ಬೆಂಗಳೂರು: ಬೆಳ್ಳಂದೂರು ಸಮೀಪ ಜೋಪಡಿಗಳನ್ನು ಅನಧಿಕೃತವಾಗಿ ತೆರವುಗೊಳಿಸಿದ್ದಕ್ಕೆ ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಜೆಡಿಎಸ್‌ನ ಇಮ್ರಾನ್ ಪಾಷಾ, ‘ಇದು ಅಮಾನವೀಯ ನಡೆ’ ಎಂದರು.
‘ಜೋಪಡಿ ತೆರವಿಗೆ ಆಯುಕ್ತರು ಆದೇಶ ಮಾಡಿದ್ದರೆ, ಈ ಸಂಬಂಧ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಈ ಕ್ರಮದ ಹಿಂದೆ ಭೂಮಾಫಿಯಾ ಕೈವಾಡ ಇದೆ ಎಂಬ ಆರೋಪವೂ ಇದೆ. ಅಲ್ಲಿ ಏನಾಯಿತು ಎಂದು ಸ್ಪಷ್ಟಪಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದರು.
‘ಜೋಪಡಿಗಳ ತೆರವಿಗೆ ಬಿಬಿಎಂಪಿ ಆದೇಶ ಮಾಡಿಲ್ಲ. ಈ ವೇಳೆ ನಮ್ಮ ಅಧಿಕಾರಿಗಳು ಯಾರೂ ಸ್ಥಳದಲ್ಲಿರಲಿಲ್ಲ. ತೆರವುಗೊಳಿಸುವ ವೇಳೆ ರಕ್ಷಣೆ ಕೋಡಿ ಎಂದು ಎಇಇ ನಾರಾಯಣಸ್ವಾಮಿ ಪೊಲೀಸರಿಗೆ ಪತ್ರ ಬರೆದಿದ್ದು ಸತ್ಯ. ಆದರೆ, ತೆರವಿಗೆ ಅವರು ದಿನಾಂಕ ನಿಗದಿಪಡಿಸಿಲ್ಲ. ಈ ಪ್ರಕರಣದ ಬಗ್ಗೆ ಮಹದೇವಪುರದ ಜಂಟಿ ಆಯುಕ್ತರು ತನಿಖೆ ಮಾಡಿ ವರದಿ ಕೊಡುತ್ತಾರೆ. ಅದನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸುತ್ತೇನೆ’ ಎಂದು ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದರು.
‘ಈ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ತಮ್ಮನ್ನೂ ಕಕ್ಷಿದಾರನೆಂದು ಪರಿಗಣಿಸುವಂತೆ ಜೋಪಡಿಗಳಿದ್ದ ಜಾಗದ ಮಾಲೀಕರು ಕೋರಿದ್ದಾರೆ. ತಾವೇ ಜೋಪಡಿಗಳನ್ನು ತೆರವುಗೊಳಿಸಿದ್ದಾಗಿ ಅವರು ಹೇಳಿದ್ದಾರೆ ಎಂಬ ಮಾಹಿತಿ ಇದೆ. ಬಡವರ ಬಗ್ಗೆ ನಿಮಗಿರುವಷ್ಟೇ ಕಳಕಳಿ ನಮಗೂ ಇದೆ. ನಾವೆಲ್ಲರೂ ಇದಕ್ಕೆ ಜವಾಬ್ದಾರರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.