ADVERTISEMENT

ಬೇಡಿಕೆಗಳನ್ನು ಈಡೇರಿಸಲು ಆದೇಶ ಹೊರಡಿಸಿದ BBMP: ಗುತ್ತಿಗೆದಾರರ ಮುಷ್ಕರ ವಾಪಸ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:24 IST
Last Updated 6 ಜುಲೈ 2024, 16:24 IST
ಬಿಬಿಎಂಪಿ ಗುತ್ತಿಗೆದಾರ ಸಂಘದ ಬೇಡಿಕೆಗಳನ್ನು ಈಡೇರಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌  ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್‌ ಅವರು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು
ಬಿಬಿಎಂಪಿ ಗುತ್ತಿಗೆದಾರ ಸಂಘದ ಬೇಡಿಕೆಗಳನ್ನು ಈಡೇರಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌  ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್‌ ಅವರು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು   

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬಿಬಿಎಂಪಿ ಗುತ್ತಿಗೆದಾರರ ಸಂಘದ ಮನವಿಗಳನ್ನು ಈಡೇರಿಸಿ, ಆದೇಶ ಹೊರಡಿಸಿರುವುದರಿಂದ ಗುತ್ತಿಗೆದಾರರು ಮುಷ್ಕರವನ್ನು ವಾಪಸ್‌ ಪಡೆದಿದ್ದಾರೆ.

ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸಾಕಷ್ಟು ಸಮಯ ನೀಡಿದ್ದರೂ ಅದಕ್ಕೆ ಮುಖ್ಯ ಆಯುಕ್ತರು ಸ್ಪಂದಿಸಿರಲಿಲ್ಲ. ಹೀಗಾಗಿ ಜುಲೈ 8ರಿಂದ ನಗರದಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಸಿತ್ತು.

ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ನೇತೃತ್ವದಲ್ಲಿ ಪದಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌  ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್‌ ಅವರು ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಿದ್ದರು.

ADVERTISEMENT

‘ಇದರ ಬಗ್ಗೆ ಆದೇಶವಾಗುವವರೆಗೂ ಮುಷ್ಕರ ವಾಪಸ್‌ ಪಡೆಯುವುದಿಲ್ಲ’ ಎಂದು ಸಂಘದ ಸದಸ್ಯರು ಪಟ್ಟು ಹಿಡಿದಿದ್ದರು. ಜುಲೈ 6ರಂದು ಕಚೇರಿ ಆದೇಶ ಹೊರಡಿಸಲಾಗಿದ್ದು, ಗುತ್ತಿಗೆದಾರರ ಎಲ್ಲ ಬೇಡಿಕೆಗಳನ್ನೂ ಈಡೇರಿಸಿದಂತಾಗಿದೆ.

‘ಗುತ್ತಿಗೆದಾರರಿಗೆ ಬಿಲ್ ಸಲ್ಲಿಸಲು ಸರಳ ಮಾದರಿ ಹಾಗೂ ಟಿವಿಸಿಸಿ ರ‍್ಯಾಂಡಮೈಸೇಷನ್‌ ತನಿಖೆ ಕೈಬಿಡಬೇಕು. ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಿಂದ ಬಿಲ್‌ ಪಾವತಿಸಬೇಕು. ಕಟ್ಟಡ ಕಾಮಗಾರಿಗಳ ಬಿಲ್ಲುಗಳನ್ನು ‘ಎಸೆನ್ಷಿಯಲ್‌’ ಎಂದು ಪರಿಗಣಿಸಿ ತ್ವರಿತವಾಗಿ ಪಾವತಿಸಬೇಕು. ಹಿಂದಿನ ಪದ್ಧತಿಯಂತೆ ಟೆಂಡರ್ ಪ್ರೀಮಿಯಂ ಅಧಿಕಾರವನ್ನು ಮುಖ್ಯ ಎಂಜಿನಿಯರ್‌ಗೆ ನೀಡಬೇಕು’ ಎಂದು ಸಂಘದವರು ಮನವಿ ಮಾಡಿದ್ದರು. ಇದನ್ನು ಅನುಷ್ಠಾನಗೊಳಿಸಲು ಅನುವಾಗುವಂತೆ ಬಿಬಿಎಂಪಿ ಕಚೇರಿ ಆದೇಶವಾಗಿದೆ.

‘ಎಲ್ಲಾ ಬೇಡಿಕೆಗಳು ಈಡೇರಿವೆ’
‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಧ್ಯ ಪ್ರವೇಶದಿಂದ ಬಿಬಿಎಂಪಿ ಮುಖ್ಯ ಆಯುಕ್ತರು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿರುತ್ತಾರೆ. ಆದ್ದರಿಂದ ಜುಲೈ 8ರಿಂದ ಕರೆಯಲಾಗಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ತಿಳಿಸಿದರು. ‘ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಳಿಸಲಾಗಿರುವ ಕಾಮಗಾರಿಗಳಿಗೆ 2022ರ ಡಿಸೆಂಬರ್‌ವರೆಗೆ ಬಿಲ್‌ ಪಾವತಿಸಲು ಸಮ್ಮತಿಸಲಾಗಿದೆ. ಸೋಮವಾರದಿಂದ ಈ ಬಾಬ್ತಿನ ಹಣ ಬಿಡುಗಡೆಯಾಗಲಿದೆ. ಬಿಲ್‌ ಪಾವತಿ ಮಾಡಲಾಗಿರುವ ಮೊತ್ತದಲ್ಲಿ ಶೇ 25ರಷ್ಟು ತಡೆಹಿಡಿದಿರುವುದನ್ನು ಬಿಡುಗಡೆ ಮಾಡುವ ವಿಷಯ ಸರ್ಕಾರದ ಅನುಮೋದನೆಯಲ್ಲಿದೆ. ಅಲ್ಲಿಂದ ಸಮ್ಮತಿ ಪಡೆದ ಮೇಲೆ ಅದನ್ನೂ ಪಾವತಿಸುವ ಭರವಸೆ ದೊರೆತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.