ADVERTISEMENT

ಬೆಂಗಳೂರು | ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ರಸ್ತೆ: ಜನವರಿಗೆ ಟೆಂಡರ್

ಆರ್. ಮಂಜುನಾಥ್
Published 5 ನವೆಂಬರ್ 2024, 23:52 IST
Last Updated 5 ನವೆಂಬರ್ 2024, 23:52 IST
   

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಎರಡು ಬೃಹತ್‌ ಯೋಜನೆಗಳಿಗೆ ಬಿಬಿಎಂಪಿ ಹಾಗೂ ಬಿಡಿಎ ಅಂತಿಮ ರೂಪ ನೀಡಿವೆ. ಸುರಂಗ ರಸ್ತೆ ಮೂಲಕ ನಗರದ ಕೇಂದ್ರ ಭಾಗದಲ್ಲಿ ಸುಗಮ ಸಂಚಾರಕ್ಕೆ ಬಿಬಿಎಂಪಿ ಅಣಿಯಾಗಿದ್ದರೆ, ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ವರ್ತುಲ ರಸ್ತೆಗೆ ಹೊಸ ಹೆಸರು ನೀಡಿ, ಯೋಜನೆ ಅನುಷ್ಠಾನಗೊಳಿಸಲು ಬಿಡಿಎ ಸಜ್ಜಾಗಿದೆ.

ಬೆಂಗಳೂರು: ನಗರದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ಚೀನಾ ತಯಾರಿಕೆಯ ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ಬಳಸಲು ಉದ್ದೇಶಿಸಲಾಗಿದ್ದು, ಜನವರಿಯಲ್ಲಿ ಯೋಜನೆಗೆ ಟೆಂಡರ್‌ ಆಹ್ವಾನಿಸಲು ಬಿಬಿಎಂಪಿ ಯೋಜಿಸಿದೆ. ಅಲ್ಲದೆ, ಯೋಜನೆ ವೆಚ್ಚವೂ ಅಧಿಕವಾಗಿದೆ.

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಆರು ಪಥಗಳ ಸುರಂಗ ರಸ್ತೆಯನ್ನು ನಿರ್ಮಿಸುವ ಯೋಜನೆ ಹೊಂದಿದ್ದು, ಇದರಲ್ಲಿ ಎರಡು ರಸ್ತೆಗಳನ್ನು ಬಿಎಂಟಿಎಸ್‌ ಬಸ್‌ಗಳಿಗೇ ಮೀಸಲಿಡಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್‌ ಬಸ್‌ಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಅಲ್ಲದೆ, ವಾಣಿಜ್ಯ ಉದ್ದೇಶ ಮಳಿಗೆಗಳು, ಮಾಲ್‌ಗಳು, ಬಹುಮಹಡಿ ಪಾರ್ಕಿಂಗ್‌ ಕಟ್ಟಡಗಳನ್ನೂ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ADVERTISEMENT

ಒಂದು ಕಿ.ಮೀ ಸುರಂಗ ರಸ್ತೆ ₹450 ಕೋಟಿ ವೆಚ್ಚವಾಗಬಹುದು ಎಂದು ಈ ಹಿಂದೆ ಯೋಜಿಸಲಾಗಿತ್ತು. ಆದರೆ, ಬಿಬಿಎಂಪಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಿರುವ ಡಿಪಿಆರ್‌ ಪ್ರಕಾರ, ಒಂದು ಕಿ.ಮೀ ಸುರಂಗ ರಸ್ತೆಗೆ ₹600 ಕೋಟಿಯಿಂದ ₹750 ಕೋಟಿವರೆಗೆ ವೆಚ್ಚವಾಗಲಿದೆ.

ಸುರಂಗ ರಸ್ತೆ ಯೋಜನೆಗೆ ಸುಮಾರು 56 ಎಕರೆ ಭೂಸ್ವಾಧೀನದ ಅಗತ್ಯವಿದ್ದು, ಇದರಲ್ಲಿ ಶೇ 50ರಷ್ಟು ಭೂಮಿಯನ್ನು ಮರುಬಳಕೆ ಮಾಡಿಕೊಳ್ಳಲಾಗುತ್ತದೆ. ವಾಣಿಜ್ಯ ಉದ್ದೇಶದ ಜೊತೆಗೆ ಸುರಂಗ ರಸ್ತೆ ಮೇಲಿನ ಸೌಂದರ್ಯೀಕರಣಕ್ಕೆ ಉಪಯೋಗಿಸಿಕೊಳ್ಳಲು ಚಿಂತಿಸಲಾಗಿದೆ.

‘ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಶೇ 70ರಷ್ಟು ವೆಚ್ಚವನ್ನು ಖಾಸಗಿ ಗುತ್ತಿಗೆದಾರರು ಭರಿಸುವಂತೆ ಯೋಜನೆ ರೂಪಿಸಲಾಗಿದೆ. ಉಳಿದ ಶೇ 30ರಷ್ಟು ಹಣವನ್ನು ಬಿಬಿಎಂಪಿ ಹಣಕಾಸು ಸಂಸ್ಥೆಗಳಿಂದ ಪಡೆಯಲು ಯೋಜಿಸಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

‘ಭಾರತ ಮತ್ತು ಚೀನಾದ ಸಂಬಂಧ ಉತ್ತಮಗೊಳ್ಳುತ್ತಿದ್ದು, ಟಿಬಿಎಂಗಳನ್ನು ಚೀನಾದಿಂದ ನೇರವಾಗಿ ಆಮದು ಮಾಡಿಕೊಳ್ಳಲು ಯೋಜಿಸಲಾಗುತ್ತಿದೆ. ಯೂರೋಪಿನ ಟಿಬಿಎಂಗಳ ಬದಲು ಚೀನಾ ಟಿಬಿಎಂಗಳನ್ನು ಬಳಸಿದೆ ಯೋಜನೆಯ ವೆಚ್ಚ ಶೇ 10ರಷ್ಟು ಕಡಿಮೆಯಾಗಲಿದೆ. ಈ ಯೋಜನೆಯನ್ನು ನಾವು ಇನ್ನು ಆರು ತಿಂಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಜನವರಿಯಲ್ಲಿ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಎಲ್ಲರೂ ಅಚ್ಚರಿಯಿಂದ ನೋಡುವಂತಹ ರೀತಿಯಲ್ಲಿ ಸುರಂಗ ರಸ್ತೆಯನ್ನು ವಿಶ್ವಮಟ್ಟದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಎಲ್ಲ ರೀತಿಯ ಸೌಲಭ್ಯಗಳನ್ನೂ ಈ ರಸ್ತೆಯಲ್ಲಿ ಒದಗಿಸಲಾಗುತ್ತದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಹೇಳಿದರು.

ಸುರಂಗ ರಸ್ತೆ ಯೋಜನೆಯನ್ನು ನಾವು ಇನ್ನು ಆರು ತಿಂಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದೇವೆ
ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ
ಸುರಂಗ ರಸ್ತೆ
18 ಕಿ.ಮೀ ಉದ್ದ ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸುಮಾರು ₹750 ಕೋಟಿ ಪ್ರತಿ ಕಿ.ಮೀ ಸುರಂಗ ರಸ್ತೆಗೆ ವೆಚ್ಚ 2025ರ ಜನವರಿ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನ
ಪ್ರವೇಶ–ನಿರ್ಗಮನಕ್ಕೆ ‘ಪಾಯಿಂಟ್‌’
ಹೆಬ್ಬಾಳ ಕೆರೆಯ ಮುಂಭಾಗದಿಂದ ಉತ್ತರ–ದಕ್ಷಿಣ ಸುರಂಗ ರಸ್ತೆ ಕಾರಿಡಾರ್‌ ಆರಂಭವಾಗಿ, ಕೇಂದ್ರೀಯ ರೇಷ್ಮೆ ಮಂಡಳಿಯವರೆಗೆ ಸಾಗಲಿದೆ. ಕೆರೆಯ ಮುಂಭಾಗ ವಾಹನಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶವಿರುತ್ತದೆ. ಇದಾದ ನಂತರ, ಹೆಬ್ಬಾಳ ಪಶುವೈದ್ಯ ಆಸ್ಪತ್ರೆ ಬಳಿ ವಾಹನಗಳ ನಿರ್ಗಮನ ಮತ್ತು ಪ್ರವೇಶಕ್ಕಾಗಿ ‘ಪಾಯಿಂಟ್‌’ ನಿರ್ಮಿಸಲಾಗುತ್ತದೆ. ಮೇಖ್ರಿ ವೃತ್ತದ ಅರಮನೆ ಮೈದಾನ, ಗಾಲ್ಫ್‌ ಮೈದಾನ ಮತ್ತು ಮಹಾರಾಣಿ ಕಾಲೇಜು, ಲಾಲ್‌ ಬಾಗ್‌ ಬಳಿಯಲ್ಲಿ ‘ಪಾಯಿಂಟ್‌’ ನಿರ್ಮಿಸಲು ಸದ್ಯಕ್ಕೆ ಯೋಜಿಸಲಾಗಿದೆ. ಸರ್ಜಾಪುರ ರಸ್ತೆ ಹಾಗೂ ಹೊರ ವರ್ತುಲ ರಸ್ತೆ ಕಡೆಯಲ್ಲೂ ಪ್ರವೇಶ, ನಿರ್ಗಮನ ನೀಡಲು ಉದ್ದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.