ಬೆಂಗಳೂರು: ‘ಬಾಣಸವಾಡಿ ವಾರ್ಡ್‌ನ ರಾಜ್‌ಕುಮಾರ್ ಉದ್ಯಾನದಲ್ಲಿ ವಿದ್ಯುತ್ ಸ್ಪರ್ಶದಿಂದಾಗಿ ಬಾಲಕ ಉದಯ್ ಕುಮಾರ್ ಅಸುನೀಗಿದ ಪ್ರಕರಣ ಸಂಬಂಧ ಆ ವಾರ್ಡ್‌ನ ಬೀದಿದೀಪ ನಿರ್ವಹಣೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
‘ಈ ವಾರ್ಡ್‌ನ 4 ಉದ್ಯಾನಗಳ ನಿರ್ವಹಣೆಯನ್ನು ಬಿಡಿಎಗೆ ವಹಿಸಲಾಗಿತ್ತು. ಅವುಗಳ ಅಭಿವೃದ್ಧಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿತ್ತು. ಹಾಗಾಗಿ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದರು. ಬಳಿಕ ಬಿಡಿಎ ಈ ಉದ್ಯಾನದ ನಿರ್ವಹಣೆಯನ್ನು ಪಾಲಿಕೆಗೆ ಹಸ್ತಾಂತರ ಮಾಡಿದೆ. ಬೀದಿದೀಪ ನಿರ್ವಹಣೆಯ ಗುತ್ತಿಗೆದಾರರೇ ಇವುಗಳ ನಿರ್ವಹಣೆಯನ್ನೂ ನೋಡಿಕೊಳ್ಳಬೇಕು’ ಎಂದು ವಿವರಿಸಿದರು.
ಇದನ್ನೂ ಓದಿ...ಕಮ್ಮನಹಳ್ಳಿ ಉದ್ಯಾನದಲ್ಲಿ ವಿದ್ಯುತ್ ತಂತಿಗೆ ಬಾಲಕ ಬಲಿ
‘ಪಾಲಿಕೆ ವ್ಯಾಪ್ತಿಯಲ್ಲಿ 1,250 ಉದ್ಯಾನಗಳಿವೆ. ಈ ಎಲ್ಲ ಉದ್ಯಾನಗಳನ್ನು ವಾರದೊಳಗೆ ತಪಾಸಣೆ ನಡೆಸಿ ಇಂತಹ ಲೋಪಗಳು ಕಂಡುಬಂದರೆ ಸರಿಪಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ’ ಎಂದು ಅವರು ಬಿಬಿಎಂಪಿ ಕೌನ್ಸಿಲ್ ಸಭೆಗೆ ತಿಳಿಸಿದರು.
ಮಗು ಸತ್ತ ಸ್ಥಳಕ್ಕೆ ಮೇಯರ್ ಭೇಟಿ ನೀಡಿದಾಗ ಸ್ಥಳೀಯ ಪಾಲಿಕೆ ಸದಸ್ಯ ಕೋದಂಡ ರೆಡ್ಡಿ ಅವರಿಗೆ ಮಾಹಿತಿ ನೀಡದ ಬಗ್ಗೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಪೂರ್ವ ವಲಯದ ಜಂಟಿ ಆಯುಕ್ತ, ‘ನಾನು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಹಾಗಾಗಿ ತೋಟಗಾರಿಕಾ ವಿಭಾಗದ ಮೇಲ್ವಿಚಾರಕರಿಗೆ ಹಾಗೂ ವಾರ್ಡ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಮೇಯರ್ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ತಿಳಿಸಿದ್ದೆ. ಪಾಲಿಕೆ ಸದಸ್ಯರಿಗೂ ಮಾಹಿತಿ ನೀಡುವಂತೆ ಸೂಚಿಸಿದ್ದೆ. ಇನ್ನು ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ತಿಳಿಸಿದರು.
‘ಸ್ಥಳೀಯ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ನೋಟಿಸ್ ನೀಡುತ್ತೇವೆ’ ಎಂದು ಆಯುಕ್ತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.