ಬೆಂಗಳೂರು: ವಾಣಿಜ್ಯ ಉದ್ದೇಶದ ಹೋರ್ಡಿಂಗ್ಸ್‌ಗಳನ್ನು ಸಂಪೂರ್ಣ ನಿಷೇಧಿಸುವ ಹಾಗೂ ಪ್ರಯಾಣಿಕರ ತಂಗುದಾಣ ಸ್ಕೈವಾಕ್‌ಗಳಲ್ಲಿ ಪ್ರಾಯೋಜಿತ ಜಾಹೀರಾತು ಅಳವಡಿಸಲು ಅವಕಾಶ ಕಲ್ಪಿಸುವ ಹೊಸ ಜಾಹೀರಾತು ನೀತಿಯನ್ನು (ಬಿಬಿಎಂಪಿ ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ನೀತಿ 2018) ಪಾಲಿಕೆ ಸರ್ವಾನುಮತದಿಂದ ಅಂಗೀಕರಿಸಿತು.
ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಜಾಹೀರಾತು ನೀತಿಯನ್ನು ಮಂಡಿಸಿದರು.
ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಪಾದಚಾರಿಗಳ ಬಳಕೆಗೆ ಸೀಮಿತವಾದ ಶಾಪಿಂಗ್ ಬೀದಿಗಳಲ್ಲಿ ಹೋರ್ಡಿಂಗ್ ಅಳವಡಿಕೆಗೆ ಅವಕಾಶ ನೀಡಿದರೆ ಪ್ರಸ್ತಾವ ಭವಿಷ್ಯದಲ್ಲಿ ದುರುಪಯೋಗವಾಗುವ ಸಾಧ್ಯತೆ ಇದೆ. ಸ್ಟ್ರೀಟ್ ಕಿಯಾಸ್ಕ್‌ಗಳ ಮೂಲಕ ಪ್ರಾಯೋಜಿತ ಜಾಹೀರಾತು ಅಳವಡಿಕೆಗೆ ಅವಕಾಶ ಬೇಡ. ತಾತ್ಕಾಲಿಕವಾಗಿ ಬ್ಯಾನರ್ ಅಳವಡಿಸುವುದಕ್ಕೆ ಅವಕಾಶ ನೀಡಿದರೆ ಭವಿಷ್ಯದಲ್ಲಿ ಮತ್ತೆ ಗೊಂದಲ ಸೃಷ್ಟಿಸಲಿದೆ’ ಎಂದು ಗಮನ ಸೆಳೆದರು. ಈ ಅಂಶಗಳನ್ನು ನೀತಿಯಿಂದ ಕೈಬಿಡಲಾಯಿತು. ಸಣ್ಣ ಪುಟ್ಟ ಮಾರ್ಪಾಡುಗಳೊಂದಿಗೆ ನೀತಿಗೆ ಸಭೆ ಒಪ್ಪಿಗೆ ಸೂಚಿಸಿತು.
ಈ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದ ಬೈಲಾ ಕರಡು ಕೂಡಾ ಸರ್ವಾನುಮತದಿಂದ ಅಂಗೀಕಾರಗೊಂಡಿತು.
ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್, ‘ಜಾಹೀರಾತು ನೀತಿಯಲ್ಲಿ ಬದಲಾವಣೆ ಮಾಡಲು ಅವಕಾಶ ಇಲ್ಲ. ಆದರೆ, ಬೈಲಾ ಕರಡನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸುತ್ತೇವೆ. ಬಳಿಕ ಸಾರ್ವಜನಿಕರಿಂದಲೂ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ. ಇದಕ್ಕೆ ಒಂದು ತಿಂಗಳು ಕಾಲಾವಕಾಶ ನೀಡುತ್ತೇವೆ. ಬಳಿಕ ಸೂಕ್ತ ತಿದ್ದುಪಡಿಗಳೊಂದಿಗೆ ಬೈಲಾ ಅಂತಿಮಗೊಳಿಸುತ್ತೇವೆ’ ಎಂದು ತಿಳಿಸಿದರು.
‘ಬೇರೆ ಬೇರೆ ದೇಶಗಳಲ್ಲಿ, ಅನ್ಯ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಜಾಹೀರಾತು ನೀತಿಯನ್ನು ಅಧ್ಯಯನ ಮಾಡಿ ಹೊಸ ನೀತಿಗೆ ಅಂತಿಮ ರೂಪ ನೀಡಿದ್ದೇವೆ. ಇದಕ್ಕೆ ಮುನ್ನ ಜಾಹೀರಾತು ಕಂಪನಿಗಳ ಅಭಿಪ್ರಾಯವನ್ನೂ ಪಡೆದಿದ್ದೇವೆ’ ಎಂದು ಅವರು ತಿಳಿಸಿದರು.
ಸಾರ್ವಜನಿಕ ಉದ್ದೇಶಕ್ಕಾಗಿ ಹೊರಾಂಗಣಗಳಲ್ಲಿ ಅಳವಡಿಸುವ ಜಾಹೀರಾತುಗಳಿಗೆ ಹೊಸ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯನ್ನು ಗುರುತಿಸುವುದಕ್ಕೆ ನೆರವಾಗುವ, ಸುತ್ತಮುತ್ತಲಿನ ವಾತಾವರಣದ ಅಂದ ಹೆಚ್ಚಿಸುವ ಹಾಗೂ ಪಾದಚಾರಿ ಹಾಗೂ ವಾಹನ ಸವಾರರಿಗೆ ನೆರವಾಗುವ ಉದ್ದೇಶದಿಂದ ಕೂಡಿರುವ ಸೈನೇಜ್‌ಗಳೂ ಇವುಗಳಲ್ಲಿ ಸೇರಿವೆ.
ವಾಣಿಜ್ಯ ಮಳಿಗೆಗಳ ಬಳಿ ಸ್ವಯಂ ಪ್ರಚಾರದ ಸಲುವಾಗಿ ಕೆಲವೊಂದು ತರಹದ ಜಾಹೀರಾತುಗಳಿಗೆ ಅವಕಾಶ ನೀಡಲಾಗಿದೆಯಾದರೂ, ಅವು ಬೈಲಾಗಳಿಗೆ ಅನುಗುಣವಾಗಿಯೇ ಅವುಗಳನ್ನು ಅಳವಡಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.
***
ಇವುಗಳಿಗೆ ನಿಷೇಧ
* ಯಾವುದೇ ತರಹದ ವಾಣಿಜ್ಯ ಹೋರ್ಡಿಂಗ್‌ಗಳು
* ಚಾವಣಿಗಳ ಮೇಲೆ ಅಳವಡಿಸುವ ಸೈನೇಜ್ (ರೂಫ್ ಸೈನೇಜ್)
* ಸಾರ್ವಜನಿಕ ರಸ್ತೆಗಳ ಪಕ್ಕದಲ್ಲಿ ಅಳವಡಿಸುವ ಎಲೆಕ್ಟ್ರಾನಿಕ್ ಡಿಸ್‌ಪ್ಲೇ (ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವ ಇವು ರಸ್ತೆ ಸುರಕ್ಷತೆಗೂ ಆತಂಕಕಾರಿ)
* ಹೊರಾಂಗಣ ಜಾಹೀರಾತುಗಳಲ್ಲಿ ಧ್ವನಿ ಬಳಕೆ
* ಸರಣಿ ಸಂದೇಶಗಳನ್ನು ನೀಡುವ ಜಾಹೀರಾತು
* ರಸ್ತೆಗೆ ಅಡ್ಡಲಾಗಿ ಅಳವಡಿಸುವ (ಗ್ಯಾಂಟ್ರಿ) ಜಾಹೀರಾತು (ಮಾರ್ಗಸೂಚಿ ಫಲಕಗಳನ್ನು ಅಳವಡಿಸುವುದು ಹೊರತುಪಡಿಸಿ)
* ಬಲೂನ್ ಅಥವಾ ಗಾಳಿಯಲ್ಲಿ ಹಾರಾಡುವ ಪರಿಕರ
* ಗೋಡೆಗಳಲ್ಲಿ ವಾಣಿಜ್ಯ ಉದ್ದೇಶದಿಂದ ಅಂಟಿಸುವ ಭಿತ್ತಿಪತ್ರಗಳು, ಪೇಂಟಿಂಗ್‌ಗಳು ಹಾಗೂ ಸಂದೇಶಗಳು (ಸಾರ್ವಜನಿಕರಿಗೆ ಉಪಯುಕ್ತ ಸಂದೇಶಗಳು ಬೀದಿಯ ಅಂದ ಹೆಚ್ಚಿಸುವ ಕಲಾ ಪ್ರಕಾರಗಳಿಗೆ ವಿನಾಯಿತಿ ಇದೆ. ಅದಕ್ಕೂ ಪರಿಶೀಲನಾ ಸಮಿತಿಯ ಒಪ್ಪಿಗೆ ಅಗತ್ಯ)
* ಮರಗಳಲ್ಲಿ, ಬೀದಿ ದೀಪಗಳ ಕಂಬಗಳಲ್ಲಿ, ಮಾರ್ಗಸೂಚಿ ಕಂಬಗಳಲ್ಲಿ, ವಿದ್ಯುತ್ ಪರಿವರ್ತಕ, ದೂರವಾಣಿ ಗೋಪುರಗಳಂತಹ ಸಾರ್ವಜನಿಕ ಆಸ್ತಿಗಳಲ್ಲಿ ಜಾಹೀರಾತು ಪ್ರದರ್ಶನ
* ಸಂಚಾರಿ ಜಾಹೀರಾತು
* ವಾಹನಗಳಲ್ಲಿನ ಜಾಹೀರಾತು (ಸೇವೆ ಅಥವಾ ಉತ್ಪನ್ನವನ್ನು ಪ್ರಚುರ ಪಡಿಸುವ ಉದ್ದೇಶ ಹೊಂದಿರುವಂತಹದ್ದು)
* ಸ್ಮಶಾನ, ರಾಜಕಾಲುವೆ, ಮಳೆನೀರು ಹರಿಯುವ ಚರಂಡಿ, ಕೆರೆ, ಮರಗಳು ಹಾಗೂ ಪ್ರಾಣಿಗಳ ಮೇಲೆ ಅಳವಡಿಸುವ ಜಾಹೀರಾತು
****
ಇವುಗಳಿಗೆ ನಿಷೇಧವಿಲ್ಲ
* ಸ್ವಯಂ ಪ್ರಚಾರದ ಸಲುವಾಗಿ ವಾಣಿಜ್ಯ ಮಳಿಗೆಗಳ ಬಳಿ ಅಳವಡಿಸುವ ಜಾಹೀರಾತು ( ಮೇಲ್ಕಟ್ಟು, ಎಲೆಕ್ಟ್ರಾನಿಕ್ ಸಂದೇಶದ ಫಲಕ, ಕಟ್ಟಡದಿಂದ ಹೊರಚಾಚುವ ಸೈನೇಜ್, ಛಾವಣಿ– ಗೋಡೆಗಳಲ್ಲಿನ ಸೈನೇಜ್, ಕಂಬಗಳಲ್ಲಿ ತಾತ್ಕಾಲಿಕವಾಗಿ ಅಳವಡಿಸಿದ ಜಾಹೀರಾತು, ಕಿಟಕಿ, ಗೋಡೆಗಳಲ್ಲಿ ಅಳವಡಿಸುವ ಸೈನೇಜ್... ಇತ್ಯಾದಿ)
* ಪ್ರಾಯೋಜಿತ ಜಾಹೀರಾತು (ಪ್ರಯಾಣಿಕರ ತಂಗುದಾಣ, ಸಾರ್ವಜನಿಕ ಉದ್ಯಾನದ ಸೈನ್‌ಬೋರ್ಡ್, ಮೈದಾನ, ಬೀದಿಬದಿಯ ಪೀಠೋಪಕರಣ, ಸಾರ್ವಜನಿಕ ಶೌಚಾಲಯಗಳಲ್ಲಿ ಅಳವಡಿಸುವಂತಹವು ಹಾಗೂ ಕಲಾ ಪ್ರಕಾರಗಳು)
* ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯಿಂದ ತಾತ್ಕಾಲಿಕವಾಗಿ ಬ್ಯಾನರ್ ಅಳವಡಿಸುವುದು
* ನಿರ್ಮಾಣ ಚಟುವಟಿಕೆ ಮಾಹಿತಿ ನೀಡುವ ಫಲಕ, ಕಟ್ಟಡದಲ್ಲಿರುವ ಮಳಿಗೆಗಳ ಮಾಹಿತಿ ನೀಡುವ, ಸರ್ಕಾರಿ ಕಚೇರಿಗಳ ಬಗ್ಗೆ ಮಾಹಿತಿ ನೀಡುವ ಫಲಕಗಳು, ಹಬ್ಬದ ಅಲಂಕಾರ, ನಾಮಫಲಕ, ಸ್ಮಾರಕ, ವಹನ ನಿಲುಗಡೆಯ ಮಾಹಿತಿ ನೀಡುವ ಫಲಕ, ಆಸ್ತಿಯನ್ನು ಪತ್ತೆ ಹಚ್ಚಲು ನೆರವಾಗುವ ಫಲಕ, ಸ್ಕೋರ್ ಬೋರ್ಡ್, ರಿಯಲ್ ಎಸ್ಟೇಟ್ ಸೈನೇಜ್
* ಶಾಪಿಂಗ್ ಮಾಲ್, ಬಹೂಪಯೋಗಿ ಕಟ್ಟಡಗಳಲ್ಲಿ ನೆಲದಲ್ಲಿ ಅಳವಡಿಸುವ ಫಲಕ, ಗೋಡೆ ಫಲಕ (ಬೈಲಾ ನಿಯಮಗಳಿಗೆ ಅನುಸಾರವಾಗಿ)
***
‘ರಾಜಕೀಯ ಪಕ್ಷಗಳ ಬ್ಯಾನರ್‌ಗೂ ಅವಕಾಶವಿಲ್ಲ’
‘ರಾಜಕೀಯ ಪಕ್ಷಗಳು ಸಮಾವೇಶಗಳನ್ನು ಏರ್ಪಡಿಸುವಾಗ ಸಾರ್ವಜನಿಕ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಬ್ಯಾನರ್ ಅಳವಡಿಸುವುದಕ್ಕೂ ಅವಕಾಶ ಇಲ್ಲ. ಅನುಮತಿ ಇರುವ ಯಾವುದೇ ಜಾಹೀರಾತುಗಳಲ್ಲೂ ಫ್ಲೆಕ್ಸ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ’ ಎಂದು ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದರು.
**
‘ಕನ್ನಡ ಸಿನಿಮಾ ಜಾಹೀರಾತಿಗೆ ಸ್ಥಳ ಗುರುತಿಸಿ’
‘ಕನ್ನಡ ಸಿನಿಮಾಗಳ ಜಾಹೀರಾತು ಪ್ರದರ್ಶಿಸುವುದಕ್ಕೆ ಪಾಲಿಕೆ ನಿರ್ದಿಷ್ಟ ಜಾಗ ಗುರುತಿಸಬೇಕು’ ಎಂದು ಶಾಸಕ ಹಾಗೂ ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಒತ್ತಾಯಿಸಿದರು.
‘ಕನ್ನಡ ಸಿನಿಮಾಗಳು ಈಗಾಗಲೇ ಅನ್ಯಭಾಷೆಗಳ ಸಿನಿಮಾಗಳಿಗೆ ಪೈಪೋಟಿ ನೀಡುವುದು ಕಷ್ಟ ಎಂಬ ಪರಿಸ್ಥಿತಿ ಇದೆ. ಕನ್ನಡ ಸಿನಿಮಾಗಳ ಗಳಿಕೆಯೂ ನಿರಾಶಾದಾಯಕವಾಗಿದೆ. ಕನ್ನಡ ಚಿತ್ರರಂಗದ ಉಳಿವಿನ ದೃಷ್ಟಿಯಿಂದ ಪಾಲಿಕೆ ಇಂತಹ ನಿರ್ಧಾರ ಕೈಗೊಳ್ಳಬೇಕು’ ಎಂದರು.
‘ಹೊಸ ಜಾಹೀರಾತು ನೀತಿಯಲ್ಲಿ ಕನ್ನಡ ಸಿನಿಮಾಗಳ ಜಾಹೀರಾತು ಪ್ರದರ್ಶನಕ್ಕೆ ನಿರ್ದಿಷ್ಟ ಜಾಗ ಗುರುತಿಸುವ ಪ್ರಸ್ತಾವ ಇಲ್ಲ’ ಎಂದು ಆಯುಕ್ತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.