ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಯನ್ನು ‘ವಿಜಯ ದಶಮಿ’ ವೇಳೆಗೆ ಉದ್ಘಾಟಿಸಲು ಸಿದ್ಧತೆ ನಡೆಯುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿರುವ ಕಾವೇರಿ 5 ನೇ ಹಂತದ ಜಲರೇಚಕ ಯಂತ್ರಗಾರ ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಉದ್ಘಾಟನೆಗೂ ಮುನ್ನ, ಯೋಜನೆಯ ವಿವಿಧ ಹಂತದ ಕಾಮಗಾರಿಗಳನ್ನು ಖುದ್ಧಾಗಿ ಪರಿಶೀಲಿಸುತ್ತಿದ್ದೇನೆ. ಕೊಳವೆ ಮಾರ್ಗಗಳ ಕಾಮಗಾರಿ ಜೊತೆಗೆ, ಹಾರೋಹಳ್ಳಿ ಜಲರೇಚಕ ಯಂತ್ರಗಾರಕ್ಕೆ ಭೇಟಿ ನೀಡಿದ್ದೇನೆ. ಟಿ.ಕೆ.ಹಳ್ಳಿಯ ಜಲಶುದ್ಧೀಕರಣ ಘಟಕ ಮತ್ತು ಜಲರೇಚಕ ಯಂತ್ರಗಾರವನ್ನೂ ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.
ಯೋಜನೆಯ ಅನುಷ್ಠಾನದ ವೇಳೆ ಕೆಲವೊಂದು ಕಡೆ ಸಮಸ್ಯೆಗಳು ಎದುರಾಗಿದ್ದವು. ಎಲ್ಲವನ್ನೂ ಹಂತ ಹಂತವಾಗಿ ಬಗೆಹರಿಸಿದ್ದೇವೆ. ಕೆಂಗೇರಿಯಲ್ಲಿ ಜಮೀನಿನ ಸಮಸ್ಯೆ ಇತ್ತು. ಮುಖ್ಯಮಂತ್ರಿಯವರು, ಶಾಸಕ ಎಸ್.ಟಿ. ಸೋಮಶೇಖರ್ ಜೊತೆ ಸೇರಿ ಭೂ ಮಾಲೀಕರೊಂದಿಗೆ ಚರ್ಚಿಸಿ, ಅವರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್) ಮಾಡಿ, ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅಲ್ಲಿ ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.
’ಪ್ರಸ್ತುತ ಬೆಂಗಳೂರು ನಗರಕ್ಕೆ 1400 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಕಾವೇರಿ 5ನೇ ಹಂತ ಉದ್ಘಾಟನೆಯಾದ ನಂತರ 750 ಎಂಎಲ್‌ಡಿ ನೀರು ಹೊಸದಾಗಿ ಸೇರಿಕೊಳ್ಳುತ್ತಿದೆ. ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ಆರ್.ಆರ್.ನಗರ ಮತ್ತು ಬೊಮ್ಮನಹಳ್ಳಿ ವಲಯದ 110 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
’ಟ್ಯಾಂಕರ್ ಬಂದ್ ಮಾಡಿ, ಮನೆ ಮನೆಗೂ ನೀರು ಕೊಡಬೇಕು ಎಂಬುದು ನಮ್ಮ ಸರ್ಕಾರದ ಸಂಕಲ್ಪ. ಕನಿಷ್ಠ 10 ವರ್ಷ ಬೆಂಗಳೂರು ನಗರಕ್ಕೆ ಯಾವುದೇ ತೊಂದರೆ ಇರಬಾರದೆಂದು ಈ ಯೋಜನೆ ರೂಪಿಸಿದ್ದೇವೆ’ ಎಂದು ತಿಳಿಸಿದರು.
ಆರಂಭದಲ್ಲಿ, ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಬಳಿ ನಡೆಯುತ್ತಿರುವ ಬೃಹತ್ ಕೊಳವೆ ಮಾರ್ಗದ ಕಾಮಗಾರಿಯನ್ನು ಡಿಸಿಎಂ ಪರಿಶೀಲಿಸಿದರು. ಈ ವೇಳೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್ ಮನೋಹರ್, ಜಲಮಂಡಳಿ ಎಂಜಿನಿಯರ್‌ಗಳು ಹಾಜರಿದ್ದರು.
ಕಾರ್ಮಿಕರು ಜೆಸಿಬಿಯಿಂದ ಅಳವಾದ ಕಂದಗಳನ್ನು ತೆಗೆದು ಬೃಹತ್ ಗಾತ್ರದ ಕೊಳವೆಗಳನ್ನು ಜೋಡಿಸುವುದನ್ನು ವೀಕ್ಷಿಸಿದರು. ಜಲಮಂಡಳಿ ಎಂಜಿನಿಯರ್‌ಗಳು ಕಾಮಗಾರಿ ಪ್ರಗತಿಯನ್ನು ಶಿವಕುಮಾರ್ ಅವರಿಗೆ ವಿವರಿಸಿದರು.
ನಂತರ ಹಾರೋಹಳ್ಳಿಗೆ ತೆರಳಿದ ಶಿವಕುಮಾರ್ ಅವರು, ಜಲರೇಚಕ ಯಂತ್ರಾಗಾರಕ್ಕೆ ಭೇಟಿ ನೀಡಿ, ಯಂತ್ರಗಳ ಕಾರ್ಯವೈಖರಿ ಯನ್ನು ಪರಿಶೀಲಿಸಿದರು.
ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ತೆರಳುವ ಮುನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕಾವೇರಿ ಭವನದ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.