ಬೆಂಗಳೂರು: ಕೋವಿಡ್ ನಿಯಂತ್ರಣ ಚಟುವಟಿಕೆ ಸಲುವಾಗಿ ಬಿಬಿಎಂಪಿಯು ತನ್ನ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಟ್ಟು 141 ವೈದ್ಯರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದೆ. ಆದರೆ, ಇವರಿಗೆ ಈ ಸಲ ಈ ಹಿಂದಿಗಿಂತ ಅರ್ಧದಷ್ಟು ಗೌರವ ಧನವನ್ನು ಮಾತ್ರ ನಿಗದಿಪಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಪತ್ತೆ ಕಾರ್ಯ, ಕೋವಿಡ್ ಪರೀಕ್ಷೆ ನಡೆಸುವುದು, ಸೊಂಕಿತರಿಗೆ ಚಿಕಿತ್ಸೆ ನೀಡುವುದು, ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುವವರ ಆರೋಗ್ಯದ ಮೇಲೆ ನಿಗಾ ಇಡುವುದು, ಸಂಚಾರ ಟ್ರಯಾಜಿಂಗ್ ಹಾಗೂ ಲಸಿಕಾಕರಣ ಕಾರ್ಯಗಳನ್ನು ಕೈಗೊಳ್ಳಲು ತಲಾ 141 ವೈದ್ಯರು, ಗಂಟಲ/ ಮೂಗಿನ ದ್ರವದ ಮಾದರಿ ಸಂಗ್ರಾಹಕರು ಹಾಗೂ ಡೇಟಾ ಎಂಟ್ರಿ ಸಿಬ್ಬಂದಿಯನ್ನು ಒಂದು ತಿಂಗಳ ಅವಧಿಗೆ ಹೊರ ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.
ಎರಡು ವರ್ಷಗಳ ಹಿಂದೆ ಇದೇ ಉದ್ದೇಶಕ್ಕಾಗಿ ಪಿಎಚ್‌ಸಿಗಳಿಗೆ ವೈದ್ಯರನ್ನು ನೇಮಿಸಿಕೊಂಡಾಗ ಬಿಬಿಎಂಪಿಯು ಅವರಿಗೆ ₹ 45,000 ಮಾಸಿಕ ವೇತನ ಹಾಗೂ ₹ 15,000 ಪ್ರೊತ್ಸಾಹಕ ಭತ್ಯೆ ಸೇರಿ ತಿಂಗಳಿಗೆ ₹ 60,000 ನೀಡಿತ್ತು. ಆದರೆ, ಬುಧವಾರ (ಇದೇ 4ರಂದು) ಹೊರಡಿಸಿರುವ ನೇಮಕಾತಿ ಆದೇಶದ ಪ್ರಕಾರ ವೈದ್ಯರಿಗೆ ತಿಂಗಳಿಗೆ ₹ 30,000 ವೇತನ ನಿಗದಿಪಡಿಸಲಾಗಿದೆ. ಇತರೆ ವೆಚ್ಚ ಕಡಿತಗೊಳಿಸಿದ ಬಳಿಕ ಅವರ ಕೈಸೇರುವುದು ₹ 27,000 ಮಾತ್ರ.
ಗಂಟಲ/ ಮೂಗಿನ ದ್ರವದ ಮಾದರಿ ಸಂಗ್ರಾಹಕರಿಗೆ ಮತ್ತು ಹಾಗೂ ಡೇಟಾ ಎಂಟ್ರಿ ಸಿಬ್ಬಂದಿಗೆ ತಿಂಗಳಿಗೆ ತಲಾ ₹ 17 ಸಾವಿರ ವೇತನ ನಿಗದಿಪಡಿಸಲಾಗಿದೆ. ಅವರಿಗೆ ಈ ಹಿಂದೆ ₹ 2 ಸಾವಿರ ಪ್ರೋತ್ಸಾಹಧನ ಸೇರಿ ತಿಂಗಳಿಗೆ ₹ 19 ಸಾವಿರ ನೀಡಲಾಗುತ್ತಿತ್ತು. ಈ ಸಲ ಪ್ರೋತ್ಸಾಹ ಧನವನ್ನು ಕೈಬಿಡಲಾಗಿದೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಗತ್ಯ ವಸ್ತುಗಳ ದರ ಹೆಚ್ಚಾಗಿದೆ. ಜೀವನ ನಿರ್ವಹಣೆ ವೆಚ್ಚ ದುಬಾರಿಯಾಗಿರುವ ಈ ಸಂದರ್ಭದಲ್ಲಿ ವೇತನವನ್ನು ಹೆಚ್ಚಿಸುವ ಬದಲು ಅರ್ಧದಷ್ಟು ಕಡಿಮೆ ಮಾಡಿರುವುದು ಸರಿಯಲ್ಲ. ವೈದ್ಯರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ವೈದ್ಯರಿಗೆ ಕಳೆದ ಸಾಲಿನಲ್ಲಿ ನೀಡುತ್ತಿದ್ದಷ್ಟೇ ವೇತನ ನೀಡುವ ಮೂಲಕ ಅವರ ವೃತ್ತಿ ಗೌರವಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಚಾಮರಾಜಪೇಟೆಯ ಚಂದ್ರಶೇಖರ ಪುಟ್ಟಪ್ಪ ಅವರು ಬಿಬಿಎಂಪಿಯನ್ನು ಒತ್ತಾಯಿಸಿದ್ದಾರೆ.
‘ಕೋವಿಡ್ ತೀವ್ರತೆ ಎರಡು ವರ್ಷಗಳ ಹಿಂದೆ ಇದ್ದಷ್ಟು ಈಗ ಇಲ್ಲ. ಬಿಬಿಎಂಪಿಯ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಹಿರಿಯ ಅಧಿಕಾರಿಗಳು ವೈದ್ಯರ ವೇತನ ನಿಗದಿಪಡಿಸಿದ್ದಾರೆ. ಕಡಿಮೆ ವೇತನ ನಿಗದಿಪಡಿಸಿದರೂ ವೈದ್ಯರ ಕೊರತೆ ಆಗಿಲ್ಲ’ ಎಂದು ಬಿಬಿಎಂಪಿ
ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.