ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್ ತಂಗುದಾಣ, ಸ್ಕೈವಾಕ್‌ನಲ್ಲಿ ಜಾಹೀರಾತು ಪ್ರದರ್ಶನದ ನೆಲಬಾಡಿಗೆ, ಸೇವಾ ತೆರಿಗೆಗಳು ಸೇರಿದಂತೆ ₹100 ಕೋಟಿಗೂ ಅಧಿಕ ಬಾಕಿ ಇದೆ. ಡಿಮ್ಯಾಂಡ್ ನೋಟಿಸ್ ನೀಡಿದ್ದರೂ ಅಧಿಕಾರಿಗಳು ಅದನ್ನು ವಸೂಲಿ ಮಾಡಿಲ್ಲ. ಅವಧಿ ಮೀರಿದ ಜಾಹೀರಾತು ಗಳನ್ನೂ ತೆರವು ಮಾಡಿಲ್ಲ.
ನಗರದಲ್ಲಿರುವ ನೂರಾರು ತಂಗುದಾಣ, ಸ್ಕೈವಾಕ್‌ಗಳ ಜಾಹೀರಾತಿಗೆ ಸಂಬಂಧಿಸಿದ ಶುಲ್ಕ 2016ರಿಂದ ಬಾಕಿ ಉಳಿದಿದೆ. 2022ರ ಡಿ.5ರಂದು ಒಂದೇ ದಿನ ಒಟ್ಟು ₹50.27 ಕೋಟಿ ಮೊತ್ತದ ಡಿಮ್ಯಾಂಡ್ ನೋಟಿಸ್‌ಗಳನ್ನು ಜಾಹೀರಾತು ವಿಭಾಗದ ಸಹಾಯಕ ಆಯುಕ್ತರು ಹಲವು ಏಜೆನ್ಸಿಗಳಿಗೆ ಜಾರಿ ಮಾಡಿದ್ದಾರೆ. ಜೂನ್‌ವರೆಗೂ ಇಂತಹ ನೋಟಿಸ್‌ಗಳು ಜಾರಿಯಾಗುತ್ತಲೇ ಇದ್ದರೂ ಬಾಕಿ ಪಾವತಿಯಾಗಿಲ್ಲ.
ನಗರದ ವಿವಿಧ ಸ್ಥಳಗಳಲ್ಲಿ ಜಾಹೀರಾತು ಹಕ್ಕುಗಳನ್ನು ನೀಡಿ ನಿರ್ಮಾಣ, ಕಾರ್ಯಾಚರಣೆ,
ವರ್ಗಾವಣೆ (ಬಿಒಟಿ) ಆಧಾರದಲ್ಲಿ ಬಸ್ ತಂಗುದಾಣ ನಿರ್ಮಿಸಲು ಹಲವು ಏಜೆನ್ಸಿಗಳಿಗೆ ಅನುಮತಿ ನೀಡಲಾಗಿದೆ. 2016ರಿಂದ ಹಲವು ತಂಗುದಾಣಗಳು ನಿರ್ಮಾಣವಾಗಿ, ಜಾಹೀರಾತನ್ನು ಪ್ರದರ್ಶಿಸ ಲಾಗುತ್ತಿದೆ. 2020ರ ಜ.14ರ ಬಿಬಿಎಂಪಿ ಹೊರಾಂಗಣ ಜಾಹೀ ರಾತು ಫಲಕ ಉಪವಿಧಿಗಳ ಪ್ರಕಾರ, ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯ ನಿರ್ಮಾಣಗಳ ಮೇಲೆ ಜಿಎಸ್‌ಟಿ ತಗಾದೆಯನ್ನು ಹೊರ ಗುಳಿಸಿ, ದರ ನಿಗದಿ ಮಾಡಲಾಗಿದೆ.
ಪ್ರಮುಖ ರಸ್ತೆಗಳ ಬಸ್ ತಂಗುದಾಣಗಳಲ್ಲಿ ಪ್ರತಿ ಚದರ ಮೀಟರ್‌ಗೆ ₹780 ಹಾಗೂ ಇತರೆ ಸ್ಥಳಗಳ ತಂಗುದಾಣಗಳಿಗೆ ಒಂದು ಚದರ ಮೀಟರ್‌ಗೆ ₹600 ಜಾಹೀರಾತು ಶುಲ್ಕ ವಿಧಿಸಲಾಗಿದೆ. ಸ್ಕೈವಾಕ್‌ಗಳ ಮೇಲಿನ ಜಾಹೀರಾತು ಪ್ರದರ್ಶನಗಳ ಮೇಲೂ ಇದೇ ರೀತಿಯ ಶುಲ್ಕವಿದೆ. ಇದರಂತೆ ಲೆಕ್ಕಾಚಾರ ಮಾಡಿ, ಪ್ರತಿಯೊಂದು ಏಜೆನ್ಸಿಗೆ 15 ದಿನಗಳಲ್ಲಿ ಡಿ.ಡಿ. ಮೂಲಕ ಪಾವತಿಸಲು ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗಿದೆ. ಈ ಪ್ರಕ್ರಿಯೆ ಮುಗಿದು ಏಳು ತಿಂಗಳು ಕಳೆದಿದ್ದರೂ ಯಾವುದೇ ಕ್ರಮ ವಾಗಿಲ್ಲ. ಹಲವು ಏಜೆನ್ಸಿಗಳ ಒಪ್ಪಂದದ ಅವಧಿ ಮೀರಿ ದ್ದರೂ ಜಾಹೀರಾತುಗಳನ್ನು ಪ್ರದರ್ಶಿಸ ಲಾಗುತ್ತಿದೆ.
ಹತ್ತಾರು ಕಂಪನಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಿರುವ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಎಸ್. ಅಮರೇಶ್ ಅವರು ಪಡೆದು ಕೊಂಡಿದ್ದಾರೆ. ಈ ದಾಖಲೆಗಳ ಪ್ರಕಾರ, 15 ದಿನಗಳಲ್ಲಿ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಕೆಎಂಸಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಲಾಗಿದೆ.
‘ತಂಗುದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಷರತ್ತೂ ಇದೆ. ಆದರೆ, ಏಜೆನ್ಸಿಗಳು ಅದನ್ನೂ ಪಾಲಿಸುತ್ತಿಲ್ಲ’ ಎಂದು ಅಮರೇಶ್ ದೂರಿದರು.
‘ತೆರವಿಗೆ ಹಿರಿಯ ಅಧಿಕಾರಿಗಳ ಅನುಮತಿ ಅಗತ್ಯ’
‘ತಂಗುದಾಣ, ಮೇಲುಸೇತುವೆ ಜಾಹೀರಾತಿನ ನೆಲಬಾಡಿಗೆ, ಸೇವಾ ಶುಲ್ಕ ಬಾಕಿ ವಸೂಲಿಗೆ ಡಿಸೆಂಬರ್‌ನಿಂದ ಇಲ್ಲಿಯವರೆಗೂ ಡಿಮ್ಯಾಂಡ್ ನೋಟಿಸ್ ನೀಡಲಾಗುತ್ತಿದೆ. ಕೆಲವರು ಪಾವತಿಸಿದ್ದಾರೆ. ಉಳಿದವರ ಮೇಲೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಬರೆಯಲಾಗಿದೆ. ಕೆಲವು ಟೆಂಡರ್ ಅವಧಿ ಮುಗಿದಿದ್ದು ಅವುಗಳನ್ನು ತೆರವು ಮಾಡಬೇಕಿದೆ. ಹಿರಿಯ ಅಧಿಕಾರಿಗಳು ಅನುಮತಿ ನೀಡಿದ ಮೇಲೆ ತೆರವು ಕಾರ್ಯ ಮಾಡಬೇಕಿದೆ. ಹಿಂದೆ ಇದ್ದವರು ಬಾಕಿ ವಸೂಲಿ ಮಾಡಿಲ್ಲ. ಇದೀಗ ನಾನು ಬಂದಮೇಲೆ ಕ್ರಮ ಕೈಗೊಂಡಿದ್ದೇನೆ’ ಎಂದು ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಶ್ರೀಧರ್ ರೆಡ್ಡಿ ತಿಳಿಸಿದರು. ಜಾಹೀರಾತು ವಿಭಾಗದ ವಿಶೇಷ ಆಯುಕ್ತ ದೀಪಕ್ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
‘ಟೆಂಡರ್ ಕರೆಯದೆ ಅಕ್ರಮ’
‘ಬಸ್ ತಂಗುದಾಣಗಳನ್ನು ನಿರ್ಮಿಸಿ, ಜಾಹೀರಾತು ಪ್ರದರ್ಶಿಸಲು ಏಜೆನ್ಸಿಗಳಿಗೆ ನೀಡಲಾಗಿದೆ. ಅವರು ನೆಲಬಾಡಿಗೆ ಹಾಗೂ ಜಾಹೀರಾತು ಶುಲ್ಕ ನೀಡಬೇಕು. ಆದರೆ, 2015ರಿಂದ ಹಲವು ಏಜೆನ್ಸಿಗಳಿಂದ ಬಾಕಿ ವಸೂಲಿ ಮಾಡಿಲ್ಲ. ಹಲವು ಏಜೆನ್ಸಿಗಳ ಟೆಂಡರ್ ಅವಧಿ 2018ರಿಂದಲೇ ಮುಗಿದಿದೆ. ಆದರೆ ಈವರೆಗೆ ಅವುಗಳಿಂದ ಬಾಕಿ ವಸೂಲಿ ಮಾಡಿಲ್ಲ, ಜಾಹೀರಾತನ್ನು ತೆರವೂ ಮಾಡಿಲ್ಲ. ಅಧಿಕಾರಿಗಳ ಈ ವರ್ತನೆಯಿಂದ ಬಿಬಿಎಂಪಿಗೆ ನೂರಾರು ಕೋಟಿ ಆರ್ಥಿಕ ನಷ್ಟ ಉಂಟಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ, ಉಪ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರೂ ಕ್ರಮವಾಗಿಲ್ಲ’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಪಡೆದಿರುವ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್. ಅಮರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.