ADVERTISEMENT

‘ಪ್ರತಿವಾರ್ಡ್‌ಗೂ 200 ಲ್ಯಾಪ್‌ಟಾಪ್‌ ಕೊಡಿ’

ಲ್ಯಾಪ್‌ಟಾಪ್‌ ಹಂಚಿಕೆಯಲ್ಲಿ ತಾರತಮ್ಯ ಆರೋಪ: ಬಿಜೆಪಿಯಿಂದ ಧರಣಿ, ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 20:22 IST
Last Updated 27 ಫೆಬ್ರುವರಿ 2019, 20:22 IST
ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಸದಸ್ಯೆ ದೀಪಾ ನಾಗೇಶ್ ಮಾತನಾಡಿದರು -ಪ್ರಜಾವಾಣಿ ಚಿತ್ರ
ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಸದಸ್ಯೆ ದೀಪಾ ನಾಗೇಶ್ ಮಾತನಾಡಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್‌ಗೆ ತಲಾ 200 ಲ್ಯಾಪ್‌ಟಾಪ್‌ ಹಂಚಿಕೆ ಮಾಡಿದ ವಿಚಾರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಬುಧವಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು.

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದರು.

ಈ ವಿಚಾರವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಈ ಕ್ಷೇತ್ರದ ಆರು ವಾರ್ಡ್‌ಗಳಿಗೆ ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಅನುದಾನ ಬಳಸಿ ಲ್ಯಾಪ್‌ಟಾಪ್‌ ನೀಡಲಾಗಿದೆ. ಅದೇ ರೀತಿ ಎಲ್ಲ ವಾರ್ಡ್‌ಗಳಿಗೂ ತಲಾ 200 ಲ್ಯಾಪ್‌ ಟಾಪ್‌ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಧ್ವನಿಗೂಡಿಸಿದ ಶಾಸಕ ಮುನಿರತ್ನ, ‘2.30 ಲಕ್ಷ ಮತದಾರರಿರುವ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರಕ್ಕೆ 1,200 ಲ್ಯಾಪ್‌ಟಾಪ್‌ ಹಂಚಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 4.80 ಲಕ್ಷ ಮತದಾರರಿದ್ದು, ಇಲ್ಲಿಗೆ 2,500 ಲ್ಯಾಪ್‌ಟಾಪ್‌ ಹಂಚಬೇಕು’ ಎಂದು ವಿನಂತಿ ಮಾಡಿದರು.

‘ಎಸ್‌ಎಫ್‌ಸಿ ಮುಕ್ತನಿಧಿ ಬಳಕೆ ಸಂಬಂಧ ರಾಜ್ಯ ಸರ್ಕಾರ 2014ರಲ್ಲಿ ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ ಲ್ಯಾಪ್‌ಟಾಪ್‌ ಹಂಚಿಕೆಗೆ ಈ ಅನುದಾನ ಬಳಸುವಂತಿಲ್ಲ. ಟೆಂಡರ್ ಕರೆಯದೆಯೇ, ಕಾರ್ಯಾದೇಶ ನೀಡದೆಯೇ ಇದು ಸಾಧ್ಯವಾಗಿದ್ದಾದರೂ ಹೇಗೆ? ಈ ಬಗ್ಗೆ ಆಯುಕ್ತರು ಸ್ಪಷ್ಟನೆ ನೀಡಬೇಕು’ ಎಂದೂ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

‘ಎಸ್‌ಎಫ್‌ಸಿ ನಿಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಿಗದಿಪಡಿಸಿದ ಅನುದಾನದಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ಲ್ಯಾಪ್‌ಟಾಪ್‌ ನೀಡಲು ಅವಕಾಶವಿದೆ. ಟೆಂಡರ್‌ ಕರೆಯದೆಯೇ ಸರ್ಕಾರಿ ಸಂಸ್ಥೆಯಾದ ಕಿಯೋನಿಕ್ಸ್‌ ಸಂಸ್ಥೆಯಿಂದ ಲ್ಯಾಪ್‌ಟಾಪ್‌ ಖರೀದಿಸಬಹುದು’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

‘ಎಲ್ಲರು ಒಪ್ಪಿದರೆ ಸದಸ್ಯರ ಅನುದಾನದಲ್ಲಿ ಲ್ಯಾಪ್‌ಟಾಪ್‌ ಹಂಚಿಕೆ ನಿರ್ಣಯ ಕೈಗೊಳ್ಳಬಹುದು’ ಎಂದು ಮೇಯರ್‌ ಗಂಗಾಂಬಿಕೆ
ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧಪಕ್ಷದ ನಾಯಕ, ‘ವಾರ್ಡ್‌ನ ರಸ್ತೆ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಎಲ್ಲಿಂದ ಒದಗಿಸುತ್ತೀರಿ’ ಎಂದರು.

ಇದಕ್ಕೆ ಕಿವಿಗೊಡದೆ ಶೂನ್ಯವೇಳೆಯ ಚರ್ಚೆ ಆರಂಭಿಸಲು ಗಂಗಾಂಬಿಕೆ ಮುಂದಾದಾಗ ಬಿಜೆಪಿ ಸದಸ್ಯರು ಮೇಯರ್‌ ಪೀಠದ ಎದುರು ಧರಣಿ ಆರಂಭಿಸಿದರು. ಗದ್ದಲ ಜೋರಾಗಿ‌ದ್ದರಿಂದ ಮೇಯರ್‌ ಅವರು ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಶೂನ್ಯವೇಳೆ ಚರ್ಚೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ, ಲ್ಯಾಪ್‌ಟಾಪ್‌ ವಿಚಾರ ಮತ್ತೆ ಚರ್ಚೆಗೆ ಎತ್ತಿಕೊಂಡರು. ಇದಕ್ಕೆ ಮೇಯರ್ ಅವಕಾಶ ನೀಡದಿದ್ದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

ಗದ್ದಲ: ನಿರ್ಣಯ ಮಂಡನೆ‌
ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದಾಗಲೇ ಆಡಳಿತ ಪಕ್ಷದ ಎಂ.ಕೆ.ಗುಣಶೇಖರ್‌ ಅವರು ಸಭೆಯ ನಿರ್ಣಯಗಳನ್ನು ಓದಲು ಶುರುಮಾಡಿದರು. ಆಗ ಪದ್ಮನಾಭ ರೆಡ್ಡಿ ಅವರು ನಿರ್ಣಯಗಳ ಪ್ರತಿಯನ್ನು ಕಿತ್ತುಕೊಂಡರು. ಆಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಯನ್ನು ಹಿಂಪಡೆದ ಆಡಳಿತ ಪಕ್ಷದ ಸದಸ್ಯರು ನಿರ್ಣಯಗಳನ್ನು ಮಂಡಿಸಿ ಗದ್ದಲದ ನಡುವೆಯೇ ಅನುಮೋದನೆ ಪಡೆದರು.

ಮೇಲ್ಸೇತುವೆ: ಜಾಹೀರಾತಿಗೆ ಆಕ್ಷೇಪ
‘ಹೆಬ್ಬಾಳ ಮೇಲ್ಸೇತುವೆ ಬಳಿ ಖಾಸಗಿ ಕಂಪನಿಯವರು ಜಾಹೀರಾತು ಅಳವಡಿಸುವುದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನುಮತಿ ನೀಡಿದೆ. ಪಾಲಿಕೆಯು ನಗರದಲ್ಲಿ ಖಾಸಗಿ ಜಾಹೀರಾತು ನಿಷೇಧಿಸಿರುವಾಗ ಬಿಡಿಎ ಇದಕ್ಕೆ ಅನುಮತಿ ನೀಡಲು ಹೇಗೆ ಸಾಧ್ಯ’ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಸಭೆಯ ಗಮನ ಸೆಳೆದರು.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಬಿಡಿಎ ಯಾವುದೇ ಜಾಹೀರಾತು ಅಳವಡಿಕೆಗೆ ಅನುಮತಿ ನೀಡುವುದಿದ್ದರೂ ನಮ್ಮ ಗಮನಕ್ಕೆ ತರಬೇಕು. ನಾವು ಯಾರಿಗೂ ಜಾಹೀರಾತು ಅಳವಡಿಸಲು ಅನುಮತಿ ನೀಡಿಲ್ಲ. ಹಾಗಾಗಿ ಇದು ಅಕ್ರಮ. ಇದರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಪ್ರಮುಖ ನಿರ್ಣಯಗಳು

* 2400 ಚ.ಅಡಿ ವಿಸ್ತೀರ್ಣದನಿವೇಶನಗಳಲ್ಲಿ ನಿರ್ಮಿಸುವ ವಸತಿ ಕಟ್ಟಡಗಳಿಗೆ ನೀರಿನ ಸಂಪರ್ಕಕ್ಕೆ ಸ್ವಾಧೀನಾನುಭವ ಪತ್ರ ಕಡ್ಡಾಯ ಎಂಬ ಆದೇಶ ಹಿಂಪಡೆಯುವಂತೆ ಜಲಮಂಡಳಿಯನ್ನು ಕೋರಲು ನಿರ್ಣಯ

* ಟಿ.ರಾಜ (ಆಟೋ ರಾಜ) ಕೋರಿಕೆ ಮೇರೆಗೆ, ಕೇವಲ ₹ 10 ಶುಲ್ಕ ಪಡೆದು ಅನಾಥ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲು ಅವಕಾಶ

* ನ್ಯಾಷನಲ್ ಕಾಲೇಜು ಮೈದಾನದಲ್ಲಿ 5 ದಿನಗಳ ಬದಲು 11 ದಿನ ‘ಬೆಂಗಳೂರು ಗಣೇಶ ಉತ್ಸವ’ ನಡೆಸಲು ಒಪ್ಪಿಗೆ

* ನಂದಿನಿ ಬಡಾವಣೆಯ ಬ್ಯಾಡ್ಮಿಂಟನ್‌ ಕೋರ್ಟ್‌ಗೆ ‘ಶಿವಕುಮಾರ ಸ್ವಾಮೀಜಿ’ ಹೆಸರು

* ಜಾಲಹಳ್ಳಿ ಕ್ರಾಸ್‌ ವೃತ್ತಕ್ಕೆ ‘ಕವಿ ಗೋಪಾಲಕೃಷ್ಣ ಅಡಿಗ ವೃತ್ತ’ ಎಂದು ನಾಮಕರಣ

* ಎನ್‌.ಆರ್.ಕಾಲೊನಿ 4ನೇ ಅಡ್ಡ ರಸ್ತೆಗೆ ‘ವಿದ್ವಾನ್‌ ವೀಣೆ ರಾಜಾರಾವ್‌ ರಸ್ತೆ’ ಎಂದು ನಾಮಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.