ADVERTISEMENT

ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ: 5 ಕೋಟಿ ಲೀ. ಹೆಚ್ಚುವರಿ ನೀರು

ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 22:05 IST
Last Updated 7 ಮಾರ್ಚ್ 2020, 22:05 IST
ಕಾಂಗ್ರೆಸ್ ಸದಸ್ಯರು ಮುಖಗವಸು ಧರಿಸಿ ಸಭೆಯಲ್ಲಿ ಭಾಗವಹಿಸಿದರು –ಪ್ರಜಾವಾಣಿ ಚಿತ್ರ
ಕಾಂಗ್ರೆಸ್ ಸದಸ್ಯರು ಮುಖಗವಸು ಧರಿಸಿ ಸಭೆಯಲ್ಲಿ ಭಾಗವಹಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೇಸಿಗೆಯಲ್ಲಿ ನಗರಕ್ಕೆ ಹೆಚ್ಚುವರಿಯಾಗಿ ನಿತ್ಯ 5 ಕೋಟಿ ಲೀಟರ್‌ ನೀರು ಪೂರೈಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದರು.

ಮೇಯರ್ ಎಂ.ಗೌತಮ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೌನ್ಸಿಲ್‌ನ ವಿಶೇಷ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಪಾಲಿಕೆಗೆ ಹೊಸತಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಅರ್ಧಂಬರ್ಧ ಕಾಮಗಾರಿ ನಿರ್ವಹಿಸಿದ್ದರಿಂದ ಎದುರಾಗಿರುವ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಅವ್ಯವಸ್ಥೆ ಬಗ್ಗೆ ಜಲಮಂಡಳಿ ವಿರುದ್ಧ ಪಾಲಿಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತುಷಾರ್ ಗಿರಿನಾಥ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು.

ADVERTISEMENT

ಇದಕ್ಕೆ ಉತ್ತರ ನೀಡಿದ ಅವರು, ‘ಸದ್ಯ ದಿನಕ್ಕೆ 140 ಕೋಟಿ ಲೀಟರ್‌ ನೀರನ್ನು ಪೂರೈಸುತ್ತಿದ್ದೇವೆ. ಇನ್ನೂ ನಿತ್ಯ 10 ಕೋಟಿ ಲೀಟರ್‌ ನೀರು ಬಳಕೆಗೆ ಅವಕಾಶ ಇದೆ’ ಎಂದು ಹೇಳಿದರು.

‘ಈಗಿರುವ ಪೈಪ್‌ಲೈನ್ ಮೂಲಕವೇ ನಗರದ ಕೇಂದ್ರ ಪ್ರದೇಶದ ಬಡಾವಣೆಗಳು ಮತ್ತು 110 ಹಳ್ಳಿಯಲ್ಲಿ ಪೈಪ್‌ಲೈನ್ ಕಾಮಗಾರಿ ಮುಗಿದಿರುವ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ’ ಎಂದರು.

110 ಹಳ್ಳಿಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗಾಗಿ 2,700 ಕಿಲೋ ಮೀಟರ್‌ನಷ್ಟು ರಸ್ತೆಯನ್ನು ಅಗೆಯಲಾಗಿತ್ತು. ಇದರಲ್ಲಿ 2,075 ಕಿ.ಮೀ.ನಷ್ಟು ಕೊಳವೆ ಅಳಡಿಸುವ ಕೆಲಸ ಪೂರ್ಣಗೊಂಡಿದೆ. ವೈಟ್‌ಫೀಲ್ಡ್, ಎಚ್‌ಆರ್‌ಬಿಆರ್‌ ಬಡಾವಣೆಗಳಲ್ಲಿ ಸ್ವಲ್ಪ ಕಾಮಗಾರಿ ಬಾಕಿ ಇದೆ ಎಂದು ವಿವರಿಸಿದರು.

‘2021ರ ಮಾರ್ಚ್‌ ವೇಳೆಗೆ ಕಾಮಗಾರಿಗಳು ಸಂಪೂರ್ಣವಾಗಿ ಮುಗಿಯಲಿವೆ. ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. ಕಾಮಗಾರಿ ಮುಗಿಯುವ ತನಕ ವಾರಕ್ಕೆ ಒಂದು ದಿನ ಈ ಹಳ್ಳಿಗಳಿಗೆ ನೀರು ಪೂರೈಸಲಾಗುವುದು. ಕಾಮಗಾರಿ ಮುಗಿದ ಬಳಿಕ (2023) ಬೇಡಿಕೆಗೆ ತಕ್ಕಷ್ಟು ನೀರು ಪೂರೈಸಬಹುದು’ ಎಂದರು.

ಒಳಚರಂಡಿ ಪೈಪ್‌ಲೈನ್ ಅಳವಡಿಕೆಗಾಗಿ 1,500 ಕಿಲೋ ಮೀಟರ್‌ನಷ್ಟು ರಸ್ತೆಯನ್ನು ಅಗೆಯಲಾಗಿದೆ. 1,200 ಕಿಲೋ ಮೀಟರ್‌ನಲ್ಲಿ ಕಾಮಗಾರಿ ಮುಗಿದಿದೆ. ಶೀಘ್ರವೇ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.

'ಶರಾವತಿ ನೀರು ಅನಿವಾರ್ಯ'
ಬೆಂಗಳೂರಿಗೆ ಶರಾವತಿ ಜಲಾಶಯದಿಂದ ನೀರು ಹರಿಸುವ ಯೋಜನೆ ಸಿದ್ಧವಿದ್ದು, ಸರ್ಕಾರದ ಅನುಮೋದನೆಗೆ ಬಾಕಿ ಇದೆ ಎಂದು ತುಷಾರ್ ಗಿರಿನಾಥ್ ಹೇಳಿದರು.

‘‌ಸದ್ಯ ಇರುವ ಎಲ್ಲಾ ಕುಡಿಯುವ ನೀರಿನ ಮೂಲಗಳು ಮತ್ತು ಕಾವೇರಿ 5ನೇ ಹಂತ, ಎತ್ತಿನಹೊಳೆಯಿಂದ ನಿತ್ಯ ಬರಲಿರುವ 11 ಕೋಟಿ ಲೀಟರ್‌ ಬಿಟ್ಟರೆ ಮತ್ತೆ ನೀರಿನ ಮೂಲ ಇಲ್ಲ. 2028–29ರ ವೇಳೆಗೆ ಮತ್ತೆ ನೀರಿನ ಹಾಹಾಕಾರ ಎದುರಾಗಲಿದೆ. ಹೀಗಾಗಿ, ಶರಾವತಿಯಲ್ಲಿ ಲಭ್ಯ ಇರುವ 30 ಟಿಎಂಸಿ ಅಡಿ ನೀರಿನಲ್ಲಿ ಮೊದಲ ಹಂತದಲ್ಲಿ 15 ಟಿಎಂಸಿ ಅಡಿ ನೀರನ್ನು ತರುವ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅನಿವಾರ್ಯ’ ಎಂದರು.

15 ಟಿಎಂಸಿ ಅಡಿಯಲ್ಲಿ ಬೆಂಗಳೂರಿಗೆ 10 ಟಿಎಂಸಿ ಅಡಿ ಮತ್ತು ಶಿವಮೊಗ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ 5 ಟಿಎಂಸಿ ಅಡಿ ನೀರು ಬಳಸುವ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ನಗರಕ್ಕೆ ನಿತ್ಯ 77.5‌0 ಕೋಟಿ ಲೀಟರ್‌ಗಳಷ್ಟು ಕಾವೇರಿ ನೀರು ತರುವ 5ನೇ ಹಂತದ ₹4 ಸಾವಿರ ಕೋಟಿ ಮೊತ್ತದ ಯೋಜನೆಯಲ್ಲಿ ₹ 2 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಅವರ ದಿನಾಂಕ ಪಡೆದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

5ನೇ ಹಂತದ ಕಾಮಗಾರಿ ಮುಗಿದರೆ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ನೇರವಾಗಿ ನೀರು ಪೂರೈಕೆಯಾಗಲಿದೆ. ಉಳಿದ ನೀರನ್ನು ನಗರದ ಕೇಂದ್ರ ಪ್ರದೇಶಕ್ಕೂ ಬಳಸಲು ಸಾಧ್ಯವಿದೆ ಎಂದರು.

‘ಮತ್ತೆ ರಸ್ತೆ ಅಗೆಯೋದು ಗ್ಯಾರಂಟಿ’
ರಸ್ತೆ ಕಾಮಗಾರಿ ಮುಗಿದ ಮೇಲೆ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆಯುವ ಜಲಮಂಡಳಿ, ಮತ್ತೊಮ್ಮೆ ಇಡೀ ಬೆಂಗಳೂರಿನ ರಸ್ತೆ ಅಗೆಯುವ ಸುಳಿವು ನೀಡಿದೆ.

‘ರಾಜಕಾಲುವೆಗೆ ಒಳಚರಂಡಿ ನೀರು ಹರಿಸುತ್ತಿರುವ ಬಗ್ಗೆ ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸೆ‍ಪ್ಟೆಂಬರ್ ವೇಳೆಗೆ ರಾಜಕಾಲುವೆಗೆ ಕೊಳಚೆ ನೀರು ಹರಿಯುವುದನ್ನು ತಪ್ಪಿಸಲೇಬೇಕಿದೆ’ ಎಂದು ಜಲಮಂಡಳಿ ಅಧ್ಯಕ್ಷರು ಹೇಳಿದರು.

‘ಈ ಕಾಮಗಾರಿ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಹೀಗಾಗಿ ಕಾಮಗಾರಿಗಾಗಿ ಅಗತ್ಯ ಇರುವ ಎಲ್ಲಾ ರಸ್ತೆಗಳನ್ನು ಮುಲಾಜಿಲ್ಲದೆ ಅಗೆಯಬೇಕಾಗುತ್ತದೆ. ಬಿಬಿಎಂಪಿ ಸದಸ್ಯರು ಸಹಕಾರ ನೀಡಬೇಕು’ ಎಂದರು.

ಮಾಸ್ಕ್‌ ಧರಿಸಿದ ಕಾಂಗ್ರೆಸ್ ಸದಸ್ಯರು
ಕೋವಿಡ್ 19 ಹರಡದಂತೆ ಪಾಲಿಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಅಲ್ಲದೇ ಸದಸ್ಯರೆಲ್ಲರೂ ಸಭೆಯಲ್ಲಿ ಮುಖಗವಸು (ಮಾಸ್ಕ್) ಧರಿಸಿ ಕುಳಿತು ಪ್ರತಿಭಟನೆ ವ್ಯಕ್ತಪಡಿಸಿದರು.

‘ವೈರಸ್ ಭಯದಲ್ಲಿ ಜನ ಇದ್ದಾರೆ. ಪಾಲಿಕೆಯಿಂದ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಪೌರ ಕಾರ್ಮಿಕರಿಗೂ ಕೈಗವಸು ಹಾಗೂ ಮುಖಗವಸು ನೀಡಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್ ಹೇಳಿದರು.

ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು, ‘ಮೂರು ದಿನಗಳ ಹಿಂದೆಯೇ ಪೌರ ಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿಗಳನ್ನು ನೀಡಲಾಗಿದೆ’ ಎಂದರು.

ಇದೇ ವೇಳೆ, ರಾಜ್ಯ ಬಜೆಟ್ ಬಗ್ಗೆ ಪ್ರಸ್ತಾಪಿಸಲು ಕಾಂಗ್ರೆಸ್ ಸದಸ್ಯ ಶಿವರಾಜ್ ಮುಂದಾದರು. ಆದರೆ, ಅದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘110 ಹಳ್ಳಿ ಯೋಜನೆ ಕಾಮಗಾರಿ ಬಗ್ಗೆ ಮಾಹಿತಿ ಪಡೆಯಲು ವಿಶೇಷ ಸಭೆ ಕರೆಯಲಾಗಿದೆ. ಇಲ್ಲಿ ಬೇರೆ ವಿಷಯದ ಚರ್ಚೆಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

‘110 ಹಳ್ಳಿಗಳಿಗೆ ಸಂಬಂಧಿಸಿದ ಕಾಮಗಾರಿಗಳ ವಿಷಯವಾದರೆ ಮಾತ್ರ ಮಾತನಾಡಿ, ಇಲ್ಲದಿದ್ದರೆ ಬೇಡ’ ಎಂದು ಮೇಯರ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.