ADVERTISEMENT

ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:28 IST
Last Updated 13 ಜೂನ್ 2019, 19:28 IST
ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಸದ ಪಿ.ಸಿ. ಮೋಹನ್ ಚಾಲನೆ ನೀಡಿದರು. ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಕೆ.ಸಿ.ಸ್ವಾಮಿ, ಸರ್ವಜ್ಞನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಶಶಿರೇಖಾ ಮುಕುಂದ, ಶಾಸಕ ಎಸ್. ರಘು ಇದ್ದರು
ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಸದ ಪಿ.ಸಿ. ಮೋಹನ್ ಚಾಲನೆ ನೀಡಿದರು. ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಕೆ.ಸಿ.ಸ್ವಾಮಿ, ಸರ್ವಜ್ಞನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಶಶಿರೇಖಾ ಮುಕುಂದ, ಶಾಸಕ ಎಸ್. ರಘು ಇದ್ದರು   

ಬೆಂಗಳೂರು: ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಸಂಸದ ಪಿ.ಸಿ. ಮೋಹನ್ ಅವರು ಈ ಕಾಮಗಾರಿಗೆ ಗುರುವಾರ ಚಾಲನೆ ನೀಡಿದರು.

2012ರಲ್ಲೇ ಈ ಕಾಮಗಾರಿ ಆರಂಭವಾಗಿತ್ತು. ಇಲ್ಲಿ ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಮೇಲ್ಸೇತುವೆ ನಿರ್ಮಾಣದ ಅರ್ಧದಷ್ಟು ಕೆಲಸವನ್ನೂ ರೈಲ್ವೆ ಇಲಾಖೆ ಈಗಾಗಲೇ ನಡೆಸಿದೆ. ಇನ್ನುಳಿದ ಕಾಮಗಾರಿ ನಡೆಯಬೇಕಾದ ರಸ್ತೆ ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿದೆ. ಇಲ್ಲಿ ಕಾಮಗಾರಿ ನಡೆಸಲು ರಕ್ಷಣಾ ಇಲಾಖೆ ಅನುಮತಿ ನೀಡಿರಲಿಲ್ಲ. ಹಾಗಾಗಿ ಕೆಲಸ ಅರ್ಧಕ್ಕೇ ಸ್ಥಗಿತಗೊಂಡಿತ್ತು.

ನಗರದಲ್ಲಿ ಒಟ್ಟು 12 ಕಡೆ ಮೂಲಸೌಕರ್ಯ ಅಭಿವೃದ್ಧಿಗೆ ರಕ್ಷಣಾ ಇಲಾಖೆ ಅನುಮತಿ ಅಗತ್ಯವಿದೆ. ರಕ್ಷಣಾ ಇಲಾಖೆ ಜಾಗ ಬಳಸಿಕೊಂಡು ಅವರಿಗೆ ಬೇರೆ ಕಡೆ ಅಷ್ಟೇ ಮೌಲ್ಯದ ಬೇರೆ ಜಾಗ ನೀಡುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ರಕ್ಷಣಾ ಇಲಾಖೆ ಪ್ರಮುಖ ಅಧಿಕಾರಿಗಳ ಜೊತೆ ಮಾತುಕತೆ ನಡೆದಿತ್ತು. ನಿರ್ಮಲಾ ಸೀತಾರಾಮನ್‌ ಅವರು ರಕ್ಷಣಾ ಸಚಿವರಾಗಿದ್ದ ವೇಳೆ ಈ ಬಗ್ಗೆ ಅಂತಿಮ ಒಪ್ಪಂದಕ್ಕೆ ಬರಲಾಗಿತ್ತು. ಈ ಯೋಜನೆಗಳಿಗೆ ಅಗತ್ಯ ಇದ್ದ 55,000 ಚದರ ಮೀಟರ್ ಜಾಗವನ್ನು ರಕ್ಷಣಾ ಸಚಿವಾಲಯ ರಾಜ್ಯ ಸರ್ಕಾರಕ್ಕೆ 2019ರ ಮಾರ್ಚ್‌ 6ರಂದು ಹಸ್ತಾಂತರಿಸಿತ್ತು. ಈ ಯೋಜನೆಗಳಲ್ಲಿ ₹10 ಕೋಟಿ ವೆಚ್ಚದ ಬೈಯಪ್ಪನಹಳ್ಳಿ ಮೇಲ್ಸೇತುವೆ ಕಾಮಗಾರಿಯೂ ಒಂದು.

ADVERTISEMENT

ಬೈಯಪ್ಪನಹಳ್ಳಿಯಲೆವೆಲ್ ಕ್ರಾಸಿಂಗ್‌ನಲ್ಲಿ ನಿತ್ಯ 72 ಬಾರಿ ಗೇಟ್ ಮುಚ್ಚಲಾಗುತ್ತಿದೆ. ಆಗ ವಾಹನ ಸವಾರರು ಹಳಿ ದಾಟಲು ಸುಮಾರು 10 ನಿಮಿಷದಿಂದ 20 ನಿಮಿಷಗಳಷ್ಟು ಕಾಯಬೇಕಾಗುತ್ತದೆ. ಈ ಸೇತುವೆ ನಿರ್ಮಾಣವಾದರೆ ಪ್ರಯಾಣಿಕರು ಸಮಸ್ಯೆಯಿಂದ ಮುಕ್ತಿ ಪಡೆಯಲಿದ್ದಾರೆ.

‘ಮೇಲ್ಸೇತುವೆ ಕಾಮಗಾರಿ 12 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿನ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ’ ಎಂದು ಪಿ.ಸಿ. ಮೋಹನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.