ADVERTISEMENT

ಇನ್ನುಮುಂದೆ ಜಾಹೀರಾತು ಮೇಲೆ ಇರಲಿದೆ ಪಾಲಿಕೆಯ ‘ಹದ್ದಿನ ಕಣ್ಣು’

ಪ್ರವೀಣ ಕುಮಾರ್ ಪಿ.ವಿ.
Published 31 ಆಗಸ್ಟ್ 2018, 20:22 IST
Last Updated 31 ಆಗಸ್ಟ್ 2018, 20:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜಾಹೀರಾತುಗಳ ಮೇಲೆ ಹದ್ದಿನ ಕಣ್ಣಿಡಲು ಹಾಗೂ ಈ ಕುರಿತ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಜಾಹೀರಾತು ಪರಿಶೀಲನಾ ಸಮಿತಿಯನ್ನು ರಚಿಸಲು ಬಿಬಿಎಂಪಿ ಮುಂದಾಗಿದೆ.

ಈ ಸಮಿತಿಯ ಸಂಚರನೆ ಹಾಗೂ ಅಧಿಕಾರದ ಕುರಿತ ವಿವರಗಳು ‘ಬಿಬಿಎಂಪಿ ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ’ದ ಕರಡಿನಲ್ಲಿವೆ. ಜಾಹೀರಾತುಗಳನ್ನು ತೆರವುಗೊಳಿಸುವ ಪರಮಾಧಿಕಾರ ಪರಿಶೀಲನಾ ಸಮಿತಿಗೆ ಇರಲಿದೆ. ಆಯಾ ವಲಯದ ಜಂಟಿ ಆಯುಕ್ತರು ನೀಡಿರುವ ಜಾಹೀರಾತು ಪರವಾನಗಿಯನ್ನು ರದ್ದುಪಡಿಸುವ ಅಧಿಕಾರವನ್ನೂ ಈ ಸಮಿತಿಯು ಹೊಂದಲಿದೆ. ವಿವಾದಾಸ್ಪದ ಜಾಹೀರಾತುಗಳಿಗೆ ಸಂಬಂಧಿಸಿದಂತೆ ದೂರುಗಳಿಲ್ಲದೆಯೇ ಸ್ವಯಂನಿರ್ಧಾರ ಕೈಗೊಳ್ಳುವ ಅಧಿಕಾರವೂ ಸಮಿತಿಗೆ ದಕ್ಕಲಿದೆ.

ಸಮಿತಿಯಲ್ಲಿ ಯಾರಿರುತ್ತಾರೆ: ವಿಶೇಷ ಆಯುಕ್ತರು (ಯೋಜನೆ) ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಂಟಿ ಆಯುಕ್ತರು (ಜಾಹೀರಾತು) ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಕೇಂದ್ರ ಕಚೇರಿಯ ಒಬ್ಬರು ಅಧಿಕಾರಿ, ಕಾನೂನು ಕೋಶದ ಮುಖ್ಯಸ್ಥರು, ಸ್ಥಳೀಯ ಸಮುದಾಯದ ಪ್ರತಿನಿಧಿ, ಸಂಘ ಸಂಸ್ಥೆಗಳಿಂದ ಒಬ್ಬ ಪ್ರತಿನಿಧಿ ಹಾಗೂ ವಿನ್ಯಾಸ ತಜ್ಞರು ಇದರ ಸದಸ್ಯರಾಗಿರುತ್ತಾರೆ.

ADVERTISEMENT

ಈ ಸಮಿತಿ ಪ್ರತಿ ತಿಂಗಳಿನಲ್ಲಿ ಕನಿಷ್ಠಪಕ್ಷ ಒಮ್ಮೆಯಾದರೂ ಸಭೆ ನಡೆಸಬೇಕು. ಅನಧಿಕೃತ ಜಾಹೀರಾತು ತೆರವು ಹಾಗೂ ಜಾಹೀರಾತು ಪರವಾನಗಿ ಸಂಬಂಧಿಸಿದ ವ್ಯಾಜ್ಯ ಬಗ್ಗೆ ಈ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಜಾಹೀರಾತುಗಳಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಉಂಟಾಗುವ ಕುರಿತ ದೂರುಗಳಿದ್ದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಸಮಿತಿಗೆ ಇರಲಿದೆ. ಯಾವುದೇ ತೀರ್ಮಾನ ಕೈಗೊಳ್ಳಬೇಕಿದ್ದರೆ ಸಮಿತಿಯ ಮೂವರಾದರೂ ಸಭೆಯಲ್ಲಿ ಹಾಜರಿರಬೇಕು.

ಜಂಟಿ ಆಯುಕ್ತರ ಕಚೇರಿಯಿಂದ ಜಾಹೀರಾತು ಪರವಾನಗಿಗೆ ಸಂಬಂಧಿಸಿದ ಕಡತಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸುವ ಅಧಿಕಾರವನ್ನೂ ಈ ಸಮಿತಿಯು ಹೊಂದಿರುತ್ತದೆ. ಸಮಿತಿಯ ನಿರ್ಧಾರವು ಆಯುಕ್ತರು ನೀಡುವ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ.

‘ಪಾಲಿಕೆ ಸಭೆಯು ಜಾಹೀರಾತು ನೀತಿಗೆ ಒಪ್ಪಿಗೆ ನೀಡುವಾಗ ಕೆಲವೊಂದು ಅಂಶಗಳನ್ನು ಕೈಬಿಡುವಂತೆ ಸೂಚನೆ ನೀಡಿದೆ. ಅದನ್ನು ಆಧರಿಸಿ ಬೈಲಾದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಬೈಲಾವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ಕೊಡಲಿದ್ದೇವೆ. ಅಲ್ಲಿಂದ ಒಪ್ಪಿಗೆ ಸಿಕ್ಕಿದ ಬಳಿಕ ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಿ ಕರಡನ್ನು ಅಂತಿಮಗೊಳಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನುಮುಂದೆ ಅನಧಿಕೃತವಾಗಿ ಯಾರಾದರೂ ಜಾಹೀರಾತು ಅಳವಡಿಸಿದರೆ ದಂಡ ವಿಧಿಸುವ ಪ್ರಸ್ತಾವ ಜಾಹೀರಾತು ಬೈಲಾದ ಕರಡಿನಲ್ಲಿ ಇಲ್ಲ.

‘ಸಾರ್ವಜನಿಕ ಪ್ರದೇಶದ ಅಂದಗೆಡಿಸುವವರ ವಿರುದ್ಧ 1981ರ ಕರ್ನಾಟಕ ಸಾರ್ವಜನಿಕ ಪ್ರದೇಶ ವಿರೂಪ ತಡೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಅವಕಾಶ ಇದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ₹ 1 ಲಕ್ಷದವರೆಗೆ ದಂಡ ವಿಧಿಸಲು ಹಾಗೂ 6 ತಿಂಗಳು ಜೈಲುಶಿಕ್ಷೆ ವಿಧಿಸಲು ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ. ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧವೂ ಇದೇ ಕಾಯ್ದೆಯಡಿ ಕ್ರಮಕೈಗೊಳ್ಳುತ್ತೇವೆ’ ಎಂದು ಆಯುಕ್ತರು ತಿಳಿಸಿದರು.
**

ಜಾಹೀರಾತಿಗೆ ಅನುಮತಿ ಹೇಗೆ?
ಮಳಿಗೆಗಳ ಬಳಿ ಸ್ವಯಂ ಜಾಹೀರಾತು ಅಳವಡಿಸುವುದಕ್ಕೆ, ಸಾರ್ವಜನಿಕ ಸಂದೇಶಗಳನ್ನು ಪ್ರದರ್ಶಿಸುವುದಕ್ಕೆ, ಬೀದಿ ಬದಿಯಲ್ಲಿ ಕೆಲವೊಂದು ರೀತಿಯ ಸೈನೇಜ್‌ಗಳನ್ನು ಅಳವಡಿಸುವುದಕ್ಕೆ ಹೊಸ ಜಾಹೀರಾತು ನೀತಿ ಅವಕಾಶ ಕಲ್ಪಿಸುತ್ತದೆ. ಆದರೆ, ಅದಕ್ಕೆ ಸಂಬಂಧಪಟ್ಟ ವಲಯಮಟ್ಟದ ಮಂಜೂರಾತಿ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ.

ಆಯಾ ವಲಯಗಳ ಜಂಟಿ ಆಯುಕ್ತರು ಅಥವಾ ಹೆಚ್ಚುವರಿ ಆಯುಕ್ತರಿಗೆ ಜಾಹೀರಾತುಗಳಿಗೆ ಅನುಮತಿ ನೀಡುವ ಅಧಿಕಾರ ನೀಡಲಾಗಿದೆ. ತಮ್ಮ ವ್ಯಾಪ್ತಿಗೆ ಬಾರದ ಪ್ರದೇಶಗಳಿಗೆ ಸಂಬಂಧಿಸಿದ ಜಾಹೀರಾತುಗಳಿಗೆ ಅವರು ಅನುಮತಿ ನೀಡುವಂತಿಲ್ಲ. ಯಾವುದಾದರೂ ಜಾಹೀರಾತಿಗೆ ಅನುಮತಿ ನಿರಾಕರಿಸಿದರೆ ಅದಕ್ಕೆ ನಿರ್ದಿಷ್ಟ ಕಾರಣವನ್ನೂ ಅವರು ನಮೂದಿಸಿ ಅರ್ಜಿದಾರರಿಗೆ ಹಿಂಬರಹವನ್ನೂ ನೀಡಬೇಕು.

ಜಾಹೀರಾತಿಗೆ ಅನುಮತಿ ನಿರಾಕರಣೆಯಿಂದ ಅನ್ಯಾಯವಾಗಿದೆ ಎಂದು ಅರ್ಜಿದಾರ ಭಾವಿಸಿದರೆ, ಅರ್ಜಿ ತಿರಸ್ಕೃತಗೊಂಡ 15 ದಿನಗಳ ಒಳಗೆ ಪರಿಶೀಲನಾ ಸಮಿತಿಗೆ ದೂರು ನೀಡಬಹುದು. ಈ ಸಮಿತಿ 30 ದಿನಗಳ ಒಳಗೆ ದೂರಿಗೆ ಸಂಬಂಧಿಸಿ ತೀರ್ಮಾನ ಕೈಗೊಳ್ಳಲಿದೆ.

ಅರ್ಜಿ ಜೊತೆ ಏನೇನು ಸಲ್ಲಿಸಬೇಕು?
* ಅರ್ಜಿದಾರರ ಹೆಸರು, ವಿಳಾಸ, ಇ–ಮೇಲ್‌ ವಿಳಾಸ, ಪ್ಯಾನ್‌ ಸಂಖ್ಯೆ, ಜಿಎಸ್‌ಟಿ ನೋಂದಣಿ ಕುರಿತ ದಾಖಲೆ, ಜಾಹೀರಾತು ಅಳವಡಿಸುವ ಜಾಗದ ಮಾಲೀಕರಿಂದ ಪಡೆದ ನಿರಾಕ್ಷೇಪಣಾ ಪತ್ರ, ಅದಕ್ಕೆ ವಿದ್ಯುತ್‌ ಸಂಪರ್ಕದ ಅಗತ್ಯವಿದ್ದರೆ ಅದರ ವಿವರಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು

* ಯಾವ ದಿನಾಂಕದಿಂದ ಜಾಹೀರಾತು ಪ್ರದರ್ಶಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಬೇಕು

* ಆ ಜಾಗದ ಭೂಬಳಕೆ ವಿವರಗಳನ್ನು ನಮೂದಿಸಬೇಕು

* ಹಾಗೂ ಜಾಹೀರಾತಿನ ಸಂಪೂರ್ಣ ವಿವರಗಳನ್ನು ಒದಗಿಸಬೇಕು

* ಜಾಹೀರಾತು ಮುದ್ರಕರು, ವಿನ್ಯಾಸಗಾರರ ಅಥವಾ ತಯಾರಕರ ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನೂ ಒದಗಿಸಬೇಕು

* ಉದ್ದಿಮೆ ಪರವಾನಗಿ ಪಡೆದಿರುವ ಬಗ್ಗೆ ಆಸ್ತಿ ತೆರಿಗೆ ಪಾವತಿಸಿರುವುದಕ್ಕೆ ದಾಖಲಾತಿಗಳನ್ನು ಒದಗಿಸಬೇಕು

* ಅನುಮತಿ ಪಡೆದವರು ಜಾಹೀರಾತು ನೀತಿಗೆ ವಿರುದ್ಧವಾಗಿ ಫಲಕಗಳನ್ನು ಅಳವಡಿಸುವಂತಿಲ್ಲ

* ನಾಮಫಲಕ, ಮನೆ ನಂಬ್ರಗಳಿಗೆ ಶುಲ್ಕ ವಿನಾಯಿತಿ ಇದೆ. ಇವುಗಳ ಗಾತ್ರ ನಿಗದಿತ ಮಿತಿಯ ಒಳಗಿರಬೇಕು. ಉಳಿದ ಸ್ವಯಂ ಜಾಹೀರಾತುಗಳ ಶುಲ್ಕವು ವಲಯದಿಂದ ವಲಯಕ್ಕೆ ವ್ಯತ್ಯಯವಾಗಲಿದೆ

**

ವಿನ್ಯಾಸ ಪರಿಶೀಲನೆಗೆ ಪ್ರತ್ಯೇಕ ಸಮಿತಿ
ನಿರ್ದಿಷ್ಟ ಪ್ರದೇಶದ ಸ್ವರೂಪ, ವೈಶಿಷ್ಟ್ಯಗಳಿಗೆ ಜಾಹೀರಾತು ಅನುಗುಣವಾಗಿಲ್ಲದಿದ್ದರೆ ಮಂಜೂರಾತಿ ನೀಡುವ ಅಧಿಕಾರಿಯು ಆ ಅರ್ಜಿಯನ್ನು ಜಾಹೀರಾತು ವಿನ್ಯಾಸ ಪರಿಶೀಲನಾ ಸಮಿತಿಗೆ ರವಾನಿಸಬಹುದು.

ವಿಶೇಷ ಆಯುಕ್ತರು (ಯೋಜನೆ) ಅವರು ವಿನ್ಯಾಸ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಂಟಿ ಆಯುಕ್ತರು (ಜಾಹೀರಾತು), ಮುಖ್ಯ ಎಂಜಿನಿಯರ್‌ (ಯೋಜನೆ), ವಿನ್ಯಾಸ ತಜ್ಞರು, ನಗರಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕರು, ನೋಂದಾಯಿತ ಸ್ಥಳೀಯ ಸಂಘಟನೆಯೊಂದರ ಅಧ್ಯಕ್ಷ ಅಥವಾ ಕಾರ್ಯದರ್ಶಿ ಈ ಸಮಿತಿಯಲ್ಲಿರುತ್ತಾರೆ.

ನಿರ್ದಿಷ್ಟ ಪ್ರದೇಶದ ಸ್ವರೂಪ, ವೈಶಿಷ್ಟ್ಯಗಳಿಗೆ ಜಾಹೀರಾತು ಅನುಗುಣವಾಗಿಲ್ಲದಿದ್ದರೆ ಮಂಜೂರಾತಿ ನೀಡುವ ಅಧಿಕಾರಿಯು ಆ ಅರ್ಜಿಯನ್ನು ಜಾಹೀರಾತು ವಿನ್ಯಾಸ ಪರಿಶೀಲನಾ ಸಮಿತಿಗೆ ರವಾನಿಸಬಹುದು.

ವಿಶೇಷ ಆಯುಕ್ತರು (ಯೋಜನೆ) ಅವರು ವಿನ್ಯಾಸ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಂಟಿ ಆಯುಕ್ತರು (ಜಾಹೀರಾತು), ಮುಖ್ಯ ಎಂಜಿನಿಯರ್‌ (ಯೋಜನೆ), ವಿನ್ಯಾಸ ತಜ್ಞರು, ನಗರಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕರು, ನೋಂದಾಯಿತ ಸ್ಥಳೀಯ ಸಂಘಟನೆಯೊಂದರ ಅಧ್ಯಕ್ಷ ಅಥವಾ ಕಾರ್ಯದರ್ಶಿ ಈ ಸಮಿತಿಯಲ್ಲಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.