ಬೆಂಗಳೂರು: ಪಾದರಾಯನಪುರ ವಾರ್ಡ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಮೆರವಣಿಗೆ ಪ್ರಕರಣ ಸಂಬಂಧ, ಅವರ ಮೂವರು ಸಹೋದರರು ಹಾಗೂ ಕಾರು ಚಾಲಕನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 27 ಆಗಿದೆ.
ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದ್ದರಿಂದಾಗಿ ಇಮ್ರಾನ್ ಪಾಷ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖವಾಗಿದ್ದ ಅವರು ಜೂನ್ 7ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಇದೇ ವೇಳೆಯೇ ಅವರನ್ನು ತೆರೆದ ವಾಹನದಲ್ಲಿ ಆಸ್ಪತ್ರೆಯಿಂದ ಮನೆಯವರೆಗೂ ಮೆರವಣಿಗೆ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ಒಂದೇ ಬೈಕ್‌ನಲ್ಲಿ ಮೂವರು ಸಂಚರಿಸುತ್ತಿದ್ದರು. ಹಲವರು ಮಾಸ್ಕ್ ಧರಿಸಿರಲಿಲ್ಲ. ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಹೋಂ ಕ್ವಾರಂಟೈನ್‌ನಲ್ಲಿರಬೇಕಾದ ವ್ಯಕ್ತಿಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು. ಸಿರಸಿ ವೃತ್ತದಲ್ಲಿ ಪಟಾಕಿ ಸಿಡಿಸಲಾಯಿತು. ಮೆರವಣಿಗೆ ಕಂಡ ಸ್ಥಳೀಯರಲ್ಲೂ ಆತಂಕ ಉಂಟಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಜಗಜೀವನ್‌ರಾಮ್ ನಗರ ಠಾಣೆ ಪೊಲೀಸರು, ಕಾರ್ಪೋರೇಟರ್ ಇಮ್ರಾನ್ ಸೇರಿ ಹಲವರನ್ನು ಬಂಧಿಸಿದ್ದರು. ಇದೀಗ ಅವರ ಸಹೋದರರನ್ನು ಬಂಧಿಸಿದ್ದು, ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.
'ಸಹೋದರರು ಸಹ ಮೆರವಣಿಗೆ ನೇತೃತ್ವ ವಹಿಸಿದ್ದರು. ಅವರೇ ಜನರನ್ನು ಸೇರಿಸಿದ್ದರು. ಹೀಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಅವರೆಲ್ಲರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬರಬೇಕಿದೆ’ ಎಂದು ಪೊಲೀಸರು ಹೇಳಿದರು.
ಬಂಧಿತರಲ್ಲಿ ಒಬ್ಬಾತನಿಗೆ ಕೊರೊನಾ!
ಕೋವಿಡ್ 19 ಸೋಂಕು ತಗುಲಿದ್ದ ಪಾದರಾಯನಪುರ ವಾರ್ಡ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ನಡೆಸಿದ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕೆ ಬಂಧನಕ್ಕೊಳಗಾದ ಆರೋಪಿಯೊಬ್ಬನಿಗೂ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ.
ಮೆರವಣಿಗೆ ವೇಳೆ ಗುಂಪುಗೂಡಿದ್ದ ಆರೋಪಿಗಳನ್ನು ಮುಂಜಾಗ್ರತಾ ಕ್ರಮವಾಗಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಪ್ರತ್ಯೇಕವಾಸದಲ್ಲಿ ಇರಿಸಲಾಗಿತ್ತು. ಅಲ್ಲಿಯೇ ಅವರ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.
‘ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳಲ್ಲಿ ಒಬ್ಬನಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಉಳಿದ ಆರೋಪಿಗಳಿಗೆ ಸೋಂಕು ಇಲ್ಲ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೊರೊನಾ ಸೋಂಕಿತ ಜೊತೆಯಲ್ಲೇ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಮುಖಗವಸು ಕೂಡಾ ಧರಿಸಿರಲಿಲ್ಲ. ಪರಸ್ಪರ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.