ADVERTISEMENT

ಬಿಬಿಎಂಪಿ: ಇನ್ನೂ ಆರಂಭಗೊಳ್ಳದ 225 ವಾರ್ಡ್‌ ಕಚೇರಿಗಳು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 21:57 IST
Last Updated 22 ಫೆಬ್ರುವರಿ 2024, 21:57 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ಬಿಬಿಎಂಪಿಯ 225 ವಾರ್ಡ್‌ಗಳ ಕಚೇರಿ ಹಾಗೂ 75 ಉಪ ವಿಭಾಗ ಕಚೇರಿಗಳನ್ನು ತೆರೆಯುವಂತೆ ಮುಖ್ಯ ಆಯುಕ್ತರು ಆದೇಶ ನೀಡಿ ಒಂದೂವರೆ ತಿಂಗಳಾದರೂ ವಲಯ ಆಯುಕ್ತರು ಕ್ರಮ ಕೈಗೊಂಡಿಲ್ಲ.

ಹೊಸದಾಗಿ ವಾರ್ಡ್‌ಗಳನ್ನು ಪುನರ್‌ರಚಿಸಿ ಅಧಿಸೂಚಿಸಲಾಗಿರುವ ಕಾಮಗಾರಿ, ಕಂದಾಯ, ಆರೋಗ್ಯ ಮತ್ತು ಪಾಲಿಕೆಯ ಇತರೆ ಎಲ್ಲ ಪ್ರದೇಶ ವ್ಯಾಪ್ತಿಯು ಸಮಾನಾಂತರವಾಗಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು ಜನವರಿ 10ರಂದು ಆದೇಶ ಹೊರಡಿಸಿದ್ದರು. ಆ  ಆದೇಶವನ್ನು ಯಲಹಂಕ ವಲಯ ಹೊರತುಪಡಿಸಿದಂತೆ ಉಳಿದ ಏಳು ವಲಯದ ಆಯುಕ್ತರು ಪಾಲಿಸಿಲ್ಲ.

ADVERTISEMENT

198 ವಾರ್ಡ್‌ಗಳನ್ನು ಪುನರ್‌ ರಚಿಸಿ, 225 ವಾರ್ಡ್‌ ರಚನೆ ಮಾಡಿ ನಗರಾಭಿವೃದ್ಧಿ ಇಲಾಖೆ 2023ರ ಸೆಪ್ಟೆಂಬರ್‌ 30ರಂದು ಅಧಿಸೂಚನೆ ಹೊರಡಿಸಿದೆ. ಅದರಂತೆ ಪ್ರತಿ ಉಪ ವಿಭಾಗ, ವಾರ್ಡ್ ಕಚೇರಿಗಳನ್ನು ಹೊಸದಾಗಿ ತೆರೆಯಬೇಕು. ಈ ಹೊಸ ಕಚೇರಿಗಳ ವಿಳಾಸವನ್ನು, ಪುನರ್‌ರಚನೆಗೊಂಡ ವಾರ್ಡ್‌ಗಳ ವಿವರಗಳನ್ನು ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಿ, ರಸ್ತೆಯ ನಾಮಫಲಕಗಳಲ್ಲಿ ಅಳವಡಿಸಬೇಕೆಂದೂ ಸೂಚಿಸಲಾಗಿತ್ತು.

ಹೊಸ ಕಚೇರಿಗಳಿಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಪ್ರತ್ಯಾಯೋಜನೆ ಮಾಡಿ ತಾತ್ಕಾಲಿಕವಾಗಿ ತಮ್ಮ ಹಂತದಲ್ಲಿಯೇ ಮರು ಹಂಚಿಕೆ ಮಾಡಿ ನಿಯೋಜಿಸಬೇಕು. ಅಗತ್ಯ ಹುದ್ದೆಗಳ ಸೃಜನೆಗಾಗಿ ಪ್ರಸ್ತಾವ ಸಲ್ಲಿಸಬೇಕು. ಉಪವಿಭಾಗ ಹಾಗೂ ವಾರ್ಡ್‌ ಕಚೇರಿಗಳಿಗೆ ಸಂಬಂಧಿಸಿದ ಕಡತ ಹಾಗೂ ದಾಖಲೆಗಳನ್ನು ಸಂಬಂಧಿಸಿದ ಕಚೇರಿಗೆ ರವಾನಿಸಿ, ಆನ್‌ಲೈನ್‌ ತಂತ್ರಾಂಶದಲ್ಲಿ ಅಳವಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಗೆ ಆದೇಶಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಇನ್ನೂ ಏಳು ವಲಯಗಳಲ್ಲಿ ಆರಂಭವಾಗಿಲ್ಲ.

ರಾಜರಾಜೇಶ್ವರಿನಗರ, ಪಶ್ಚಿಮ, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು ಕಚೇರಿಗಳನ್ನು ಶೀಘ್ರ ತೆರೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದಾಸರಹಳ್ಳಿ, ಮಹದೇವಪುರ, ಪೂರ್ವ, ದಕ್ಷಿಣದ ಆಯುಕ್ತರು ಪ್ರತಿಕ್ರಿಯೆ ನೀಡಲಿಲ್ಲ.

225 ವಾರ್ಡ್‌ಗಳಂತೆ ಉಪ ವಿಭಾಗ ಕಚೇರಿ ಹಾಗೂ ವಾರ್ಡ್‌ ಕಚೇರಿಗಳು ಪ್ರಾರಂಭವಾಗದಿದ್ದರೆ ನಾಗರಿಕರು ನೀಡುವ ದೂರು ಸೇರಿದಂತೆ ಖಾತಾ, ಆಸ್ತಿ ತೆರಿಗೆ ಎಲ್ಲವೂ ಹಳಯ ವಾರ್ಡ್‌ ಲೆಕ್ಕಾಚಾರದಲ್ಲೇ ದಾಖಲಾಗುತ್ತಿದೆ. ಖಾತೆ ವರ್ಗಾವಣೆಗೆ ಹೋದರೆ ‘ಹೊಸ ವಾರ್ಡ್‌ ಕಚೇರಿ ಆರಂಭವಾದ ಮೇಲೆ ಬನ್ನಿ’ ಎಂದು ಪಾಲಿಕೆ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಹಲವು ನಾಗರಿಕರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.