ADVERTISEMENT

ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿಸದವರ ಮೇಲೆ ಕ್ರಮ ಕೈಗೊಳ್ಳದವರಿಗೆ ದಂಡನೆ!

27 ಕಂದಾಯ ಸಿಬ್ಬಂದಿ ಮೇಲೆ ಆರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 20:36 IST
Last Updated 19 ಫೆಬ್ರುವರಿ 2024, 20:36 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳ ಮಾಲೀಕತ್ವವನ್ನು ಪಾಲಿಕೆ ಹೆಸರಿಗೆ ಜಂಟಿಯಾಗಿ ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳದ ಕಂದಾಯ ವಿಭಾಗದ 27 ಸಿಬ್ಬಂದಿ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

‘ಆಸ್ತಿ ತೆರಿಗೆ ಸಂಗ್ರಹದ ವಿಷಯದಲ್ಲಿ ಕರ್ತವ್ಯಲೋಪ ಎಸಗಲಾಗಿದೆ’ ಎಂದು ಆರೋಪ ಪಟ್ಟಿ ಸಲ್ಲಿಸಿರುವ ಬಿಬಿಎಂಪಿ ಆಡಳಿತದ ಉಪ ಆಯುಕ್ತರು, ‘ಇಲಾಖಾ ವಿಚಾರಣೆ ನಡೆಸಲಾಗುತ್ತದೆ’ ಎಂದು ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ADVERTISEMENT

ಬಿಬಿಎಂಪಿ ಉಪ ವಿಭಾಗಗಳಲ್ಲಿ ಅತಿಹೆಚ್ಚು ಆಸ್ತಿ ತೆರಿಗೆ ಉಳಿಸಿಕೊಂಡಿರುವ 50 ಸ್ವತ್ತುಗಳನ್ನು ಗುರುತಿಸಿ, ಅವುಗಳಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಆಯಾ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಆಸ್ತಿ ತೆರಿಗೆ ಪಾವತಿಸದ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಿದ್ದ ಕಂದಾಯ ಅಧಿಕಾರಿಗಳು, ಅವಧಿಯಲ್ಲಿ ಪಾವತಿಸದವರ ಕಟ್ಟಡಗಳನ್ನು ಜಪ್ತಿ ಮಾಡಿ, ಬೀಗಗಳನ್ನೂ ಹಾಕಿದ್ದರು. ಇಷ್ಟಾದರೂ ಮಾಲೀಕರು ಆಸ್ತಿ ತೆರಿಗೆ ಪಾವತಿಸಿರಲಿಲ್ಲ. ‘ಇಂತಹ ಸ್ವತ್ತುಗಳನ್ನು ಪಾಲಿಕೆ ಹೆಸರನಲ್ಲಿ ಜಂಟಿ ಮಾಲೀಕತ್ವವನ್ನು ನಮೂದಿಸುವಂತೆ ‘ನಮೂನೆ–13’ ಅನ್ನು ಮಾಲೀಕರಿಗೆ ಜಾರಿ ಮಾಡಿ, ಅದನ್ನು ಸ್ಥಳೀಯ ಉಪ ನೋಂದಣಾಧಿಕಾರಿಯವರಿಗೆ ಕಳುಹಿಸಲು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಮೇಲಧಿಕಾರಿಗಳ ಈ ಸೂಚನೆಯನ್ನು ಪಾಲಿಸದೆ ಕರ್ತವ್ಯ ನಿರ್ಲಕ್ಷ್ಯ ತೋರಿದ್ದು, ಇದರಿಂದ ಆಸ್ತಿ ತೆರಿಗೆ ವಸೂಲಾತಿ ಕುಂಠಿತವಾಗಿವೆ. ಹೀಗಾಗಿ ನಿಮ್ಮ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿ, ಇಲಾಖಾ ವಿಚಾರಣೆ ನಡೆಸಲಾಗುವುದು’ ಎಂದು ಉಪ ಆಯುಕ್ತರು ನೋಟಿಸ್‌ನಲ್ಲಿ ವಿವರಿಸಿದ್ದಾರೆ.

ಹಗಲು–ರಾತ್ರಿ ಕೆಲಸ: ‘2023–24ನೇ ಸಾಲಿನಲ್ಲಿ ₹3,598 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ₹258 ಕೋಟಿ ಹೆಚ್ಚಾಗಿದೆ. ವಿಧಾನಸಭೆ, ಲೋಕಸಭೆ, ಬಿಬಿಎಂಪಿ ಚುನಾವಣೆ ಕೆಲಸ, ಶಿಕ್ಷಕರ ಕ್ಷೇತ್ರದ ಚುನಾವಣೆ ಕಾರ್ಯಗಳು, ಜಾಹೀರಾತು, ಆಸ್ತಿಗಳ ವಿಭಾಗ, ನ್ಯಾಯಾಲಯದ ಪ್ರಕರಣಗಳು ಸೇರಿದಂತೆ ನಿತ್ಯದ ಸಾಮಾನ್ಯ ಕೆಲಸಗಳನ್ನೂ ಕಂದಾಯ ವಿಭಾಗ ಸಿಬ್ಬಂದಿ ನಿರ್ವಹಿಸುತ್ತಿದ್ದೇವೆ. ಹಗಲು–ರಾತ್ರಿ ಕೆಲಸ ಮಾಡಿದರೂ ಮುಗಿಯುತ್ತಿಲ್ಲ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಅಳಲು ತೋಡಿಕೊಂಡರು.

‘ನಿತ್ಯವೂ 16 ಗಂಟೆಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೂ ಕಂದಾಯ ವಿಭಾಗದ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ವಿವರಣೆ ನೀಡಿದರೂ ಉದ್ದೇಶಪೂರ್ವಕವಾಗಿ, ಭಯದ ವಾತಾವರಣ ನಿರ್ಮಿಸಲು ಆರೋಪ ಪಟ್ಟಿ ನೀಡಿ, ಇಲಾಖಾ ವಿಚಾರಣೆ ನಡೆಸುವುದಾಗಿ ಹೆದರಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.