ADVERTISEMENT

ಕೋವಿಡ್‌: ರೆಸ್ಟೋರೆಂಟ್‌ಗಳಲ್ಲಿ ಹೆಚ್ಚುತ್ತಿದೆ ಸೋಂಕು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 2:42 IST
Last Updated 30 ಮಾರ್ಚ್ 2021, 2:42 IST
   

ಬೆಂಗಳೂರು: ಪಬ್‌ ಮತ್ತು ರೆಸ್ಟೋರೆಂಟ್‌ ಸಿಬ್ಬಂದಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಭಾನುವಾರ ಪಬ್‌ ಒಂದನ್ನು ಕ್ಲಸ್ಟರ್‌ ಎಂದು ಘೋಷಿಸಲಾಗಿದ್ದರೆ, ಸೋಮವಾರ ರೆಸ್ಟೋರೆಂಟ್ ಒಂದರಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು, ಇದನ್ನು ಕೂಡಾ ಕೋವಿಡ್‌ ಕ್ಲಸ್ಟರ್‌ ಎಂದು ಘೋಷಿಸಲಾಗಿದೆ.

ಪೂರ್ವ ವಲಯದ ವಾರ್ಡ್‌ ಸಂಖ್ಯೆ 80ರ ವ್ಯಾಪ್ತಿಯಲ್ಲಿರುವ ಇಂದಿರಾನಗರದ ರೆಸ್ಟೋರೆಂಟ್‌ ಒಂದರಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದೆ. ಈ ಕ್ಲಸ್ಟರ್‌ನಲ್ಲಿ ಒಟ್ಟು 110 ಜನರಿದ್ದಾರೆ.

‘ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 99 ಮಂದಿ ಹಾಗೂ ದ್ವಿತೀಯ ಹಂತದಲ್ಲಿ ಸಂಪರ್ಕಕ್ಕೆ ಬಂದ 119 ಜನರನ್ನು ಪತ್ತೆ ಹಚ್ಚಲಾಗಿದೆ. ಸೋಂಕಿತರು ಸೋಂಕಿನ ಸೌಮ್ಯ ಲಕ್ಷಣ ಹೊಂದಿದ್ದಾರೆ. 11 ಮಂದಿಗೂ ಮನೆಯಲ್ಲೇ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಬಿಬಿಎಂಪಿ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

16 ಜನರಿಗೆ ಸೋಂಕು:ನಗರದ ಉತ್ತರ ಭಾಗದಲ್ಲಿರುವ ಪಬ್‌ವೊಂದರ 16 ಸಿಬ್ಬಂದಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ.

‘ಹೋಟೆಲ್, ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಮತ್ತಿಕೆರೆಯ ನ್ಯೂ ಬಿಇಎಲ್‌ ರಸ್ತೆಯಲ್ಲಿರುವ ‘ದಿ ಪಬ್‌’ನಲ್ಲಿನ ಸಿಬ್ಬಂದಿಯನ್ನೂ ಪರೀಕ್ಷಿಸಿದಾಗ 16 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪಬ್‌ನಲ್ಲಿ ಒಟ್ಟು 87 ಜನ ಕೆಲಸ ಮಾಡುತ್ತಿದ್ದಾರೆ. ಸೋಂಕು ದೃಢಪಟ್ಟಿರುವವರಿಗೆ ಸೋಂಕಿನ ಸಾಮಾನ್ಯ ಲಕ್ಷಣಗಳಿಲ್ಲ. ಅವರೆಲ್ಲರೂ ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದಾರೆ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಎನ್. ಚಿದಾನಂದ ತಿಳಿಸಿದರು.

ಯಲಹಂಕ ಮತ್ತು ದಾಸರಹಳ್ಳಿ ವಲಯದಲ್ಲಿ ಹೆಚ್ಚು ಕ್ಲಸ್ಟರ್‌ಗಳು ನಿರ್ಮಾಣವಾಗಿವೆ. ಪಶ್ಚಿಮ ವಲಯದಲ್ಲಿ ಶೇ 78ರಷ್ಟು ಪ್ರಕರಣಗಳು ವರದಿಯಾಗಿದ್ದು, ಶೇ 21ರಷ್ಟು ಮಂದಿ ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.