ADVERTISEMENT

ಬಿಬಿಎಂಪಿ ಬಜೆಟ್‌ ಭಾಷಣ: ಸಿದ್ದರಾಮಯ್ಯ ‘ಸಮಾಜವಾದಿ ಸಿದ್ಧಾಂತದ ದ್ಯೋತಕ’

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 22:54 IST
Last Updated 29 ಫೆಬ್ರುವರಿ 2024, 22:54 IST
<div class="paragraphs"><p>ಸಿದ್ದರಾಮಯ್ಯ ‘ಸಮಾಜವಾದಿ ಸಿದ್ಧಾಂತದ ದ್ಯೋತಕ’</p></div>

ಸಿದ್ದರಾಮಯ್ಯ ‘ಸಮಾಜವಾದಿ ಸಿದ್ಧಾಂತದ ದ್ಯೋತಕ’

   

ಬಿಬಿಎಂಪಿ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಮೂರು ಬಾರಿ ಹೊಗಳಲಾಗಿದೆ. ‘ಮುಖ್ಯಮಂತ್ರಿಯವರ ದಾರ್ಶನಿಕ ಮುಂದಾಳತ್ವ’ ಎಂದು ಆರಂಭದಲ್ಲಿ ಹೇಳಲಾಗಿದ್ದು, ಇಂದಿರಾ ಕ್ಯಾಂಟೀನ್‌ ವಿಷಯ ಪ್ರಸ್ತಾಪಿಸುವಾಗ ‘ನಮ್ಮ ಭಾರತ ಸಂವಿಧಾನದ ಸಮಾಜವಾದಿ ಸಿದ್ಧಾಂತದ ದ್ಯೋತಕವಾಗಿರುವ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ’ ಎಂದು ಬಣ್ಣಿಸಲಾಗಿದೆ.

ಡಿ.ಕೆ. ಶಿವಕುಮಾರ್‌ ದೂರದೃಷ್ಟಿಗೆ ಗಾಂಧೀಜಿ, ಲಿಂಕನ್‌ ಮಾತು ಜೋಡಣೆ

ADVERTISEMENT

ಬಜೆಟ್‌ ಭಾಷಣದ ಮೊದಲ ಪುಟದಲ್ಲಿ ಉಪ ಮುಖ್ಯಮಂತ್ರಿಯವರ ಮಾರ್ಗದರ್ಶನ ಎಂದು ಹೇಳಲಾಗಿದೆ. ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯನ್ನು ಪ್ರಸ್ತಾಪಿಸುವಾಗ, ‘ಪ್ರಜಾಪ್ರಭುತ್ವವು ಜನರ, ಜನರಿಂದ, ಜನರಿಗಾಗಿ ಇರುವ ಸರ್ಕಾರ’ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್‌ ಅವರ ಮಾತು ಮತ್ತು ‘ಭಾರತದ ಸಂವಿಧಾನದ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಜನಾಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಬೇಕೆನ್ನುವ’ ಮಹಾತ್ಮ ಗಾಂಧೀಜಿ ಆಶಯಗಳನ್ನು ಶಿವಕುಮಾರ್‌ ಅವರ ನಡೆಯನ್ನು ಬಣ್ಣಿಸಲು ಬಳಸಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರು ನಿವಾಸಿಗಳಿಗೆ ಉತ್ಕೃಷ್ಟ ದರ್ಜೆಯ ಸೌಲಭ್ಯ ಮತ್ತು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ‘ನಾಗರಿಕರ ಧ್ವನಿ ಸರ್ಕಾರದ ಧ್ವನಿ’ ಎಂಬ ಘೋಷವಾಕ್ಯ ನೀಡಿದ್ದಾರೆ ಎಂದು ಹೊಗಳಲಾಗಿದೆ.

ಸಂವಿಧಾನ ಪೀಠಿಕೆ

ಬಜೆಟ್‌ ಭಾಷಣ ಪುಸ್ತಕದ ಒಳಮುಖಪುಟದಲ್ಲಿ ಸಂವಿಧಾನದ ಪೀಠಿಕೆ ಪ್ರಕಟಿಸಲಾಗಿದೆ.

ಚಾಣಕ್ಯನ ಮಾತು

ಅರ್ಥಶಾಸ್ತ್ರದಲ್ಲಿ ಚಾಣಕ್ಯ ಹೇಳಿದಂತೆ, ‘ರಾಜ್ಯದ ಖಜಾನೆಯು ಆಡಳಿತ ಯಂತ್ರದ ಬೆನ್ನುಲುಬು’ ಎಂದು ಹೇಳಿದ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ, ‘ಕಾನೂನಿನ ಪ್ರಕಾರ ಪಾವತಿಸಬೇಕಾದ ಕಂದಾಯವನ್ನು ಪಾವತಿಸದೇ ಇರುವುದು ನಮ್ಮ ನಾಗರಿಕತೆಯ ಹಳೆಯ ರೂಢಿ’ ಎಂದು ಕಂದಾಯ ವಿಭಾಗದ ಮಾಹಿತಿ ಹೇಳುವ ಪ್ರಾರಂಭದಲ್ಲಿ ನುಡಿದರು.

ಬಸವಣ್ಣನ ಸುಂಕ

ಮುಂದುವರಿದು, ‘ಭಂಡವ ತುಂಬಿದ ಬಳಿಕ, ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು, ಕಳ್ಳ ನಾಣ್ಯ ಸಲುಗೆಗೆ ಸಲ್ಲದು, ಕಳ್ಳ ನಾಣ್ಯ ಸಲಲೀಯರಯ್ಯಾ, ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ, ಕೂಡಲ ಸಂಗಮದೇವಾ’ ಎಂದು ಸುಂಕದ ವಂಚನೆ ಕುರಿತ ಬಸವಣ್ಣನವರ ವಚನ ಹೇಳಿ, ಇದು ಇಂದಿಗೂ ಪ್ರಸ್ತುತವೆನಿಸುತ್ತದೆ ಎಂದರು. 

60 ನಿಮಿಷದ ಓದು

ಗಂಟಲಿನ ಸಮಸ್ಯೆಯಿಂದ ಸಾಕಷ್ಟು ಕೆಮ್ಮಿ, ಆರು ಬಾರಿ ನೀರು ಕುಡಿದು 106 ಅಂಶಗಳ 64 ಪುಟಗಳ ಬಜೆಟ್‌ ಭಾಷಣವನ್ನು 60 ನಿಮಿಷದಲ್ಲಿ ಶಿವಾನಂದ ಓದಿ ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.