ಬೆಂಗಳೂರು: ಬಿಬಿಎಂಪಿ ಬಜೆಟ್ ತಯಾರಿ ಆರಂಭವಾಗಿದ್ದು, ಫೆ.15ರೊಳಗೆ ಸಿದ್ಧಗೊಳ್ಳಲಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬಜೆಟ್ ತಯಾರಿಗಾಗಿ ಸಭೆಗಳನ್ನು ನಡೆಸಲಾಗುತ್ತಿದೆ. 2021–22ರ ಪೂರ್ಣ ವೆಚ್ಚವನ್ನು ಪರಿಶೀಲಿಸಲಾಗುತ್ತಿದೆ. 2022–23ರ ಬಜೆಟ್ ಸಿದ್ಧತೆ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾದ ಮೇಲೆ ಅಂತಿಮಗೊಳಿಸಲಾಗುತ್ತದೆ. ನಂತರ ಅನುಮೋದನೆಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದರು.
ಮಹದೇಪುರ ವಲಯ ವ್ಯಾಪ್ತಿಯಲ್ಲಿ ಮತಗಟ್ಟೆ ಹಾಗೂ ಕಾಮಗಾರಿಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹೆಣ್ಣೂರು ಜಂಕ್ಷನ್ ಬಳಿಯ ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾರ್ಯವನ್ನು ಕೂಡಲೇ ಪ್ರಾರಂಭಿಸಲು ಸೂಚಿಸಿದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ಹೊರಮಾವು ವಾರ್ಡ್ ಮುನಿಶಾಮಪ್ಪ ಬಡಾವಣೆಯಲ್ಲಿ 750 ಮೀಟರ್ ಉದ್ದದ ರಾಜಕಾಲುವೆ ಕಾಮಗಾರಿಯನ್ನು ಪರಿಶೀಲಿಸಿದರು. ಒತ್ತುವರಿಯಾಗಿದ್ದ ಪ್ರದೇಶದಲ್ಲಿ ಎಲ್ಲವನ್ನೂ ತೆರವು ಮತ್ತೆ ಈ ಭಾಗ ಜಲಾವೃತವಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ರಾಜಕಾಲುವೆಯ ಎರಡೂ ಬದಿ ಸಸಿಗಳನ್ನು ನೆಡಲು ಹೇಳಿದರು.
ಎಸ್.ಆರ್ ಲೇಔಟ್‌ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ 17 ಕಟ್ಟಡಗಳ ಭಾಗಗಳನ್ನು ತೆರವುಗೊಳಿಸಿ, 270 ಮೀಟರ್ ಉದ್ದದ 30 ಅಡಿ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತ ವೆಂಕಟಾ ಚಲಪತಿ, ಪ್ರಧಾನ ಎಂಜಿನಿಯರ್ ಪ್ರಹ್ಲಾದ್, ಮುಖ್ಯ ಎಂಜಿನಿಯರ್ ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.