ಬೆಂಗಳೂರು: ನಗರದಲ್ಲಿ ಎಂಟು ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಕಡಿತ ಮಾಡಿದ್ದ ಬಿಬಿಎಂಪಿ ಪೂರ್ವ ವಲಯದ ಈ ಹಿಂದಿನ ಜಂಟಿ ಆಯುಕ್ತ ಜಿ.ಎಂ. ರವೀಂದ್ರ ಅವರನ್ನು ಅಮಾನತುಗೊಳಿಸಲು ಬಿಬಿಎಂಪಿ ಶಿಫಾರಸು ಮಾಡಿದೆ.
ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಾಗಿರುವ ಇವರು ಬಿಬಿಎಂಪಿಯಲ್ಲಿ ಎರವಲು ಸೇವೆ ಸಲ್ಲಿಸುತ್ತಿದ್ದರು.
‘ಪೂರ್ವ ವಲಯದಲ್ಲಿ ಟೋಟಲ್ ಸ್ಟೇಷನ್ ಸರ್ವೆ ನಡೆಸಿದ್ದರು. ದೊಮ್ಮಲೂರು ಸಸ್‌ಕೆನ್ ಟೆಕ್ನಾಲಜಿ, ಅಶೋಕ ಹೋಟೆಲ್, ಎ.ಎಸ್.ಕೆ. ಬ್ರದರ್ಸ್, ರಾಯಲ್ ಟರ್ಜಿಡ್, ಒಬೆರಾಯ್ ಸಂಸ್ಥೆ, ಶ್ರೀರಾಮ್ ಲೀಲಾ ಡೆವಲಪರ್ಸ್, ಈಸ್ಟ್‌ವೆಸ್ಟ್ ಹೋಟೆಲ್ ಮತ್ತು ಎಲೇಕ್ಸೈರ್ ಎಂಟರ್ ಸಂಸ್ಥೆಗಳ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದಾರೆ. ಆ ಮೂಲಕ ಪಾಲಿಕೆಯ ಬೊಕ್ಕಸಕ್ಕೆ ₹63 ಕೋಟಿ ನಷ್ಟ ಉಂಟು ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ. ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲು ಬಿಬಿಎಂಪಿ ಹೆಚ್ಚುವರಿ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ರವೀಂದ್ರ ವಿರುದ್ಧದ ಆರೋಪದ ಬಗ್ಗೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ತೆರಿಗೆ ವಿನಾಯಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಾಲಿಕೆ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾಗಿ ಒತ್ತಡ ಹೇರಿದ್ದರು.
ಈ ಹಿನ್ನೆಲೆಯಲ್ಲಿ ಎರವಲು ಸೇವೆಯನ್ನು ಮೊಟಕುಗೊಳಿಸಿ ಮೂಲ ಇಲಾಖೆಗೆ ಕಳೆದ ವಾರ ವಾಪಸು ಕಳುಹಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.