ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಬ್ದಮಾಲಿನ್ಯ, ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಸಿಡಿಸಬಾರದು. ಹಸಿರು ಪಟಾಕಿಯನ್ನೇ ಬಳಸಬೇಕು. ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ಎಂದು ಬಿಬಿಎಂಪಿ ತಿಳಿಸಿದೆ.
ಮಾಲಿನ್ಯಗಳಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗುತ್ತದೆ. ಆದ್ದರಿಂದ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ಆಚರಿಸಬೇಕು ಎಂದು ‘ಸ್ವಚ್ಚ ದೀಪಾವಳಿ- ಶುಭ ದೀಪಾವಳಿ’ ಅಭಿಯಾನ ಆರಂಭಿಸಿದೆ.
ಸುಪ್ರೀಂ ಕೋರ್ಟ್ ಆದೇಶ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು. ಪಟಾಕಿಗಳ ಪ್ಯಾಕೆಟ್‌ಗಳ ಮೇಲೆ ಹಸಿರು ಚಿನ್ಹೆಯನ್ನು ಖಚಿತಪಡಿಕೊಳ್ಳಬೇಕು. ಕ್ಯೂಆರ್ ಕೋಡ್ ಮೂಲಕ ಪಟಾಕಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ತಿಳಿಸಿದ್ದಾರೆ.
‘ಕೇಂದ್ರ ಸರ್ಕಾರ ‘ಸ್ವಚ್ಛ ಭಾರತ’ ಯೋಜನೆ 2.0 ಅಡಿಯಲ್ಲಿ ‘ಸ್ವಚ್ಛ ದೀಪಾವಳಿ- ಶುಭ ದೀಪಾವಳಿ’ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ‘My Gov Portal’ ನಲ್ಲಿ ಅಥವಾ ವೆಬ್ ಲಿಂಕ್ (https://pledge.mygov.in/swachh-diwali-shubh-diwali/) ನೋಂದಾಯಿಸಿಕೊಂಡು ಅಭಿಯಾನಕ್ಕೆ ಕೈ ಜೋಡಿಸಬೇಕು. ‘ಪರಿಸರ ಸ್ನೇಹಿ ಸ್ಥಳೀಯ ಉತ್ಪನ್ನಗಳನ್ನು ಬಳಸಲು ನಾನು ಬದ್ಧನಾಗಿದ್ದೇನೆ. ಏಕ ಬಳಕೆಯ ಪ್ಲಾಸ್ಟಿಕ್ ಬೇಡ. ಹಸಿರು ದೀಪಾವಳಿಯನ್ನು ಆಚರಿಸುತ್ತೇನೆ’ ಎಂದು ಪ್ರಮಾಣ ಮಾಡಬೇಕು’ ಎಂದು ಹೇಳಿದ್ದಾರೆ.
ಜಾಗೃತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು. ಈ ಬಗ್ಗೆ ಘನತ್ಯಾಜ್ಯ ವಿಭಾಗದ ಆಟೊ ಟಿಪ್ಪರ್‌ಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಂದೇಶ ಪ್ರಚಾರ ಮಾಡಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.