ADVERTISEMENT

ಬಿಬಿಎಂಪಿ ಬಜೆಟ್: ಯಾರು ಏನಂತಾರೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:52 IST
Last Updated 28 ಮಾರ್ಚ್ 2021, 4:52 IST
ಡಾ. ಎ. ಭಾನು
ಡಾ. ಎ. ಭಾನು   

‘ವಾಸ್ತವಕ್ಕೆ ಹತ್ತಿರದ ಬಜೆಟ್‌’

ಇದು ತುಂಬಾ ಉತ್ತಮವಾದ, ವಾಸ್ತವಕ್ಕೆ ಹತ್ತಿರವಿರುವ ಬಜೆಟ್. ಅನುಷ್ಠಾನಗೊಳಿಸಲು ಸಾಧ್ಯವಿರುವುದಕ್ಕಿಂತ ಶೇ 35ರಿಂದ ಶೇ 40ರಷ್ಟು ಹೆಚ್ಚು ಘೋಷಣೆಗಳು ಸಾಮಾನ್ಯವಾಗಿ ಇರುತ್ತಿದ್ದವು. ಆದರೆ, ಇದರಲ್ಲಿ ವರಮಾನ ಮೀರಿದ ಘೋಷಣೆಗಳು ಕಾಣುವುದಿಲ್ಲ. ವಲಯವಾರು ಅನುದಾನ ಹಂಚಿರುವುದು ಮತ್ತು ಸಂಗ್ರಹವಾಗುವ ಆಸ್ತಿ ತೆರಿಗೆಯ ಶೇ 1ರಷ್ಟನ್ನು ಆಯಾ ವಾರ್ಡ್‌ ಅಭಿವೃದ್ಧಿಗೆ ಬಳಸುವ ಯೋಜನೆಗಳ ಮೂಲಕ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ವಲಯಕ್ಕೆ ಮಹತ್ವ ನೀಡಲಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಬಹುಪಾಲು ಬಿಬಿಎಂಪಿಯನ್ನೇ ಅವಲಂಬಿಸಬೇಕಾಗಿರುವುದರಿಂದ ಆ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿರುವುದು ಸ್ವಾಗತಾರ್ಹ.

-ವಿ. ರವಿಚಂದರ್, ನಗರ ಯೋಜನಾ ತಜ್ಞ

ADVERTISEMENT

ಸುಸ್ಥಿರ ಅಭಿವೃದ್ಧಿ ಗುರಿ ಈಡೇರಿಕೆ ಪ್ರಸ್ತಾಪವಿಲ್ಲ

ಸುಸ್ಥಿರ ಅಭಿವೃದ್ಧಿ ಗುರಿಗಳ ಈಡೇರಿಕೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಇಂದಿನ ತುರ್ತು ಅಗತ್ಯ. ಆದರೆ, ಈ ಬಜೆಟ್‌ನಲ್ಲಿ ಇದಕ್ಕೆ ಪೂರಕವಾದ ಅಂಶಗಳು ಹೆಚ್ಚು ಸ್ಪಷ್ಟವಾಗಿಲ್ಲ. ಅಂಗನವಾಡಿ, ಶಾಲೆ, ಆಸ್ಪತ್ರೆ, ಕಟ್ಟಡ ಕಾರ್ಮಿಕರಿಗೆ ವಸತಿ, ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಹೆಚ್ಚು ಕ್ರಮ ಕೈಗೊಳ್ಳಬೇಕಾಗಿತ್ತು. ಹಸಿ ತ್ಯಾಜ್ಯ ಮತ್ತು ಕೊಳಚೆ ನಿರ್ವಹಣೆ ಕಾರ್ಯ ಆಯಾ ವಾರ್ಡ್‌ ಮಟ್ಟದಲ್ಲಿಯೇ ನಡೆಯುವ ವ್ಯವಸ್ಥೆ ರೂಪಿಸಬೇಕಾಗಿತ್ತು. ಆಯಾ ವಾರ್ಡ್‌ಗಳಲ್ಲಿ ತೀರಾ ಅಗತ್ಯವಿರುವ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಶೇ 40ರಷ್ಟು ನಿಧಿ ಒದಗಿಸಬೇಕು. ಈ ಅನುದಾನ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಬಾರದು. ತಾಂತ್ರಿಕ ಜಾಗೃತ ಕೋಶದ ಮೂಲಕ ಸ್ಥಳ ಪರಿಶೀಲನೆ ನಡೆಸುವುದಕ್ಕಿಂತ ಮುಖ್ಯವಾಗಿ ಆಯಾ ಕಾಮಗಾರಿಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವ ಅಧಿಕಾರವನ್ನು ಆಯಾ ವಾರ್ಡ್‌ ಕಮಿಟಿಗಳಿಗೆ ನೀಡಬೇಕು.

-ಕಾತ್ಯಾಯಿನಿ ಚಾಮರಾಜ್, ಸಿವಿಕ್‌ ಬೆಂಗಳೂರು ಕಾರ್ಯಕಾರಿ ಟ್ರಸ್ಟಿ

‘ಬಜೆಟ್‌ ಅಲ್ಲ, ಘೋಷಣೆ ಮಾತ್ರ’

ಇದೊಂದು ನಿರರ್ಥಕ ಬಜೆಟ್. ನಿರ್ದಿಷ್ಟ ಯೋಜನೆಗಳಿಗಿಂತ ಘೋಷಣೆಗಳು ಮಾತ್ರ ಇವೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ₹3000 ಕೋಟಿ ಬಾಕಿ ಬರಬೇಕು ಎಂದು ಬಜೆಟ್‌ನಲ್ಲಿಯೇ ಹೇಳಲಾಗಿದೆ. ಇಷ್ಟು ತೆರಿಗೆ ಸಂಗ್ರಹಿಸುವ ಬಿಬಿಎಂಪಿಯು ಇನ್ನೂ ಕೇಂದ್ರ–ರಾಜ್ಯ ಸರ್ಕಾರದ ಅನುದಾನವನ್ನೇ ಅವಲಂಬಿಸಿರುವುದು ದುರದೃಷ್ಟಕರ. ‘ಬಿ’ ಖಾತಾದಲ್ಲಿ ಆಸ್ತಿಗಳ ವಿವರ ದಾಖಲಿಸುವುದನ್ನು ರದ್ದುಗೊಳಿಸಿ, ‘ಎ’ ಖಾತಾ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಇದು ಕೂಡ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

-ಶಾಂತಲಾ ದಾಮ್ಲೆ, ಆಮ್‌ ಆದ್ಮಿ ಪಕ್ಷದ ಉಪಾಧ್ಯಕ್ಷೆ

ಮಾಜಿ ಮೇಯರ್‌ಗಳು ಹೇಳುವುದೇನು ?

ಇದು ಜನಗಳ ಬಜೆಟ್‌ ಅಲ್ಲ

ಜನರ ಸಲಹೆ ಪಡೆಯದ, ಜನಪ್ರತಿನಿಧಿಗಳೇ ಇಲ್ಲದ ಇದು ಜನಪರ ಬಜೆಟ್‌ ಅಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬಜೆಟ್‌ ಮಂಡಿಸುವ ಅವಶ್ಯಕತೆ ಏನಿತ್ತು ? ಅನುದಾನ ಬಳಸಲು ಅನುಮೋದನೆ ತೆಗೆದುಕೊಂಡಿದ್ದರೆ ಸಾಕಿತ್ತು. ತೆರಿಗೆ ಹಾಕದಿರುವುದನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಆದರೆ, ಬಿಬಿಎಂಪಿಯ ಪ್ರತಿ ಬಜೆಟ್‌ನಲ್ಲಿ ತೆರಿಗೆ ಹಾಕುವುದಿಲ್ಲ. ಐದು ವರ್ಷಗಳಿಗೊಮ್ಮೆ ಮಾತ್ರ ತೆರಿಗೆ ಪ್ರಮಾಣ ಹೆಚ್ಚು ಮಾಡಲಾಗುತ್ತದೆ. ಇನ್ನು, ವಿವಿಧ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ₹2,000 ಕೋಟಿ ಬಾಕಿ ಇದೆ. ಯಾವ ಪುರುಷಾರ್ಥಕ್ಕೆ ಈ ಬಜೆಟ್‌ ಬೇಕಾಗಿತ್ತು ?

-ರಾಮಚಂದ್ರಪ್ಪ

ನಗರ ಅಭಿವೃದ್ಧಿಗೆ ಒತ್ತು ನೀಡಿಲ್ಲ

ಜನಪ್ರತಿನಿಧಿಗಳೇ ಇಲ್ಲದೆ, ಆಡಳಿತಾಧಿಕಾರಿಯವರು ಮಂಡಿಸಿದ ಬಜೆಟ್‌ ಜನಪರವಾಗಿ ಇಲ್ಲ. ನಗರದ ಅಭಿವೃದ್ಧಿಗೆ ಒತ್ತು ಕೊಡುವ ಅಂಶಗಳೂ ಇದರಲ್ಲಿ ಇಲ್ಲ. ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ 12ರಷ್ಟು ಅನುದಾನ ತೆಗೆದಿಡಲಾಗುತ್ತದೆ. ಆದರೆ, ಬಿಬಿಎಂಪಿಗೆ ಹೆಚ್ಚುವರಿಯಾಗಿ ಶೇ 1ರಷ್ಟು ನೀಡಬೇಕು ಎಂದು ಹಣಕಾಸು ನಿಗಮದ ಶಿಫಾರಸ್ಸಿನ ಅನ್ವಯ ಸರ್ಕಾರ ಆದೇಶಿಸಿದೆ. ಆದರೆ, ಈ ಬಜೆಟ್‌ನಲ್ಲಿ ಆ ಅನುದಾನದ ಪ್ರಸ್ತಾಪವೇ ಇಲ್ಲ.

-ಪಿ.ಆರ್. ರಮೇಶ್

ಬಜೆಟ್‌ ಅನುಷ್ಠಾನ ಅನುಮಾನ

ಚುನಾಯಿತ ಜನಪ್ರತಿನಿಧಿಗಳು ಅಂದರೆ ಮೇಯರ್‌ ಅವರು ಮಂಡಿಸಿದ ಬಜೆಟ್‌ನ ಕಾರ್ಯಕ್ರಮಗಳ ಅನುಷ್ಠಾನವೇ ಸರಿಯಾಗಿ ಆಗುತ್ತಿರಲಿಲ್ಲ. ಇನ್ನು, ಅಧಿಕಾರಿಗಳು ಮಂಡಿಸಿದ ಈ ಬಜೆಟ್‌ನ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವ ಬಗ್ಗೆ ಅನುಮಾನವಿದೆ. ಆಡಳಿತ ಪಕ್ಷದ ಸದಸ್ಯರ ಬೇಡಿಕೆಗಳಿಗೆ ತಕ್ಕಂತೆ ಬಜೆಟ್‌ ರೂಪಿಸಲಾಗಿದೆ.

-ಜಿ.ಪದ್ಮಾವತಿ

ತಾರಸಿ ಉದ್ಯಾನ ಉತ್ತೇಜನ ಸ್ವಾಗತಾರ್ಹ

ಇದೊಂದು ಉತ್ತಮ ಮತ್ತು ಜನರನ್ನು ಹೆಚ್ಚು ಒಳಗೊಳ್ಳುವ ಬಜೆಟ್. ತಾರಸಿ ಉದ್ಯಾನ ಚಟುವಟಿಕೆಗೆ ಉತ್ತೇಜನ ನೀಡಿರುವುದು ಸ್ವಾಗತಾರ್ಹ. ಆದರೆ, ಮನೆಯಲ್ಲಿಯೇ ಗೊಬ್ಬರ ತಯಾರಿಸುತ್ತಿರುವ ನಾಗರಿಕರಿಗೆ ಕಸ ಸಂಗ್ರಹದ ಸೆಸ್‌ ಕಡಿತ ಮಾಡಬೇಕಾಗಿತ್ತು. ರಸ್ತೆಯಲ್ಲಿ ಕಸಗೂಡಿಸುವ ಕಾರ್ಯದ ವೀಕ್ಷಣೆಗೆ ಆನ್‌ಲೈನ್‌ ಪೋರ್ಟಲ್‌ ಮಾಡಿರುವುದು ಉತ್ತಮ. ಆದರೆ, ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.

-ರೇಣುಕಾಪ್ರಸಾದ್‌, ಶಾಂತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಸಾರಕ್ಕಿ ಮೇಲ್ಸೇತುವೆ ಉಲ್ಲೇಖವಿಲ್ಲ

ಸಾರಕ್ಕಿ ಸಿಗ್ನಲ್‌ ಮೇಲ್ಸೇತುವೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸುವ ನಿರೀಕ್ಷೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಉಲ್ಲೇಖ ಇರದಿರುವುದು ಬೇಸರ ತಂದಿದೆ. ಈ ವೃತ್ತದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇದ್ದು, ಇಲ್ಲಿ ಮೇಲ್ಸೇತುವೆಯ ಅಗತ್ಯ ತುಂಬಾ ಇದೆ. ಇದಕ್ಕೆ ನಿರ್ದಿಷ್ಟ ಅನುದಾನ ಘೋಷಿಸಿ ಕಾರ್ಯರೂಪಕ್ಕೆ ತರಬೇಕು.

-ಡಾ.ಎ. ಭಾನು, ಪ್ರೆಸ್ಟೀಜ್ ಫಾಲ್ಕನ್ ಸಿಟಿ ನಿವಾಸಿಗಳ ಸಂಘ

ವಾರ್ಡ್‌ವಾರು ಅನುದಾನ ಹಂಚಿಕೆ ಸ್ವಾಗತಾರ್ಹ

ವಿವೇಚನಾ ನಿಧಿ ಅಡಿಯಲ್ಲಿ ಅನುದಾನ ಕೊಡುವ ಬದಲು, ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ ಎಲ್ಲ ವಾರ್ಡ್‌ಗಳಿಗೆ ತಲಾ ₹20 ಲಕ್ಷ ಘೋಷಿಸಿರುವುದು ಸ್ವಾಗತಾರ್ಹ. ಇಲ್ಲದಿದ್ದರೆ ಪ್ರಭಾವಿಗಳು ತಮ್ಮ ವಾರ್ಡ್‌ಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿಸಿಕೊಂಡು ಚೆನ್ನಾಗಿರುವ ರಸ್ತೆಗಳನ್ನೂ ಅಗೆಯುವ ಕೆಲಸವಾಗುತ್ತಿತ್ತು. ಈಗ ಅದು ತಪ್ಪಲಿದೆ.

-ಅಬ್ದುಲ್ ಅಲೀಂ, ಕನಕಪುರ ರೋಡ್‌ ಚೇಂಜ್ ಮೇಕರ್ಸ್‌ ಅಧ್ಯಕ್ಷ

ಉತ್ತಮ ಬಜೆಟ್‌

ನಗರದಲ್ಲಿ ಎಲ್ಲ ಮೂಲಸೌಕರ್ಯ ಅಭಿವೃದ್ಧಿಗೆ ತಕ್ಕಂತೆ ಪಾದಚಾರಿ ಮಾರ್ಗ ನಿರ್ಮಾಣವಾಗಿಲ್ಲ. ಈಗ ಪ್ರತಿ ವಾರ್ಡ್‌ನಲ್ಲಿ ಪಾದಚಾರಿ ಮಾರ್ಗ ಮತ್ತು ಶೌಚಾಲಯಗಳ ನಿರ್ಮಾಣಕ್ಕಾಗಿಯೇ ಅನುದಾನ ಘೋಷಿಸಿರುವುದು ಸ್ವಾಗತಾರ್ಹ. ಇದೊಂದು ಉತ್ತಮ ಬಜೆಟ್.

-ಚೈತನ್ಯಾ ಸುಬ್ರಹ್ಮಣ್ಯ, ಶೋಭಾ ಹಿಲ್‌ವ್ಯೂ ನಿವಾಸಿಗಳ ಸಂಘದ ಸದಸ್ಯೆ


ವಿದ್ಯಾರ್ಥಿಗಳಿಗೆ ಉತ್ತೇಜನ

ಕೋವಿಡ್‌ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ₹25 ಸಾವಿರ, ಶಿಕ್ಷಕರಿಗೆ ₹2 ಲಕ್ಷದವರೆಗೆ ಪ್ರೋತ್ಸಾಹ ಧನ ಘೋಷಿಸಿರುವುದು ಸ್ವಾಗತಾರ್ಹ. ವಿದೇಶಿಗರಿಗೆ ನಮ್ಮ ನಾಡು–ನುಡು, ಸಂಸ್ಕೃತಿ, ಇತಿಹಾಸವನ್ನು ಪರಿಚಯಿಸುವ ‘ಎಕ್ಸ್‌ಪಿರಿಯನ್ಸ್‌ ಬೆಂಗಳೂರು’ ಉತ್ತಮ ಯೋಜನೆಯಾಗಿದೆ.

-ಪುರುಷೋತ್ತಮ ರಾಜು, ಜರಗನಹಳ್ಳಿ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ

ರಾಜಕೀಯ ಮುಖಂಡರು ಹೇಳೋದೇನು ?

ಜನಸ್ನೇಹಿ ಬಜೆಟ್‌

ಕೋವಿಡ್‌ ಸಂಕಷ್ಟ ಕಾಲದಲ್ಲೂ ಜನರ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸದ ಈ ಬಜೆಟ್‌ ಜನಸ್ನೇಹಿಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಜೆಟ್‌ನಲ್ಲಿ ನಗರದ ಎಲ್ಲ ವಾರ್ಡುಗಳಿಗೆ, ವಲಯಗಳಿಗೆ ಸಮಾನ ಪ್ರಾಮುಖ್ಯತೆ ಕೊಡಲಾಗಿದೆ.

-ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ಶಾಸಕ

ರಾಜಕಾಲುವೆಗೆ ಅನುದಾನ ಬೇಕಾಗಿತ್ತು

ಮಳೆಗಾಲದ ಸಂದರ್ಭದಲ್ಲಿ ನಗರದಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುತ್ತದೆ. ಈ ಉದ್ದೇಶದಿಂದ ಮಳೆನೀರುಗಾಲುವೆಗಳ ನಿರ್ಮಾಣ–ನಿರ್ವಹಣೆಗೆ ಹೆಚ್ಚು ಅನುದಾನ ನೀಡಬೇಕಾಗಿತ್ತು. ಕಳೆದ ಬಾರಿಯೂ ಈ ಉದ್ದೇಶಕ್ಕೆ ಹಣ ತೆಗೆದಿರಿಸಿರಲಿಲ್ಲ. ಇನ್ನು, ಆಸ್ತಿಗಳನ್ನು ಬಿ ಖಾತೆಗಳಿಂದ ‘ಎ’ ಖಾತಾ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಬಡ–ಮಧ್ಯಮ ವರ್ಗದವರಿಗೆ ಇದರಿಂದ ಅನುಕೂಲವಾಗುತ್ತದೆ.

-ಬೈರತಿ ಸುರೇಶ್‌, ಕಾಂಗ್ರೆಸ್‌ ಶಾಸಕ

ಆರೋಗ್ಯ ವಲಯಕ್ಕೆ ಗಮನ ನೀಡದ ಬಿಬಿಎಂಪಿ

ಕೋವಿಡ್‌ ಸಂದರ್ಭದಲ್ಲಿ ಆರೋಗ್ಯ ವಲಯಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿತ್ತು. ಆದರೆ, ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೆ ಯಾವುದೇ ಹಣ ಮೀಸಲಿಟ್ಟಿಲ್ಲ. ವೈದ್ಯಕೀಯ ಮತ್ತು ಸಾಮಾನ್ಯ ಸಾರ್ವಜನಿಕ ಆರೋಗ್ಯಕ್ಕೆ 2020-21 ರ ಪರಿಷ್ಕೃತ ಬಜೆಟ್‌ನಲ್ಲಿ ₹443 ಕೋಟಿ ಮೀಸಲಿರಿಸಿದ್ದರೆ 2021-22 ರ ಸಾಲಿಗೆ ಕೇವಲ ₹337 ಕೋಟಿ ಮೀಸಲಿರಿಸಲಾಗಿದೆ.

-ಕೆ.ಎನ್. ಉಮೇಶ್, ಸಿಪಿಐ (ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ


’ಬಿಜೆಪಿ ಶಾಸಕರ ಕ್ಷೇತ್ರಗಳಿಗಷ್ಟೇ ಅನುದಾನ‘

’ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ₹1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ₹950 ಕೋಟಿ ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಸರಾಸರಿ ₹200 ಕೋಟಿ ನೀಡಲಾಗಿದೆ. ಆದರೆ, ದಾಸರಹಳ್ಳಿ ಹಾಗೂ ಬ್ಯಾಟರಾಯನಪುರ ಕ್ಷೇತ್ರಕ್ಕೆ ತಲಾ ₹25 ಕೋಟಿ ನೀಡಲಾಗಿದೆ. ಹೆಚ್ಚು ಹಳ್ಳಿಗಳು ಇರುವುದು ನಮ್ಮ ಕ್ಷೇತ್ರಗಳಲ್ಲೇ. ಈ ತಾರತಮ್ಯಕ್ಕೆ ಕೊನೆ ಎಂದು?

-ಆರ್‌.ಮಂಜುನಾಥ್‌, ಜೆಡಿಎಸ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.