ಬೆಂಗಳೂರು: ಬಿಬಿಂಎಪಿ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವವರು ಇನ್ನು ಮುಂದೆ ಕಟ್ಟಡ ನಕ್ಷೆಗಾಗಿ ವಾರಗಟ್ಟಲೆ ಕಾಯುವಂತಿಲ್ಲ. ಅರ್ಜಿ ಸಲ್ಲಿಸಿದ ದಿನವೇ ‘ತಾತ್ಕಾಲಿಕ ನಕ್ಷೆ’ ಕೈಸೇರಲಿದೆ.
ಬಿಬಿಎಂಪಿ ಕಚೇರಿಗೆ ಹೋಗದೆಯೇ ಮನೆ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಪಡೆದುಕೊಳ್ಳುವ ಆನ್‌ಲೈನ್ ವ್ಯವಸ್ಥೆ– ‘ನಂಬಿಕೆಯೊಂದಿಗೆ ಪರಿಶೀಲಿಸುವ’ (ಟ್ರಸ್ಟ್ ಆ್ಯಂಡ್ ವೆರಿಫೈ) ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಆರ್ಕಿಟೆಕ್ಟ್‌ಗಳ ಕಚೇರಿಯಲ್ಲೇ ಎಲ್ಲ ದಾಖಲೆಗಳನ್ನು ನೀಡಿ, ಶುಲ್ಕ ಪಾವತಿಸಿದ ದಿನವೇ ‘ತಾತ್ಕಾಲಿಕ ನಕ್ಷೆ’ ಪಡೆದುಕೊಂಡು ಮುಂದಿನ ಪ್ರಕ್ರಿಯೆಯನ್ನು ನಾಗರಿಕರು ಆರಂಭಿಸಬಹುದು.
ಪಾಲಿಕೆ ವತಿಯಿಂದ ಸ್ವಯಂ ಚಾಲಿತ ನಕ್ಷೆ ಮಂಜೂರು ವ್ಯವಸ್ಥೆಯ ಪೋರ್ಟಲ್ ಆರಂಭಿಸಲಾಗುತ್ತಿದ್ದು, ಇದು ಎಲ್ಲ ವಿಭಾಗಗಳ ಸಂಪರ್ಕವನ್ನೂ ಹೊಂದಿರುತ್ತದೆ. ನಾಗರಿಕರು ಆರ್ಕಿಟೆಕ್ಟ್ ಕಚೇರಿಗಳಲ್ಲಿ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಬಹುದು.
ಬಿಬಿಎಂಪಿ ಕಾಯ್ದೆ ಹಾಗೂ ನಿಯಮದಂತೆ ಕಟ್ಟಡ ನಕ್ಷೆಯನ್ನು ಆರ್ಕಿಟೆಕ್ಟ್‌ಗಳು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇದರ ಜೊತೆಗೆ ಆಸ್ತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನೂ ಸಲ್ಲಿಸಬೇಕು. ಈ ದಾಖಲೆಗಳ ನೈಜತೆಗೆ ಮಾಲೀಕರೇ ಜವಾಬ್ದಾರರಾಗಿದ್ದು, ನಕಲು ಅಥವಾ ತಿದ್ದುಪಡಿ ಮಾಡಿದ ವಿವರಗಳನ್ನು ಸಲ್ಲಿಸಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು.
‘ಆರ್ಕಿಟೆಕ್ಟ್‌ಗಳು ದಾಖಲೆ ಗಳೊಂದಿಗೆ ನಕ್ಷೆಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ಅದನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ವತಿಯಿಂದ ಪರಿಶೀಲಿಸಲಾಗುತ್ತದೆ. ಈ ಕೇಂದ್ರದಲ್ಲಿ ಜಿಪಿಎಸ್ ಆಧಾರಿತ ನಕ್ಷೆ ಲಭ್ಯವಿದ್ದು, ಅದನ್ನು ಆರ್ಕಿಟೆಕ್ಟ್‌ಗಳು ಸಲ್ಲಿಸಿರುವ ದಾಖಲೆಗಳೊಂದಿಗೆ ಹೊಂದಿಸಿ,
ಪರಾಮರ್ಶಿಸಲಾಗುತ್ತದೆ. ಬಫರ್ ಝೋನ್ ಸೇರಿದಂತೆ ಕೆರೆ, ಸರ್ಕಾರಿ ಪ್ರದೇಶಗಳಲ್ಲಿ ಈ ಕಟ್ಟಡ ಬರುವುದಿಲ್ಲ ಎಂಬುದನ್ನೂ ಸ್ಪಷ್ಟೀಕರಿಸುತ್ತದೆ. ಎಲ್ಲವೂ ಸರಿ ಇದೆ ಎಂದಾದರೆ ‘ತಾತ್ಕಾಲಿಕ ನಕ್ಷೆ’ ಮಾಲೀಕರ ಕೈಸೇರುತ್ತದೆ. ಬೆಳಿಗ್ಗೆ ಅರ್ಜಿ ಸಲ್ಲಿಸಿದರೆ, ಸಂಜೆ ವೇಳೆಗೆ ಈ ಪ್ರಕ್ರಿಯೆ ಮುಗಿಯುತ್ತದೆ’
ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
‘ತಾತ್ಕಾಲಿಕ ನಕ್ಷೆ’ ಮಂಜೂರಾದ ಮೇಲೆ ಮಾಲೀಕರು ಕಟ್ಟಡ ನಿರ್ಮಿಸುವುದನ್ನು ಆರಂಭಿಸಬಹುದು. ಬ್ಯಾಂಕ್‌ಗಳೂ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳು ಈ ‘ತಾತ್ಕಾಲಿಕ ನಕ್ಷೆ’ ಪರಿಗಣಿಸಿ ಪ್ರಕ್ರಿಯೆ ಮುಂದುವರಿಸಬಹುದು. ‘ತಾತ್ಕಾಲಿಕ ನಕ್ಷೆ’ ಮಂಜೂರಾದ 15 ದಿನದೊಳಗೆ ‘ಅನುಮೋದಿತ ನಕ್ಷೆ’ ಮಾಲೀಕರ ಕೈಸೇರಲಿದೆ. ಈ ನಡುವಿನ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲೇ ನಡೆಯಲಿದ್ದು, ಕಂದಾಯ, ಎಂಜಿನಿಯರಿಂಗ್ ವಿಭಾಗದವರು ಅವರಿಗೆ ನಿಗದಿಯಾದ ದಿನಗಳಲ್ಲಿ ಮಂಜೂರಾತಿ ನೀಡಬೇಕು. ಇಲ್ಲದಿದ್ದರೆ ಸ್ವಯಂಚಾಲಿತವಾಗಿ ಮಂಜೂರಾಗುತ್ತದೆ.
‘ನಿಗದಿತ ಅವಧಿಯೊಳಗೆ ನಕ್ಷೆಗೆ ಮಂಜೂರು ನೀಡದ ಅಧಿಕಾರಿಗೆ ಆನ್‌ಲೈನ್‌ನಲ್ಲೇ ನೋಟಿಸ್ ಜಾರಿಯಾಗುತ್ತದೆ. ಮೂರು ನೋಟಿಸ್ ಜಾರಿಯಾದ ಮೇಲೆ ವಿಚಾರಣೆ ನಡೆಸಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಟ್ರಸ್ಟ್ ಆ್ಯಂಡ್ ವೆರಿಫೈ’ ಆನ್‌ಲೈನ್ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಾಗಿದ್ದು, ಇನ್ನೊಂದು ವಾರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಉಲ್ಲಂಘನೆ: ಆರ್ಕಿಟೆಕ್ಟ್‌ಗಳಿಗೂ ಜವಾಬ್ದಾರಿ!
ಬಿಬಿಎಂಪಿಯಲ್ಲಿ ಆರ್ಕಿಟೆಕ್ಟ್‌ಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾಗಬಹುದು. ಇಷ್ಟೇ ಆರ್ಕಿಟೆಕ್ಟ್‌ಗಳೆಂಬ ನಿಯಮವಿಲ್ಲ ಎಷ್ಟು ಜನರು ಬೇಕಾದರೂ ನೋಂದಣಿಯಾಗಬಹುದು. ಅವರಿಗೆ ಪೋರ್ಟಲ್‌ನ ಲಾಗಿನ್ ನೀಡಲಾಗುತ್ತದೆ. ಪಾಲಿಕೆ ನಿಗದಿಪಡಿಸಿದ ಶುಲ್ಕವನ್ನು ನಾಗರಿಕರು ಆರ್ಕಿಟೆಕ್ಟ್‌ಗಳಿಗೆ ಪಾವತಿಸಬೇಕು. ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ ನಾಗರಿಕರಿಗೆ ನಕ್ಷೆ ಮಂಜೂರು ಮಾಡಿಕೊಡುವ ಆರ್ಕಿಟೆಕ್ಟ್‌ಗಳೂ ಆ ಕಟ್ಟಡಗಳು ನಕ್ಷೆ ಉಲ್ಲಂಘಿಸದಂತೆ ನಿರ್ಮಾಣವಾಗುವ ಜವಾಬ್ದಾರಿಯನ್ನೂ ಹೊಂದಿರುತ್ತಾರೆ. ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ ನಕ್ಷೆಯನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಆರ್ಕಿಟೆಕ್ಟ್‌ಗಳೂ ಖಾತರಿಪಡಿಸಿಕೊಳ್ಳಬೇಕು. ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ಪತ್ತೆಯಾದರೆ ಮಾಲೀಕರು ಸ್ಥಳೀಯ ಎಂಜಿನಿಯರ್‌ಗಳ ಜೊತೆಗೆ ಆರ್ಕಿಟೆಕ್ಟ್‌ಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ‘ಬಿಬಿಎಂಪಿ ರೂಪಿಸಿರುವ ಎಲ್ಲ ನಿಯಮಗಳನ್ನೂ ಪಾಲಿಸುವ ಜವಾಬ್ದಾರಿ ಹೊಂದಿರುತ್ತೇವೆ’ ಎಂಬ ಪ್ರಮಾಣ ಪತ್ರವನ್ನೂ ನೋಂದಣಿ ಸಮಯದಲ್ಲಿ ಆರ್ಕಿಟೆಕ್ಟ್‌ಗಳಿಂದ ಬಿಬಿಎಂಪಿ ಪಡೆದುಕೊಂಡಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.