ಬೆಂಗಳೂರು: ನಗರದಲ್ಲಿ ಏಪ್ರಿಲ್ 1ರಿಂದ ನಾಲ್ಕು ಸಾವಿರ ಗುಂಡಿ ಮುಚ್ಚಲಾಗಿದೆ. ಇನ್ನೂ ಎರಡು ಸಾವಿರ ಉಳಿದಿವೆ. ‘ರಸ್ತೆ ಗುಂಡಿ ಗಮನ’ ಆ್ಯಪ್‌ನಲ್ಲಿ ಸುಮಾರು 1,600 ದೂರುಗಳು ಬಂದಿವೆ. ಅದರಲ್ಲಿ ಒಂದು ಸಾವಿರ ರಸ್ತೆ ಗುಂಡಿಗಳಾಗಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ರಸ್ತೆಗಳ ಗುಂಡಿ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಲು ತುಷಾರ್ ಗಿರಿನಾಥ್ ಅವರು ಮಂಗಳವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
‘ರಸ್ತೆಗಳ ಗುಂಡಿಗಳನ್ನು ಮುಚ್ಚುವುದು ನಿರಂತರ ಕೆಲಸ. ಮಳೆ ಬರುತ್ತೆ, ಮತ್ತೆ ಗುಂಡಿಯಾಗುತ್ತದೆ. ನಾವು ಮುಚ್ಚಿದ ಗುಂಡಿ ಪಕ್ಕದಲ್ಲೇ ಗುಂಡಿಯಾಗುತ್ತದೆ’ ಎಂದು ಸುದ್ದಿಗಾರರಿಗೆ ಹೇಳಿದರು.
ಪ್ರಮುಖ ರಸ್ತೆಗಳನ್ನು ಗುಂಡಿ ಮುಕ್ತವಾಗಿಸಲು ಪ್ರತಿ 5 ಕಿ.ಮೀಗೆ ಒಬ್ಬ ಎಂಜಿನಿಯರ್ ನೇಮಿಸಲಾಗಿದೆ. ಇದರ ಮೇಲ್ವಿಚಾರಣೆಯನ್ನು ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರಿಗೆ ವಹಿಸಲಾಗಿದೆ. ವಾರ್ಡ್ ರಸ್ತೆಗಳ ನಿರ್ವಹಣೆಗೂ ನೋಡಲ್ ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಮುಖ ರಸ್ತೆಗಳನ್ನು ಹಲವು ವರ್ಷಗಳಿಂದ ದುರಸ್ತಿ ಮಾಡಿಲ್ಲ. 459 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಲ್ಲಿ ₹660 ಕೋಟಿ ವೆಚ್ಚದಲ್ಲಿ ಮೇಲ್ಮೈ ಪದರದ ಡಾಂಬರೀಕರಣ ಮಾಡಲಾಗುತ್ತದೆ. ಅಕ್ಟೋಬರ್‌ನಲ್ಲಿ ಕಾರ್ಯಾದೇಶ ನೀಡಿ, ಒಂದೆರಡು ತಿಂಗಳಲ್ಲಿ ಈ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತದೆ ಎಂದರು.
ಹೆಬ್ಬಾಳ ಜಂಕ್ಷನ್, ವೀರಣ್ಣಪಾಳ್ಯ, ಮಾನ್ಯತಾ ಪಾರ್ಕ್, ಕೆ.ಆರ್. ಪುರ, ಎಚ್‌ಆರ್‌ಬಿಆರ್ ಲೇಔಟ್ ಹಾಗೂ ಪಶ್ಚಿಮ ವಲಯದ ಕೆಲವು ರಸ್ತೆಗಳಲ್ಲಿ ಮುಖ್ಯ ಆಯುಕ್ತರು ಸಂಚರಿಸಿದರು.
ಬಿಎಂಆರ್‌ಸಿಎಲ್ ಕಾಮಗಾರಿ ನಡೆಯುತ್ತಿರುವ ಕಡೆ, ಮಳೆ ನೀರು ಹರಿಯಲು ಕ್ರಮ ವಹಿಸುವಂತೆ, ರಸ್ತೆ ಸುಸ್ಥಿತಿಯಲ್ಲಿಡುವಂತೆ ಸೂಚಿಸಿದರು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಉಪಸ್ಥಿತರಿದ್ದರು.
ಅಮಾನತು:
‘ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತು ಮಾಡಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಸಿದರು.
ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳನ್ನು ಮಂಗಳವಾರ ಮಧ್ಯಾಹ್ನ ದಿಢೀರ್ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಶಾಂತಲಾನಗರ ವ್ಯಾಪ್ತಿಯ ವಾರ್ ಮೆಮೋರಿಯಲ್ ಜಂಕ್ಷನ್ (ಡೆಕತ್ಲಾನ್ ಹತ್ತಿರ)ಬಳಿ ರಸ್ತೆ ಮೇಲ್ಮೈ ಹಾಳಾಗಿದ್ದು, ಮಿಲ್ಲಿಂಗ್ ಮಾಡಿ ರಸ್ತೆ ಸರಿಪಡಿಸಿಲು ಸೂಚಿಸಿದರು.
ವಿಕ್ಟೋರಿಯಾ ಲೇಔಟ್‌ನ ಪಿ.ಕೆ ಕ್ವಾಟ್ರಸ್ ರಸ್ತೆ ಹಾಗೂ ಮದರ್ ಥೆರೆಸಾ ರಸ್ತೆಯ ಮಧ್ಯಭಾಗದಲ್ಲಿ ಜಲಂಡಳಿ ರಸ್ತೆ ಕತ್ತರಿಸಿದ್ದು, ಸರಿಯಾಗಿ ದುರಸ್ತಿ ಮಾಡಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ದುರಸ್ತಿ ಮಾಡಲು ಹೇಳಿದರು.
‘ವ್ಯವಸ್ಥೆ ಸರಿಯಾಗಿಲ್ಲ’
‘ರಸ್ತೆಗಳ ನಿರ್ವಹಣೆ ವ್ಯವಸ್ಥೆ ಸರಿಯಾಗಿಲ್ಲ. ಹೀಗಾಗಿ ಒಂದೇ ಬಾರಿಗೆ ರಸ್ತೆಗಳಲ್ಲಿ ಗುಂಡಿ ಹಾಗೂ ಇತರೆ ಸಮಸ್ಯೆಗಳು ಬರುತ್ತಿವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ‘ರಸ್ತೆಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಆದರೆ ಆ ರೀತಿಯ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಇನ್ನು ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನೆರಡು ತಿಂಗಳಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.