ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯ ಗಮನಕ್ಕೆ ತರದೆ, ಪೌರಕಾರ್ಮಿಕರಿಗೆ ಹೈಟೆಕ್ ವಿಶ್ರಾಂತಿ ಗೃಹಗಳ ನಿರ್ಮಿಸಲಾಗುತ್ತಿದೆ. ಟೆಂಡರ್ ಕರೆಯದೆಯೇ ನಡೆಸುವ ಈ ಕಾಮಗಾರಿ ಹಿಂದೆ ಭಾರಿ ಅಕ್ರಮ ನಡೆದಿರುವ ಶಂಕೆ ಇದೆ ಎಂದು ಕಾಂಗ್ರೆಸ್ ಸದಸ್ಯ ಎಂ.ಶಿವರಾಜ್ ಆರೋಪಿಸಿದರು.
ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪೌರಕಾರ್ಮಿಕರಿಗೆ ಸೌಲಭ್ಯ ನೀಡಿದರೆ ಒಳ್ಳೆಯದೇ. ಆದರೆ, ಅವರಿಗೆ ತೀರಾ ಅಗತ್ಯವಾಗಿರುವಸ್ಯಾನಿಟೈಸರ್, ಮುಖಗವಸು ಮತ್ತು ಇನ್ನಿತರೆ ಸುರಕ್ಷತಾ ಸೌಲಭ್ಯ ನೀಡುವುದನ್ನು ಬಿಟ್ಟು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿಶ್ರಾಂತಿ ಗೃಹ ನಿರ್ಮಿಸಬೇಕಾದ ಅಗತ್ಯ, ಅವಸರ ಏನಿತ್ತು’ ಎಂದು ಅವರು ಪ್ರಶ್ನಿಸಿದರು.
ಪೌರಕಾರ್ಮಿಕರಿಗೆ ಹೈಟೆಕ್ ವಿಶ್ರಾಂತಿ ಗೃಹ ನಿರ್ಮಿಸುವುದಾದರೂ ಕೆಟಿಪಿಪಿ ಕಾಯ್ದೆಯ 4ಜಿ ವಿನಾಯಿತಿ ಪಡೆದು ಕಾಮಗಾರಿ ನಡೆಸುವ ಬದಲು ಟೆಂಡರ್ ಕರೆದೇ ಇವುಗಳನ್ನು ನಿರ್ಮಿಸಿ ಎಂದರು.
ಇಲ್ಲದ ‘ಸೆಕ್ಷನ್’ ಅಡಿ ಆದೇಶ !
ಟೋಟಲ್ ಸ್ಟೇಷನ್ ಸರ್ವೆಯ ಕುರಿತು ಪಾಲಿಕೆ ಆಯುಕ್ತರು ಶ್ವೇತಪತ್ರ ಹೊರಡಿಸಿ, ವರದಿ ನೀಡಿದ್ದರು. ಕೆಎಂಸಿ ಕಾಯ್ದೆಯಡಿ ಎಂಟು ಆದೇಶಗಳನ್ನು ಹೊರಡಿಸಲಾಗಿದೆ. ಅದರಲ್ಲಿ, 108 (ಎ)14 ಇ ಸೆಕ್ಷನ್ ಅಡಿಯೂ ಆದೇಶ ಹೊರಡಿಸಲಾಗಿದೆ. ಆದರೆ, ಕಾಯ್ದೆಯಲ್ಲಿ ಈ ಸೆಕ್ಷನ್ ಇಲ್ಲವೇ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಪದ್ಮನಾಭ ರೆಡ್ಡಿ ಹೇಳಿದರು.
‘ಆಯುಕ್ತರು ನೀಡಿರುವ ವರದಿ ಅಪೂರ್ಣವಾಗಿದ್ದು, ಪಾಲಿಕೆಗೆ ₹251 ಕೋಟಿ ನಷ್ಟವಾಗಿರುವುದು ಕಂಡು ಬಂದಿದೆ. ಪರಿಷ್ಕೃತ ವರದಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
108 (ಎ)14 ಇ ಸೆಕ್ಷನ್ ಇಲ್ಲ ಎಂದು ಒಪ್ಪಿಕೊಂಡ ಆಯುಕ್ತರು, ಪರಿಷ್ಕೃತ ವರದಿಯನ್ನು ಮುಂದಿನ ಸಭೆಯಲ್ಲಿ ಮಂಡಿಸುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.