ADVERTISEMENT

ದೋಷಯುಕ್ತ ಗುತ್ತಿಗೆ: ₹13 ಕೋಟಿ ಬಿಡುಗಡೆ

ದೊಡ್ಡ ವರ್ಗಾವಣೆ ಕೇಂದ್ರಗಳ ಸ್ಥಾ‍ಪನೆಗೆ ತರಾತುರಿ: ₹1,100 ಕೋಟಿ ವೆಚ್ಚಕ್ಕೆ ಸಿದ್ಧತೆ

ಆರ್. ಮಂಜುನಾಥ್
Published 20 ಜೂನ್ 2023, 0:26 IST
Last Updated 20 ಜೂನ್ 2023, 0:26 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಕಸದ ವಿಂಗಡಣೆಗೆ ದೊಡ್ಡ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸುವ ಟೆಂಡರ್‌ ಪ್ರಕರಣ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದ್ದರೂ, ಗುತ್ತಿಗೆದಾರರಿಗೆ ₹13 ಕೋಟಿ ಹಣವನ್ನು ತರಾತುರಿಯಲ್ಲಿ ಬಿಬಿಎಂಪಿ ಬಿಡುಗಡೆ ಮಾಡಿದೆ.

‘ಸಣ್ಣ ವರ್ಗಾವಣೆ ಕೇಂದ್ರಕ್ಕೆ’ ಕಸ ವಿಂಗಡಣೆಗೆ ನೀಡಲಾಗುವ ಹಣಕ್ಕಿಂತ ದುಪ್ಪಟ್ಟು ವೆಚ್ಚವನ್ನು ದೊಡ್ಡ ವರ್ಗಾವಣೆ ಕೇಂದ್ರದ ನಿರ್ವಹಣೆ ನೀಡಲಾಗುತ್ತಿದೆ. ಇದು ಬಿಬಿಎಂಪಿಗೆ ಹೊರೆಯಾಗುತ್ತಿದೆ ಎಂದು ದೂರಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್‌ಗಳಿಗೆ ಸಂಬಂಧಿಸಿದಂತೆ 89 ಪ್ಯಾಕೇಜ್‌ಗಳನ್ನು ಮಾಡಿ ಟೆಂಡರ್‌ ಕರೆಯಲಾಗಿತ್ತು. ಈ ಟೆಂಡರ್‌ನಲ್ಲಿ ನಿಯಮಗಳು ಉಲ್ಲಂಘನೆಯಾಗಿದ್ದು, ಗುತ್ತಿಗೆದಾರರು ಸಲ್ಲಿಸಿರುವ ‘ಕ್ರೆಡೆಟ್‌ ಲೈನ್‌/ ಬ್ಯಾಂಕ್‌ ಸರ್ಟಿಫಿಕೇಟ್’ಗಳು ಕ್ರಮಬದ್ಧವಾಗಿಲ್ಲ. ಮಾನದಂಡಗಳಿಗೆ ವಿರುದ್ಧವಾಗಿದ್ದರೂ ‘ಪರಿಶುದ್ಧ ವೆಂಚರ್ಸ್’ ಅವರಿಗೆ ಕಾರ್ಯಾದೇಶ ನೀಡಲಾಗಿದೆ. ಇದನ್ನು ತಡೆಯಬೇಕು ಎಂದು ವಿಧಾನಪರಿಷತ್‌ನಲ್ಲಿ ಚರ್ಚೆಯಾಗಿತ್ತು.

ADVERTISEMENT

ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಯಾವುದೇ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಫೆಬ್ರುವರಿ 23ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಆದರೆ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನ ₹13 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಪಿ.ಆರ್‌. ರಮೇಶ್‌ ದೂರಿದರು.

ಆರು ಕಾಂಪ್ಯಾಕ್ಟರ್‌, 45 ಕಂಟೈನರ್‌, 21 ಟ್ರಕ್‌, 21 ಹೂಕ್‌ ಲೋಡರ್‌ಗಳು ಕಾರ್ಯನಿರ್ವಹಿಸಿ, ಪ್ರತಿದಿನ ತಲಾ 150 ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ತಲಾ 25 ವಾರ್ಡ್‌ಗಳಿಂದ ಸಂಗ್ರಹಿಸುವ ಮೂರು ದೊಡ್ಡ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಮುಂದಾಗಿದೆ. ನಗರದ ಕೇಂದ್ರ ಭಾಗದಲ್ಲಿ ಬೃಹತ್‌ ಮಟ್ಟದಲ್ಲಿ ತ್ಯಾಜ್ಯ ವಿಂಗಡಣೆ ಮಾಡಿದರೆ ಸುತ್ತಮುತ್ತ ಉಂಟಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಕಾರ್ಯಾದೇಶವನ್ನೂ ನೀಡಿದೆ. ಇದರಲ್ಲಿ ಸಾಕಷ್ಟು ಅಕ್ರಮಗಳು, ನಿಯಮಬಾಹಿರ ದಾಖಲೆಗಳು, ಮಾನದಂಡಗಳ ಉಲ್ಲಂಘನೆ ಬಗ್ಗೆ ಲೋಕಾಯುಕ್ತಕ್ಕೂ ದೂರು ದಾಖಲಾಗಿದೆ. ಇಷ್ಟಾದರೂ ಹಣ ವ್ಯಯ ಮಾಡಲು ಬಿಎಸ್‌ಡಬ್ಲ್ಯುಎಂಎಲ್‌ ಮುಂದಾಗಿದ್ದು, ಬಿಬಿಎಂಪಿ ಮೂಲಕ ಗುತ್ತಿಗದಾರರಿಗೆ ಹಣವನ್ನೂ ಪಾವತಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.