ADVERTISEMENT

ಬಿಬಿಎಂಪಿ: ₹474.77 ಕೋಟಿ ಆಸ್ತಿ ತೆರಿಗೆ ಬಾಕಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 4:36 IST
Last Updated 3 ಸೆಪ್ಟೆಂಬರ್ 2024, 4:36 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸುಸ್ತಿದಾರರಿಂದ ₹474.77 ಕೋಟಿ ಇನ್ನೂ ಬಾಕಿ ಉಳಿದಿದೆ.

ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿ ಗಾಗಿ ಸರ್ಕಾರ ಒಂದು ಬಾರಿ ಪರಿಹಾರ (ಒಟಿಎಸ್‌) ಯೋಜನೆಯನ್ನು ಸೆಪ್ಟೆಂಬರ್‌ 31ರವರೆಗೆ ವಿಸ್ತರಿಸಿದೆ. ಆದರೂ, 2.64 ಲಕ್ಷ ಆಸ್ತಿಗಳ ಮಾಲೀಕರು ಸುಸ್ತಿದಾರ ರಾಗಿದ್ದು, ಸೆ.1ರಂತೆ ₹474.77 ಕೋಟಿ ಪಾವತಿಸಬೇಕಿದೆ. ಕಳೆದ ಒಂದು ವಾರದಲ್ಲಿ 26,862 ಆಸ್ತಿ ಮಾಲೀಕರು ₹26.94 ಕೋಟಿ ತೆರಿಗೆ ಪಾವತಿಸಿದ್ದಾರೆ.

ADVERTISEMENT

2024ರ ಏಪ್ರಿಲ್‌ 1ರಂತೆ 3.95 ಲಕ್ಷ ಸುಸ್ತಿದಾರರು ₹738 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕಾಗಿತ್ತು. ಈ ಆರ್ಥಿಕ ವರ್ಷದಲ್ಲಿ 1.31 ಲಕ್ಷ ಸುಸ್ತಿದಾರರು ₹273 ಕೋಟಿಯನ್ನು ಪಾವತಿಸಿದ್ದಾರೆ.

50 ಸಾವಿರ ಆಸ್ತಿ ಮುಟ್ಟುಗೋಲು: ಆಸ್ತಿ ತೆರಿಗೆ ಸುಸ್ತಿದಾರರಿಗೆ ಹಲವು ರೀತಿಯ ನೋಟಿಸ್‌ ಜಾರಿ ಮಾಡಲಾಗಿದ್ದರೂ, ತೆರಿಗೆ ಪಾವತಿಸಿಲ್ಲ. ಹೀಗಾಗಿ ಕಳೆದ ಒಂದು ವಾರದಲ್ಲಿ 14,906 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈವರೆಗೆ 49,499 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯಾವುದೇ ರೀತಿಯ ವ್ಯವಹಾರವನ್ನೂ ಈ ಆಸ್ತಿಗಳ ಮಾಲೀಕರು ನಡೆಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಮಾಹಿತಿ ನೀಡಿದರು.

ಆಸ್ತಿ ತೆರಿಗೆ ಪಾವತಿಸದ 4,600 ವಾಣಿಜ್ಯ ಕಟ್ಟಡಗಳಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೀಗಮುದ್ರೆ ಹಾಕಲಾಗಿದೆ. ಕಳೆದ ಒಂದು ವಾರದಲ್ಲಿ 269 ಕಟ್ಟಡಗಳಿಗೆ ಬೀಗ ಹಾಕಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.