆ ಪ್ರಾಣ ತೆತ್ತಿದ್ದ ಬಾವಲಿಗಳಿಗೆ ಚಿತ್ರಕಲಾ ಪರಿಷತ್‌ನಲ್ಲಿ ಶನಿವಾರ ಚೌಕಟ್ಟುಗಳಲ್ಲಿ ತುಂಬು ಗೌರವ.

ನಗರದ ಸಮೀಪದ ಮಾರೇನಹಳ್ಳಿಯಿಂದ ಹಿಡಿದು ದಕ್ಷಿಣ ಆಫ್ರಿಕಾ, ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಪ್ರಾಂತ್ಯದ ವರೆಗಿನ ಬಾವಲಿಗಳ ಸಮಗ್ರ ಚಿತ್ರಗಳನ್ನು ಕಟ್ಟಿಕೊಡಲಾಯಿತು.

ಪೂರ್ಣಚಂದ್ರ ತೇಜಸ್ವಿ ಅವರ 81ನೇ ಜನ್ಮದಿನದ ಅಂಗವಾಗಿ ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆ, ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನ, ಚಿತ್ರಕಲಾ ಪರಿಷತ್‌, ‘ಪ್ರಜಾವಾಣಿ’ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರದಿಂದ ‘ತೇಜಸ್ವಿ ಬಾವಲಿಗಳ ನಿಗೂಢ ಲೋಕ’ ಶೀರ್ಷಿಕೆಯ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.

ADVERTISEMENT

ಚೌಕಟ್ಟುಗಳಲ್ಲಿ ಕಂಡದ್ದು: ದೇಶ ವಿದೇಶಗಳ ವನ್ಯಜೀವಿ ಛಾಯಾಗ್ರಾಹಕರು ವನ್ಯಜೀವಿ ಜೀವನ ಕ್ರಮವನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ.

ದಕ್ಷಿಣ ಸಂಯುಕ್ತ ರಾಷ್ಟ್ರಗಳ ಪ್ರಾಂತ್ಯವೊಂದರಲ್ಲಿ ಬೃಹತ್‌ ಗುಂಪಾಗಿ ಹಾರುವ ಬಾವಲಿಗಳು, ಬಾಳೆ ಹೂವು ತಿನ್ನುತ್ತಿರುವ ಬಾವಲಿ, ಫ್ಲೈಯಿಂಗ್‌ ಫಾಕ್ಸ್‌ (ಹಾರುವ ನರಿಯಂತೆ ಗೋಚರಿಸುವುದರಿಂದ ಬಾವಲಿಗೆ ಈ ಹೆಸರು), ಕೊಸ್ಟರಿಕಾದಲ್ಲಿ ಎಲೆ ತಿನ್ನುತ್ತಿರುವ ಸಣ್ಣ ಗಾತ್ರದ ಬಾವಲಿ, ಒಣ ಮರದ ಕಾಂಡ, ಕೊಂಬೆಗೆ ಜೇನುಗೂಡಿನಂತೆ ಅಂಟಿಕೊಂಡಿರುವ ಬಾವಲಿ ಗುಂಪು.. ನವಜಾತ ಮರಿಗಳೊಂದಿಗಿರುವ ಬಾವಲಿ, ಮರಿ ಎದೆಗವಚಿಕೊಂಡು ಹಾರುತ್ತಿರುವ ಬಾವಲಿ, ಗಾಢ ಕತ್ತಲಿನಲ್ಲಿ ದೇವ ಕಿನ್ನರರಂತೆ ಹಾರುವ ಬಾವಲಿಗಳು, ಗುಹೆಯಲ್ಲಿ ಕಂಡ ಬಾವಲಿ... ಹೀಗೆ ನೂರಾರು ಬಾವಲಿಗಳ ಭಾವಾಭಿವ್ಯಕ್ತಿ ಚೌಕಟ್ಟುಗಳಲ್ಲಿ ಸೆರೆಯಾಗಿದ್ದವು.

ಗಾಢ ಕತ್ತಲಿನಲ್ಲಿ ಬಾವಲಿಗಳ ಸ್ಪಷ್ಟ ಚಿತ್ರ ಪಡೆಯುವುದು ಸವಾಲು. ಅವುಗಳ ವಾಸಸ್ಥಾನದಲ್ಲಿಯೇ ಅವುಗಳಿಗೆ ಚೂರೂ ತೊಂದರೆ ಆಗದಂತೆ, ಚಿತ್ರದ ವಸ್ತುವಿನ ಹಿನ್ನೆಲೆ ಸಹಿತ ಪರಿಣಾಮಕಾರಿಯಾಗಿ ಸೆರೆ ಹಿಡಿಯುವಲ್ಲಿ ಛಾಯಾಗ್ರಾಹಕರು ಶ್ರಮವಹಿಸಿದ್ದಾರೆ. ತಾಂತ್ರಿಕವಾಗಿಯೂ ಚಿತ್ರಗಳು ಗುಣಮಟ್ಟದಿಂದ ಕೂಡಿವೆ ಎಂದು ಅಲ್ಲಿಗೆ ಬಂದಿದ್ದ ವೀಕ್ಷಕರು ಮುಕ್ತಕಂಠದಿಂದ ಪ್ರಶಂಸಿಸಿದರು.

ಏಕೆ ಬಾವಲಿ ಚಿತ್ರ ಪ್ರದರ್ಶನ?: ‘ಯಾವುದನ್ನು ಕಂಡರೆ ಅಪಶಕುನ, ಭಯ ಇತ್ಯಾದಿ ನಕಾರಾತ್ಮಕ ಭಾವಗಳು, ಮೂಢನಂಬಿಕೆಗಳು ಹುಟ್ಟಿಬಂದಿವೆಯೋ ಅವುಗಳನ್ನು ತೊಡೆದುಹಾಕಿ ಅವುಗಳ ಮಹತ್ವ, ರೈತರ ಮಿತ್ರರಾಗಿ, ಕೀಟ ಭಕ್ಷಕಗಳಾಗಿ ಕಾರ್ಯನಿರ್ವಹಿಸುವ ಅವುಗಳ ಮಾಹಿತಿಯನ್ನು ಜನರಿಗೆ ತಿಳಿಸುವುದು ಈ ಪ್ರದರ್ಶನದ ಉದ್ದೇಶ’ ಎಂದು ಕಾರ್ಯಕ್ರಮ ಸಂಘಟಕ ಈಶ್ವರ ಪ್ರಸಾದ್‌ ಹೇಳಿದರು.

ಬಾವಲಿ ಬದುಕು ಸಂಶೋಧಿಸಿದವರು: ರಾಹುಲ್‌ ಪ್ರಭುಕೋಣಲ್ಕರ್‌, ಡಾ.ಬಂದನಾ ಅವುಲ್‌ ಅರೋರಾ, ರವಿ ಉಮದಿ ಅವರು ದೇಶದ ಬೇರೆ ಬೇರೆ ಭಾಗಗಳಲ್ಲಿ ಬಾವಲಿಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಬಂದನಾ ಅವರು ಅಂಡಮಾನ್‌ನಲ್ಲಿ ಸಂಶೋಧನೆ ನಡೆಸಿದವರು.

ತೇಜಸ್ವಿ ಪ್ರತಿಷ್ಠಾನ ಹಾಗೂ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಮಾತನಾಡಿ, ‘ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಆಶಯಗಳಿಗೆ ಜೀವ ತುಂಬುವ ಪ್ರಯತ್ನ ಸಾಗಿದೆ. ಪಶ್ಚಿಮ ಘಟ್ಟದ ಜೀವ ವೈವಿಧ್ಯ, ಜೀವಿ ಸೂಕ್ಷ್ಮತೆ ಬಗ್ಗೆ ಅಧ್ಯಯನ ನಡೆಸುವವರಿಗೆ ಒಂದು ನೆಲೆ ಕಲ್ಪಿಸಲಾಗುವುದು’ ಎಂದರು.

‘ಬಾವಲಿ, ಜೇಡಗಳನ್ನು ಹಾರರ್‌ ಸಿನಿಮಾಗಳಲ್ಲಿ ಭಯಾನಕತೆಯನ್ನು ಅಭಿವ್ಯಕ್ತಪಡಿಸಲು ಮಾತ್ರ ಬಳಸಲಾಗುತ್ತಿದೆ. ಆದರೆ, ಅವು ನಮ್ಮ ಮಿತ್ರ ಎಂಬುದನ್ನು ಮರೆತಿದ್ದೇವೆ’ ಎಂದು ಸಚಿವೆ ಜಯಮಾಲಾ ಹೇಳಿದರು.

‘ಕೊಡಗಿನ ನಾಶ ನೋಡಿದಾಗ ತೇಜಸ್ವಿ ನೆನಪಾದರು. ಅಲ್ಲಿ ಭೂಮಿಯೊಳಗಿನ ಸಣ್ಣ ಪುಟ್ಟ ಅದೆಷ್ಟೋ ಜೀವಿಗಳು ನಾಶವಾದವು. ಆದರೆ, ನಾವು ನಮ್ಮ ನಷ್ಟವನ್ನು ಮಾತ್ರ ಲೆಕ್ಕ ಹಾಕುತ್ತಿದ್ದೇವೆ. ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ ತೋರೋಣ’ ಎಂದರು.

**

ತೇಜಸ್ವಿ ಪ್ರತಿಷ್ಠಾನಕ್ಕೆ ₹ 5 ಕೋಟಿ

ಮೂಡಿಗೆರೆಯ ತೇಜಸ್ವಿ ಪ್ರತಿಷ್ಠಾನಕ್ಕೆ ರಾಜ್ಯ ಸರ್ಕಾರ ₹ 5 ಕೋಟಿ ನೆರವು ನೀಡಿದೆ. ಈ ಅನುದಾನದಲ್ಲಿ ತೇಜಸ್ವಿ ಅವರ ಕನಸು ಈಡೇರಿಸುವ ಕೆಲಸ ಆಗಬೇಕು ಎಂದು ಜಯಮಾಲಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.