ADVERTISEMENT

ಘನ ತ್ಯಾಜ್ಯ ನಿರ್ವಹಣೆ: ‘ಅವರ’ ನೆಮ್ಮದಿಯನ್ನೇ ಕಸಿಯಿತು ‘ನಮ್ಮನೆ’ ಕಸ

ಭೂ ಭರ್ತಿ ಕೇಂದ್ರಗಳಲ್ಲಿ ಆರೋಗ್ಯ ಸುರಕ್ಷತೆಯ ನಿರ್ಲಕ್ಷ್ಯ * ಗೊಬ್ಬರವಾಗಬೇಕಿದೆ ಕಸ

ಗುರು ಪಿ.ಎಸ್‌
Published 5 ಜುಲೈ 2021, 2:40 IST
Last Updated 5 ಜುಲೈ 2021, 2:40 IST
ನಗರದ ಹೊರವಲಯದಲ್ಲಿನ ಮಿಟ್ಟಗಾನಹಳ್ಳಿಯಲ್ಲಿನ ಭೂ ಭರ್ತಿ ಕೇಂದ್ರದಲ್ಲಿ ಕಸ ನಿರ್ವಹಣೆಯ ಒಂದು ನೋಟ -ಪ್ರಜಾವಾಣಿ ಚಿತ್ರಗಳು/ ರಂಜು ಪಿ
ನಗರದ ಹೊರವಲಯದಲ್ಲಿನ ಮಿಟ್ಟಗಾನಹಳ್ಳಿಯಲ್ಲಿನ ಭೂ ಭರ್ತಿ ಕೇಂದ್ರದಲ್ಲಿ ಕಸ ನಿರ್ವಹಣೆಯ ಒಂದು ನೋಟ -ಪ್ರಜಾವಾಣಿ ಚಿತ್ರಗಳು/ ರಂಜು ಪಿ   

ಬೆಂಗಳೂರು: ಯಾವುದೇ ಮಹಾನಗರದ ಆಡಳಿತ ವರ್ಗಕ್ಕೆ ಎದುರಾಗುವ ದೊಡ್ಡ ಸವಾಲು ಕಸ ನಿರ್ವಹಣೆ. ಈ ಜವಾಬ್ದಾರಿಯನ್ನು ಸ್ಥಳೀಯ ಆಡಳಿತ ಸಂಸ್ಥೆ ಸಮರ್ಥವಾಗಿ ನಿಭಾಯಿಸಿದ್ದೇ ಆದಲ್ಲಿ ಅರ್ಧ ಸಮಸ್ಯೆಗಳು ಬಗೆಹರಿಯುತ್ತವೆ. ಆದರೆ ಈ ಹೊಣೆ ನಿರ್ವಹಣೆಯಲ್ಲಿ ಆಗುವ ವೈಫಲ್ಯವು ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸುತ್ತದೆ.

‘ನಗರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ನಡೆಯುತ್ತಿದೆ’ ಎಂದು ಬಿಬಿಎಂಪಿ ಹೇಳುತ್ತಿದೆ. ಇದಕ್ಕೆ ಪೂರಕವಾಗಿ, ಬೆಂಗಳೂರಿನ ಕಸ ನಿರ್ವಹಣೆ ಮೆಚ್ಚಿ, ಕೇಂದ್ರ ಸರ್ಕಾರವು ಸ್ಮಾರ್ಟ್‌ ಸಿಟಿ ಯೋಜನೆಯಡಿ ನಾಲ್ಕು ಸ್ಟಾರ್‌ಗಳೊಂದಿಗೆ 600ಕ್ಕೆ 395 ಅಂಕಗಳನ್ನೂ ನೀಡಿದೆ. ಆದರೆ, ಬಿಬಿಎಂಪಿಯ ಕಸ ನಿರ್ವಹಣಾ ಪ್ರಕ್ರಿಯೆ ಹೇಗಿದೆ ಎಂದು ಖುದ್ದಾಗಿ ಹೋಗಿ ನೋಡಿದರೆ ವಸ್ತುಸ್ಥಿತಿ ಬೇರೆಯೇ ಇದೆ.

ಕಸ ಸೃಷ್ಟಿಸಿದ ಸಮಸ್ಯೆಗಳಿಂದ ಬಸವಳಿದಸಾರ್ವಜನಿಕರ ಬವಣೆಯ ಕಥೆಗಳು ಕಸವು ಸೃಷ್ಟಿಸುವ ವಿವಿಧ ರೂಪಗಳನ್ನು ನಮ್ಮ ಮುಂದಿಡುತ್ತವೆ. ಕಸದ ವೈಜ್ಞಾನಿಕ ವಿಲೇವಾರಿಯಲ್ಲಿ ಸಾರ್ವಜನಿಕರು ಹಾಗೂ ಬಿಬಿಎಂಪಿ ತೋರುವ ಅನಾದರವು ಇನ್ನೊಬ್ಬರ ಬದುಕಿನಲ್ಲಿ ಹೇಗೆಲ್ಲ ನರಕ ಸೃಷ್ಟಿಸುತ್ತಿದೆ ಎಂಬುದನ್ನು ಎಳೆಎಳೆಯಾಗಿ ತೆರೆದಿಡುತ್ತವೆ.

ADVERTISEMENT

ಮಾವಳ್ಳಿಪುರವೆಂಬ ‘ಶಾಪಗ್ರಸ್ತ’ ಊರು: ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಪರಿಣಾಮ ಹೇಗಿರುತ್ತದೆ ಎಂಬುದನ್ನು ನೋಡಬೇಕೆಂದರೆ, ಹೆಸರಘಟ್ಟ ಹೋಬಳಿಯಲ್ಲಿನ ಮಾವಳ್ಳಿಪುರ ಗ್ರಾಮಕ್ಕೆ ಭೇಟಿ ನೀಡಬೇಕು. ಇಲ್ಲಿ ಕಸ ಸುರಿಯುವುದು ನಿಂತು ಏಳೆಂಟು ವರ್ಷಗಳೇ ಕಳೆದರೂ ಅದರ ದುಷ್ಪರಿಣಾಮಗಳನ್ನು ಜನ ಇನ್ನೂ ಎದುರಿಸುತ್ತಿದ್ದಾರೆ.

ವೃದ್ಧರು, ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಹೈಕೋರ್ಟ್‌ ಮೊರೆ ಹೋಗಿದ್ದರು. ಇಲ್ಲಿ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು, ಜನ–ಜಾನುವಾರಗಳ ಆರೋಗ್ಯ ಸಮೀಕ್ಷೆ ಜೊತೆಗೆ ಕೃಷಿ–ಪರಿಸರ ಸಮೀಕ್ಷೆಯನ್ನೂ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. ಹೆಸರಿಗೆ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್‌ಒ) ನಿರ್ಮಿಸಲಾಗಿತ್ತು. ಈಗ ಅವೆಲ್ಲವೂ ಹದಗೆಟ್ಟಿವೆ. ಆರೋಗ್ಯ ಸಮೀಕ್ಷೆ ಇನ್ನೂ ನಡೆದಿಲ್ಲ.

‘ಪರಿಸರ ರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ವಿವಿಧ ಮೂಲಗಳಿಂದ ಮಾವಳ್ಳಿಪುರಕ್ಕೆ ₹80 ಕೋಟಿ ಅನುದಾನ ನೀಡಲಾಗಿತ್ತು. ಅದನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗಿದೆ. ಈ ಘಟಕವಿದ್ದ ವ್ಯಾಪ್ತಿಯಲ್ಲಿ 1 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸುವ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದ್ದೆವು. ಆ ಕಾರ್ಯವೂ ಆಗಿಲ್ಲ’ ಎಂದು ಮಾವಳ್ಳಿಪುರ ನಿವಾಸಿ ಬಿ. ಶ್ರೀನಿವಾಸ್‌ ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ಕೋಟಿ ರೂಪಾಯಿಗಳನ್ನು ಬೇಡುವ ಕಸ ನಿರ್ವಹಣಾ ಕಾರ್ಯದಲ್ಲಿ ‘ಪರಿಶ್ರಮಿ’ ಮಾನವ ಸಂಪನ್ಮೂಲದ ಕಾಳಜಿಯೂ ಮುಖ್ಯ. ಕಸ ನಿರ್ವಹಣೆಯಲ್ಲಿ ವ್ಯತ್ಯಾಸವಾದರೆ, ಅದು ಸಾರ್ವಜನಿಕರ, ಸಿಬ್ಬಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆಯೂ ಬಿಬಿಎಂಪಿ ಜಾಣ ಮರೆವು ಪ್ರದರ್ಶಿಸುತ್ತಾ ಬಂದಿದೆ.

ಸಂಸ್ಕರಣೆಗೆ ಒಳಗಾಗದ ಕಸವನ್ನು ನಗರದ ಹೊರವಲಯದಲ್ಲಿರುವ ಮಿಟ್ಟಗಾನಹಳ್ಳಿ ಮತ್ತು ಬಾಗಲೂರಿನಲ್ಲಿ ಸುರಿಯಲಾಗುತ್ತಿದೆ. ಮಿಟ್ಟಗಾನಹಳ್ಳಿಯ ಒಂದೇ ಕಡೆಗೆ ದಿನಕ್ಕೆ 2,500 ಟನ್‌ಗಳಷ್ಟು ಮಿಶ್ರ ಕಸ ಬರುತ್ತಿದೆ. ದುರ್ವಾಸನೆ ಬರಬಾರದು ಎಂಬ ಉದ್ದೇಶದಿಂದ ಗುಂಡಿಗಳಲ್ಲಿ ಕಸ ಸುರಿದು ಮೇಲೆ ಮಣ್ಣು ಮುಚ್ಚಲಾಗುತ್ತಿದೆ.

ಆರೋಗ್ಯ ರಕ್ಷಣೆ ಇಲ್ಲ: ವಾರ್ಡ್‌ ಮಟ್ಟದಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದರೊಂದಿಗೆ ಕಸ ನಿರ್ವಹಣೆ ಕಾರ್ಯದ ವಿಕೇಂದ್ರೀಕರಣ ಮಾಡುವ ಮೂಲಕ ಬೆಂಗಳೂರು ಇತರೆ ನಗರಗಳಿಗೆ ಮಾದರಿಯಾಗಿದೆ. ಆದರೆ, ಇಂತಹ ಘಟಕ ಅಥವಾ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವವರ ಆರೋಗ್ಯ ರಕ್ಷಣೆಯ ಬಗ್ಗೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ.

ಮಿಟ್ಟಗಾನಹಳ್ಳಿಯಲ್ಲಿ ದಿನಕ್ಕೆ ಮೂರು ಪಾಳಿಯಲ್ಲಿ 24 ಮಾರ್ಷಲ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸಿಲ್ಲ.

‘ನಾವು ಅನಾರೋಗ್ಯಕ್ಕೆ ಈಡಾದರೆ ಚಿಕಿತ್ಸೆಯ ವ್ಯವಸ್ಥೆಯೇ ಇಲ್ಲ. ನಮ್ಮ ಜೊತೆ ಕೆಲಸ ಮಾಡುವವರಿಗೆ ಕೋವಿಡ್‌ ಬಂದಾಗ ಬಿಬಿಎಂಪಿ ಅವರ ಚಿಕತ್ಸೆಗೆ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಚಿಕಿತ್ಸಾ ವೆಚ್ಚವನ್ನು ಅವರೇ ಭರಿಸಿದರು. ದಿನಕ್ಕೆ 8 ತಾಸು ಈ ದುರ್ವಾಸನೆಯಲ್ಲಿಯೇ ಕೆಲಸ ಮಾಡಬೇಕು. ಯಾವುದೇ ವಿಶೇಷ ಸೌಲಭ್ಯ ನೀಡುವುದು ಬೇಡ. ಕನಿಷ್ಠ ಆರೋಗ್ಯ ವಿಮೆಯಂತಹ ಸೌಲಭ್ಯವನ್ನಾದರೂ ನೀಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಾರ್ಷಲ್‌ ಒಬ್ಬರು ಅಳಲು ತೋಡಿಕೊಂಡರು.

ಮಿಟ್ಟಗಾನಹಳ್ಳಿ ಕಸ ಸಂಗ್ರಹ ಘಟಕದೊಳಗೇ ಖಾಸಗಿಯವರಿಗೆ ಸೇರಿದ ಜಾಗವಿದೆ. ಅಲ್ಲಿಯೇ ಕೆಲವರು ಕಸ ವಿಂಗಡಿಸುವ ಕೆಲಸ ಮಾಡುತ್ತಿದ್ದಾರೆ. ಸಣ್ಣ ಮಕ್ಕಳು ಕೂಡ ಜೊತೆಯಲ್ಲಿದ್ದಾರೆ. ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ ಎಂಬ ಯಾವ ಆತಂಕವೂ ಇಲ್ಲದೆ ಇವರು ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ.

ಬೇಕಿದೆ ಅರಿವು: ನಗರದಲ್ಲಿ ಶೇ 40ರಷ್ಟು ಕಸವನ್ನು ಮಾತ್ರ ಹಸಿ ಮತ್ತು ಒಣ ತ್ಯಾಜ್ಯವಾಗಿ ವಿಂಗಡಿಸಲಾಗುತ್ತಿದೆ. ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಭೂಭರ್ತಿ ಘಟಕಗಳಿಗೆ (ಲ್ಯಾಂಡ್‌ ಫಿಲ್‌) ಹೋಗುವ ಕಸದ ಪ್ರಮಾಣ ಕಡಿಮೆಯಾಗಬೇಕು. ಕಸವನ್ನು ಗೊಬ್ಬರವಾಗಿಸುವ ಕಾರ್ಯ ಇನ್ನೂ ಹೆಚ್ಚಾಗಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಜೊತೆಗೆ, ಬಿಬಿಎಂಪಿಯೂ ವೈಜ್ಞಾನಿಕ ಕಸ ವಿಲೇವಾರಿಗೆ ಆದ್ಯತೆ ನೀಡಿದರೆ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಲಿದೆ.

ವೈಜ್ಞಾನಿಕ ವಿಲೇವಾರಿಗೆ ಆದ್ಯತೆ
‘ರಾಜಧಾನಿಯಲ್ಲಿ ಕಸ ಸಂಗ್ರಹ, ವಿಂಗಡಣೆ ಮತ್ತು ವಿಲೇವಾರಿ ಬಹುದೊಡ್ಡ ಸವಾಲು. ವೈಜ್ಞಾನಿಕವಾಗಿ ಕಸ ವಿಲೇವಾರಿಗೆ, ಕಸದಿಂದ ವಿದ್ಯುತ್‌ ಉತ್ಪಾದಿಸುವ (ವೇಸ್ಟ್‌ ಟು ಎನರ್ಜಿ) ಪ್ರಕ್ರಿಯೆಯನ್ನು ಆದ್ಯತೆಯಾಗಿ ತೆಗೆದುಕೊಂಡಿದ್ದೇವೆ’ ಎಂದು ಬಿಬಿಎಂಪಿ ಕಸ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಕೆ. ಹರೀಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

-ಕೆ. ಹರೀಶ್‌ಕುಮಾರ್‌

‘ಮಿಟ್ಟಗಾನಹಳ್ಳಿ, ಬಾಗಲೂರು ಭೂ ಭರ್ತಿ(ಲ್ಯಾಂಡ್‌ಫಿಲ್‌) ಘಟಕಗಳಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ಮಾರ್ಷಲ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಆರೋಗ್ಯ ಸುರಕ್ಷತೆ ಸೇರಿದಂತೆ ಹಲವು ಸೌಲಭ್ಯಗಳು ಸಿಗುತ್ತಿಲ್ಲ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಮಿಟ್ಟಗಾನಹಳ್ಳಿ ಘಟಕಕ್ಕೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸುತ್ತೇನೆ’ ಎಂದೂ ಹೇಳಿದರು.

‘ಭೂಭರ್ತಿ ಘಟಕಗಳಿಗೆ ಹೋಗುವ ಕಸದ ಪ್ರಮಾಣ ಶೇ 20ಕ್ಕಿಂತ ಕಡಿಮೆಯಾಗಬೇಕು. ಅಂದರೆ, ಅಲ್ಲಲ್ಲಿ ಸಂಗ್ರಹವಾಗುವ ಕಸ ಆಯಾ ವಾರ್ಡ್‌ನಲ್ಲಿ ಗೊಬ್ಬರವಾಗುವ, ಇಂಧನವಾಗಿ ಪರಿವರ್ತಿಸುವ ಕೆಲಸ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬಿಬಿಎಂಪಿಯಿಂದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ’ ಎಂದರು.

ನ್ಯಾಯಾಲಯದ ನಿರ್ದೇಶನ ಪಾಲನೆ: ‘ಮಾವಳ್ಳಿಪುರದಲ್ಲಿ ಆರೋಗ್ಯ ಸಮೀಕ್ಷೆ ನಡೆಸುವುದರ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಿ, ನ್ಯಾಯಾಲಯದ ನಿರ್ದೇಶನ ಪಾಲನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹರೀಶ್‌ಕುಮಾರ್‌ ತಿಳಿಸಿದರು.

**
‘ನ್ಯಾಯಾಲಯದ ಆದೇಶದ ವಿರುದ್ಧ ಕಂಪನಿ’
ಜಲಮಂಡಳಿ, ಬೆಸ್ಕಾಂ ರೀತಿಯಲ್ಲಿ, ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿಯೇ ರಾಜ್ಯ ಸರ್ಕಾರವು ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಎಂಬ ಕಂಪನಿಯನ್ನು ರಚಿಸಿ ಆದೇಶ ಹೊರಡಿಸಿದೆ. ಬಿಬಿಎಂಪಿ ಆಯುಕ್ತರೇ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿರುವ ಈ ಕಂಪನಿ ಜುಲೈ 1ರಿಂದಲೇ ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ, ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ, ಪರಿಸರ ಕಾರ್ಯಕರ್ತರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದೇ 6ರಂದು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

-ಲಿಯೊ ಸಲ್ಡಾನ

‘ಕಸ ಸಂಗ್ರಹ ಮತ್ತು ನಿರ್ವಹಣೆ ಎಂಬುದು ಆಯಾ ಸ್ಥಳೀಯ ಸಂಸ್ಥೆಗಳು ಅಗತ್ಯವಾಗಿ ನೀಡಲೇಬೇಕಾದ ಸೇವೆ. ಸಂವಿಧಾನ ಮತ್ತು ಎಲ್ಲ ಕಾಯ್ದೆಗಳು ಇದನ್ನೇ ಹೇಳುತ್ತವೆ. ಇದನ್ನು ಉಲ್ಲಂಘಿಸಿ ಸರ್ಕಾರ ಕಂಪನಿಯನ್ನು ರಚಿಸುವ ಮೂಲಕ ಈ ಸೇವೆಯ ನಿರ್ವಹಣೆಯನ್ನೂ ಖಾಸಗಿಯವರಿಗೆ ನೀಡಲು ಮುಂದಾಗಿರುವುದು ಸರಿಯಲ್ಲ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದು ಪರಿಸರ ತಜ್ಞ ಲಿಯೊ ಸಲ್ಡಾನ ತಿಳಿಸಿದರು.

‘ಬೆಸ್ಕಾಂ ಮತ್ತು ಜಲಮಂಡಳಿಯಂತಹ ಸಂಸ್ಥೆಗಳು ಕಾಯ್ದೆಗಳ ಮೂಲಕ ರಚನೆಯಾಗಿವೆ. ಆದರೆ, ಬಿಎಸ್‌ಡಬ್ಲ್ಯುಎಂಎಲ್‌ ಸರ್ಕಾರದ ಆದೇಶದ ಮೂಲಕ ರಚನೆ ಮಾಡಲಾಗುತ್ತಿದೆ. ಇದು ನ್ಯಾಯಾಲಯಗಳ ಆದೇಶಕ್ಕೆ ವಿರುದ್ಧ. ಅಲ್ಲದೆ, ಬಿಬಿಎಂಪಿ ರೂಪಿಸಿರುವ ಘನತ್ಯಾಜ್ಯ ನಿರ್ವಹಣಾ ನೀತಿಯೂ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ’ ಎಂದರು.

ತ್ಯಾಜ್ಯ ಸಂಸ್ಕರಣೆಗೆ 9 ಘಟಕಗಳು
ಬಿಬಿಎಂಪಿಯ ಆಯಾ ವಾರ್ಡ್‌ಗಳ ಮಟ್ಟದಲ್ಲಿಯೇ ಒಣ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹಸಿ ತ್ಯಾಜ್ಯ ಸಂಸ್ಕರಣೆಗೆ ಲಿಂಗಧೀರನಹಳ್ಳಿ, ಸುಬ್ಬರಾಯನಪಾಳ್ಯ, ಕೆ.ಆರ್. ಮಾರುಕಟ್ಟೆ, ಸೀಗೇಹಳ್ಳಿ, ಕನ್ನಹಳ್ಳಿ, ದೊಡ್ಡಬಿದರಕಲ್ಲು, ಚಿಕ್ಕನಾಗಮಂಗಲ, ಕೆಸಿಡಿಸಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಎಂಎಸ್‌ಜಿಪಿ ಎಂಬ ಖಾಸಗಿ ಸಂಸ್ಥೆಯು ಒಂದು ಘಟಕವನ್ನು ನಿರ್ವಹಿಸುತ್ತಿದೆ.

-ಬೆಂಗಳೂರಿನ ಮಾವಳ್ಳಿಪುರದಲ್ಲಿ ಈ ಮೊದಲು ಇದ್ದ ಕಸಸಂಗ್ರಹ ಘಟಕದ ನೋಟ

ಮಾವಳ್ಳಿಪುರ ‘ಸಂತ್ರಸ್ತರು’ ಹೇಳುವುದೇನು ?

‘ನ್ಯಾಯಾಲಯದ ಆದೇಶ ಪಾಲಿಸಿಲ್ಲ’
2000ನೇ ವರ್ಷದಿಂದ 2012ರವರೆಗೆ ಮಾವಳ್ಳಿಪುರದಲ್ಲಿ ಬೆಂಗಳೂರಿನ ಕಸ ಸುರಿಯಲಾಗಿದ್ದು, ಪರಿಸರ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿದೆ. ಜನ–ಜಾನುವಾರುಗಳ ಆರೋಗ್ಯ, ಪರಿಸರ ಮತ್ತು ಕೃಷಿ ಸಮೀಕ್ಷೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಆ ಆದೇಶವನ್ನು ಪಾಲಿಸಿಲ್ಲ.
-ಬಿ. ಶ್ರೀನಿವಾಸ್, ನಿವಾಸಿ–ಪರಿಸರ ಕಾರ್ಯಕರ್ತ

*
‘ಚಿಕಿತ್ಸೆಯೂ ದೊರೆತಿಲ್ಲ’
ಮಾವಳ್ಳಿಪುರದಲ್ಲಿನ ಕಸ ಸಂಗ್ರಹಣಾ ಘಟಕದಲ್ಲಿಯೇ ಎರಡು ವರ್ಷ ಕೆಲಸ ಮಾಡಿದ್ದೇನೆ. ಆಗ ಎದೆಯ ಮೇಲೆ ಗಡ್ಡೆ ರೀತಿ ಬೆಳೆದಿತ್ತು. ವೈದ್ಯರ ಸಲಹೆಯಂತೆ ಇಂಜೆಕ್ಷನ್ ಪಡೆದಿದ್ದೆ. ವಾಸಿಯಾಗಿರಲಿಲ್ಲ. ಈಗ ಅದು ಕ್ಯಾನ್ಸರ್ ಗಡ್ಡೆ ಎನ್ನುತ್ತಿದ್ದಾರೆ.ಚಿಕಿತ್ಸೆಗೆ ಬಿಬಿಎಂಪಿಯಿಂದ ಯಾವುದೇ ರೀತಿಯ ವ್ಯವಸ್ಥೆ ಮಾಡಿಲ್ಲ.
-ಬಾಲಕೃಷ್ಣ, ನಿವಾಸಿ

*
‘ನೀರೂ ವಿಷವಾಗಿದೆ‘
ಮಾವಳ್ಳಿಪುರದಲ್ಲಿ ನೀರೆಲ್ಲ ವಿಷವಾಗಿದೆ. ಮನುಷ್ಯರಲ್ಲ, ಪ್ರಾಣಿಗಳು ಕುಡಿಯಲೂ ಯೋಗ್ಯವಾಗಿಲ್ಲ. ನಾಲ್ಕು ಕಡೆ ಶುದ್ಧಕುಡಿಯುವ ನೀರಿನ ಘಟಕ ಹಾಕಲಾಗಿದ್ದು, ಎಲ್ಲವೂ ಹಾಳಾಗಿವೆ. ಮಾವಳ್ಳಿಪುರದವರಿಗೆ ಹೆಣ್ಣು ಕೊಡಲೂ ಯಾರೂ ಮುಂದೆ ಬರುವುದಿಲ್ಲ.
-ಭೈರೇಗೌಡ, ನಿವಾಸಿ

*
‘ಮಕ್ಕಳಲ್ಲಿ ಬೆಳವಣಿಗೆ ಮೇಲೂ ದುಷ್ಪರಿಣಾಮ’
ಇಲ್ಲಿ ಕಸ ಸುರಿಯುತ್ತಿದ್ದ ಸಂದರ್ಭದಲ್ಲಿ ಉಸಿರಾಡುವುದಕ್ಕೂ ಕಷ್ಟವಾಗಿತ್ತು. ಈಗಲೂ ಮಕ್ಕಳಲ್ಲಿ ಬೆಳವಣಿಗೆ ಇಲ್ಲ. ದೊಡ್ಡವರಲ್ಲಿ ಡೆಂಗಿ, ಮೂತ್ರಪಿಂಡ ಸಮಸ್ಯೆ, ಮಹಿಳೆಯರಲ್ಲಿ ಗರ್ಭಕೋಶ ಸಮಸ್ಯೆ ಕಾಣಿಸುತ್ತಿದೆ. ಇಲ್ಲಿನ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಯನ್ನೂ ತಿನ್ನಲು ಆಗುತ್ತಿಲ್ಲ.
-ಲಕ್ಷ್ಮಮ್ಮ, ನಿವಾಸಿ

*
‘ಮಗನನ್ನು ಕಳೆದುಕೊಂಡೆ’
ಕಸ ಸಂಗ್ರಹ ಘಟಕದಿಂದ ಬರುತ್ತಿದ್ದ ಕೊಳಚೆ ನೀರು ನಮ್ಮ ಮನೆಯ ಎದುರಿನಿಂದಲೇ ಹರಿದು ಹೋಗಿ ಕೆರೆಗೆ ಸೇರುತ್ತಿತ್ತು. ಮಳೆ ಬಂದಾಗ ಈಗಲೂ ಕೊಳಚೆ ನೀರು ಹರಿಯುತ್ತದೆ. ಕಳೆದ ವರ್ಷ ನನ್ನ 12 ವರ್ಷದ ಮಗ ಮದನ್‌ ಇದ್ದಕ್ಕಿದ್ದಂತೆ ತಲೆನೋವು ಎಂದ. ಆಸ್ಪತ್ರೆಗೆ ಕರೆದೊಯ್ದರೂ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಐದು ತಾಸಿನಲ್ಲಿಯೇ ಸಾವಿಗೀಡಾದ. ಸಾವಿಗೆ ಕಾರಣ ಏನೆಂದೂ ವೈದ್ಯರು ಹೇಳಲಿಲ್ಲ.
-ನಾಗಮ್ಮ, ನಿವಾಸಿ

*
‘ನೀರು ಮುಕ್ಕಳಿಸಿದರೂ ಗಂಟಲು ನೋವು’
ಅಂತರ್ಜಲವೂ ಕಲುಷಿತವಾಗಿರುವುದರಿಂದ ಕೊಳವೆಬಾವಿ ನೀರು ಕುಡಿಯಲೂ ಆಗುತ್ತಿಲ್ಲ. ನೀರು ಮುಕ್ಕಳಿಸಿ ಆಚೆ ಉಗಿದರೂ ಗಂಟಲು ನೋವು ಬರುತ್ತದೆ. ನಂತರ ಮೈ–ಕೈ ನೋವು ಶುರುವಾಗುತ್ತದೆ.
-ಬದರಿನಾಥ, ನಿವಾಸಿ


ನೋಡಿ: ಬ್ರ್ಯಾಂಡ್ ಬೆಂಗಳೂರು | ‘ಅವರ’ ನೆಮ್ಮದಿಯನ್ನೇ ಕಸಿಯಿತು ‘ನಮ್ಮನೆ’ ಕಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.