ADVERTISEMENT

‘ಪಸಾರ’ ವಂಚನೆ: ಗುತ್ತಿಗೆದಾರನ ಡಿಬಾರ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 23:32 IST
Last Updated 2 ಆಗಸ್ಟ್ 2024, 23:32 IST
   

ಬೆಂಗಳೂರು: ಪೊಲೀಸರ ಹೆಸರಿನಲ್ಲಿ ನಕಲಿ ಪರಿಶೀಲನಾ ಪ್ರಮಾಣಪತ್ರ ಸೃಷ್ಟಿಸಿ ಖಾಸಗಿ ಭದ್ರತಾ ಏಜೆನ್ಸಿಗಳ ನಿಯಂತ್ರಣ ಕಾಯ್ದೆಯಡಿ (ಪಸಾರ) ಪರವಾನಗಿ ಪಡೆದ ಆರೋಪ ಎದುರಿಸುತ್ತಿರುವ ಗುತ್ತಿಗೆದಾರ ಭುವನೇಶ್ವರಿ ಎಂಟರ್‌ಪ್ರೈಸಸ್‌ನ ಎ.ವಿ. ಗಿರೀಶ್‌ ಅವರನ್ನು ಮೂರು ವರ್ಷಗಳ ಅವಧಿಗೆ ಡಿಬಾರ್‌ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ.

ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿರುವುದನ್ನು ಮುಚ್ಚಿಟ್ಟಿದ್ದ ಗಿರೀಶ್‌, ನಕಲಿ ಪೊಲೀಸ್‌ ಪರಿಶೀಲನಾ ವರದಿಯನ್ನು ಸಲ್ಲಿಸಿ ಪಸಾರ ಪರವಾನಗಿ ಪಡೆದಿರುವುದು ಗೃಹ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಭುವನೇಶ್ವರಿ ಎಂಟರ್‌ಪ್ರೈಸಸ್‌ಗೆ ನೀಡಿದ್ದ ಗುತ್ತಿಗೆ ಕಾರ್ಯಾದೇಶಗಳನ್ನು ರದ್ದುಪಡಿಸಿ ಬಿಬಿಎಂಪಿ ಆದೇಶ ಹೊರಡಿಸಿತ್ತು. ಆ ಬಳಿಕ ಡಿಬಾರ್‌ ಮಾಡುವ ಸಂಬಂಧ ಗಿರೀಶ್‌ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ನೋಟಿಸ್‌ ಸ್ವೀಕರಿಸಿರಲಿಲ್ಲ.

ADVERTISEMENT

ಭುವನೇಶ್ವರಿ ಎಂಟರ್‌ಪ್ರೈಸಸ್‌ಗೆ ನೀಡಿದ್ದ ಪಸಾರ ಪರವಾನಗಿಯನ್ನು ಗೃಹ ಇಲಾಖೆ ರದ್ದುಗೊಳಿಸಿದೆ. ಈ ಎಲ್ಲ ಕಾರಣಗಳನ್ನು ಆಧರಿಸಿ, ಮೂರು ವರ್ಷಗಳವರೆಗೆ ಗಿರೀಶ್‌ ಬಿಬಿಎಂಪಿಯ ಯಾವುದೇ ಟೆಂಡರ್‌ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಡಿಬಾರ್‌ ಮಾಡಿ ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ಜುಲೈ 30ರಂದು ಆದೇಶ ಹೊರಡಿಸಿದ್ದಾರೆ.

ಶರಣಾಗಲು ಹೈಕೋರ್ಟ್‌ ನಿರ್ದೇಶನ:

ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುವ ಗಿರೀಶ್, ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ಪೀಠವು, ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ಆರೋಪಿಗೆ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.